ಪೋಸ್ಟ್‌ಗಳು

ಕನಸಿಗೆ ಬೇಲಿಯುಂಟೆ

ಸೂರ್ಯನ ಕಿರಣಗಳ ಸ್ಪರ್ಷಕ್ಕಾಗಿಯೇ ಭೂಮಿಯೊಳಗಿಂದ ಮೋಳಕೆಯೊಡೆದು ಹೊರಬರುವ ಬೀಜಕ್ಕೆ ಕಿರಣಗಳು ಸ್ಪರ್ಷವಾದರೆ ಆ ಬೀಜ - ಕಿರಣಗಳ ಮಿಲನ ಬಣ್ಣಿಸಲು ಪದಗಳುಂಟೆ ಅಂದದ ಆ ಮುಖಕ್ಕೆ ಮುಂಗುರುಳ ಮರೆಮಾಡಿ ಎಡಕೆನ್ನೆಯ ಗುಳಿಯ ಪಕ್ಕ ಚುಕ್ಕೆಯನ್ನಿಟ್ಟು ಕಣ್ಣಹುಬ್ಬನಾರಿಸಿ ಅಂದದ ತುಟಿಗಳ ಮಧ್ಯೆ ನನ್ನೆಸರ ಕರೆದ ಅವಳ ಧ್ವನಿಗಿಂತ ಒಳ್ಳೆ ಸಂಗೀತ ಉಂಟೆ . ದುಂಬಿಯೊಡನೆ ಚುಂಬನ ಸಮರಕ್ಕಾಗಿಯೇ ಪದರ ಪದರಗಳನ್ನು ಭೇದಿಸಿಕೊಂಡು ಅರಳಿನಿಂತ ಹೂವಿಗೆ ದುಂಬಿಯ ಝೆಂಕಾರ ಕೇಳಿಸಿದರೆ ದುಂಬಿಗೂ - ಹೂವಿಗೂ ಇರುವ ನಂಟಿಗೆ ಸಾಟಿಯುಂಟೆ ನಿಡುಜಡೆಯ ಮಧ್ಯೆದಲ್ಲಿ ಮಲ್ಲಿಗೆಯ ಮುಡಿದು ಹಸಿರು ಧಾವಣಿಯ ಸೆರಗ ಸೊಂಟಕ್ಕೆ ಸಿಕ್ಕಿಸಿ ಮುಂಗೈಯ ಗಾಜಿನ ಬಳೆಗಳ ಹಿಂದಕ್ಕೆ ಸರಿಸಿ ಬಿರುಸಿನೆಜ್ಜೆಗಳಲ್ಲಿ ನನ್ನೆಡೆಗೆ ಬರುವ ಅವಳ ನಡಿಗೆ ಸಾಟಿಯುಂಟೆ ಭೂಮಾತೆಯ ಮೈತುಂಬಲಿಕ್ಕಾಗಿಯೇ ಮೋಡಗಳ ಚದುರಿಸಿ ಮಿಂಚಿನ ಬೆಳಕಲ್ಲಿ ಇಳೆಗೆ ಮನಸಾರೆ ಸುರಿಯುವ ಮಳೆ ಸುರಿದರೆ ಇಳೆ - ಮಳೆಗಳ ನಡುವಿನ ಸಂಗಮಕ್ಕೆ ಅಳತೆಯುಂಟೆ ಮುನಿಸಿನ ಮೊಗದಲ್ಲೇ ಮುದ್ದಿಸಲು ಸನಿಹ ಬಂದು ಕಣ್ಣಂಚಲ್ಲಿ ಜಿನುಗಿದ ಹನಿಯ ಒರೆಸಿ ಬೆರಳೊಳಗೆ ಬೆರಳು ಸೇರಿಸಿ ಬೆಸದ ಬೆಸುಗೆಗೆ ಮರುಳಾಗುವ ನನ್ನ ಈ ಕನಸು ಕಲ್ಪನೆಗೆ ಬೇಲಿಯುಂಟೆ ....!           ...

ಆತ್ಮೀಯರು ನೀವ್ಯಾರೋ ನಿಮಗೆ ನಾ ಯಾರೋ

ಇಷ್ಟು ವರ್ಷಗಳ ಅನುಭವದಲ್ಲಿ ಈ ವರ್ಷ ಅತಿ ಹೆಚ್ಚು ಶುಭಾಶಯಗಳ ಸುರಿಮಳೆಯನ್ನೇ ಸುರಿಸಿದ ನನ್ನೆಲ್ಲಾ ಆತ್ಮೀಯ ಸ್ನೇಹಿತ ಬಂಧುಗಳೇ, ನನ್ನೆಲ್ಲಾ ಗೆಲುವನ್ನು ಪ್ರೋತ್ಸಾಹಿಸಿ , ಸೋತಾಗ ನನ್ನ ತಿದ್ದಿ ತೀಡಿದ ಹಾಗು ಇಂದು ನಾಲ್ಕಾರು ಜನ ನನ್ನನ್ನು ಗುರುತಿಸುವಂತಾಗಲು ಕಾರಣೀಕರ್ತರಾದ ನಿಮಗೆ ಹಾಗು ತಮ್ಮೆಲ್ಲ ಶ್ರಮವನ್ನು ನನ್ನ ಯಶಸ್ಸಿಗೆ ಧಾರೆಯೆರೆದ ನನ್ನ ಅ ಪ್ಪ-ಅಮ್ಮ ,ಅಕ್ಕಂದಿರು,ತಂಗಿ ಮತ್ತು ನನ್ನ ಪುಟಾಣಿಗಳೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು ಬರಿದಾದ ಬದುಕಲ್ಲಿ ಸೂರ್ಯ ಕಿರಣಗಳ ಬೆಳಕಂಥ ಭರವಸೆಯ ಮೂಡಿ ಸಿದ್ದ್ಯಾರೋ ಬರಡಾದ ಮನದಲ್ಲಿ ಚಿಗುರೆಲೆಯ ಚಿತ್ತಾರದ ನಗುವಿನ ಚಿಲುಮೆ ಚಿಮ್ಮಿಸಿದವರಾರೋ ಯಾರೋ ನೀವ್ಯಾರೋ ನಿಮಗೆ ನಾ ಯಾರೋ ಬಿರುಕು ಬಿಟ್ಟ ಬಂಜರು ಭೂಮಿಯಲ್ಲಿ ಕಾರಂಜಿ ನೀರ ಬುಗ್ಗೆಯಂಥ ನೆಮ್ಮದಿಯ ನಗು ಮೂಡಿಸಿದವರಾರೋ ನೀರು ಸುರಿದ ಒಲೆಯಂತ ಜೀವನದಲ್ಲಿ ಉತ್ಸಾಹ ಕಿಚ್ಚನ್ನು ಹಚ್ಚಿದವರಾರೋ ಯಾರೋ ನೀವ್ಯಾರೋ ನಿಮಗೆ ನಾ ಯಾರೋ ಗುರಿಯಿಲ್ಲದೇ ಸಾಗುತ್ತಿದ್ದ ಮರುಳುಗಾಡಿನಂಥ ಹೃದಯದಲ್ಲಿ ಮಲ್ಲಿಗೆಯ ಅರಳಿಸಿದವರಾರೋ ಹೆತ್ತವಳ ಮಮತೆಯ ನೆನಪು ಮೂಡಿಸಿ ಕದಡಿದ ಕೊಳವಾಗಿದ್ದ ಮನಕ್ಕೆ ಶಾಂತಿಯ ನೀಡಿದವರಾರೋ ಯಾರೋ ನೀವ್ಯಾರೋ ನಿಮಗೆ ನಾ ಯಾರೋ ಯಾರೋ ನೀವ್ಯಾರೋ ನಿಮಗೆ ನಾ ಯಾರೋ ನನ್ನವರಲ್ಲ ನನ್ನ ಒಡನಾಡಿಗಳಲ್ಲ ಒಟಹುಟ್ಟಿದವರಲ್ಲ ಬದುಕಿನ ಪಯಣದಲ್ಲಿ ಜೊತೆಯಾದವರು ಕತ್ತಲೆಯ ದಾರಿಯಲಿ ದಿಕ್ಕು ತೋಚದೇ ನಿಂತಾಗ ಭರವಸೆಯ ಬೆಳಕು ನೀಡಿದವರು ನೀವ್ಯ...

ಹೋರಾಟವಿದು ಹೊಟ್ಟೆಗಾಗಿ

ಹೋರಾಟವಿದು ಹೊಟ್ಟೆಗಾಗಿ ಏನೆಲ್ಲಾ ಮಾಡಬೇಕಿದೆ ಈ ಹೊಟ್ಟೆಗಾಗಿ ನಿರಂತರ ಹೋರಾಟವಿದು ತುಂಡು ರೊಟ್ಟಿಗಾಗಿ ಬಂದಾಗ ನಾವಿಲ್ಲಿ ಬರೀ ಕೈ ಹೋಗು ವಾಗ ಮಣ್ಣಾಗೋದು ಬರೀ ಮೈ ಬಂದು ಹೋಗುವ ನಡುವೆ ಬರೀ ಗೋಳಾಟ ಗೊತ್ತು ಎಲ್ಲರಿಗೂ ಇದು ಶಾಶ್ವತವಲ್ಲದ ಆಟ ಇಂದಿನ ಹೋರಾಟ ನಮ್ಮ ನಾಳೆಗಾಗಿ ಬೇರೊಬ್ಬರ ತು ಳಿಯು ತ್ತೇವೆ ನಮ್ಮ ಬಾಳ್ವೆಗಾಗಿ ತಿಂದಿದ್ದ ಕರಗಿಸಲು ಉಳ್ಳವರ ಹೋರಾಟ ತು ತ್ತು ಕೂ ಳಿಗಾಗಿ ಬಡವರ ಚೀರಾಟ ಹಂಚಿತಿನ್ನುವುದ ಮರೆತದ್ದೆ ನಮ್ಮ ಧೌರ್ಭಾಗ್ಯ ಕೂಳ ಕಂಡೊಡೆ ಬಳಗವ ಕರೆವ ಕಾಗೆಯದೆಂಥ ಸೌಭಾಗ್ಯ ಬೇಡುವವನೊಬ್ಬ ಮಂದಿರದೊಳಗೆ ಉಳಿಸು ದೇವರೇ ನನ್ನ ಐಶ್ವರ್ಯ ಆರೋಗ್ಯ ಬೇಡುವವನೊಬ್ಬ ಅದೇ ಮಂದಿರದೊರಗೆ ನೀಡು ದೇವರೇ ನನಗೆ ಐಶ್ವರ್ಯ ಆರೋಗ್ಯ ಇದ್ದವನು ಇಲ್ಲದವನು ಇಬ್ಬರೂ ಬಿಕ್ಷುಕರೇ ಬಾಳಿನ ಬುಗುರಿಯನಾಡಿಸುವ ಆ ದೇವನ ಮುಂದೆ                                                            ...

ಸಾಮಾನ್ಯ ಮಹಿಳೆಯಲ್ಲ ಈಗ ಈಕೆ

ಮಹಿಳಾ ದಿನಾಚರಣೆಯ ಗುಂಗಿನಲ್ಲಿದ್ದಾಗ, ಚುನಾವಣೆಯಲ್ಲಿ ಸ್ಪರ್ಧಿಸಿರುವ ಮಹಿಳೆಯ ಬಗೆಗೆ ಅಕ್ಷರ ಜೋಡಣೆ ಕಾದಿದ್ದಳು ಕೊನೆ ಸಿಗಬಹುದೇನೋ ಎಂದು ದಣಿವರಿಯದ ದುಡಿಮೆಗೆ ಮುದುಡಿಹೋಗಿತ್ತು ತುಳಿತದಬ್ಬರಕ್ಕೆ ಅವಳ ಮುಡಿಯಲ್ಲಿನ ಮಲ್ಲಿಗೆ ಆ ಮಲ್ಲಿಗೆಯೆಂತೆಯೇ ಬಾಡಿಹೋಗುತ್ತಿದ್ದವು ಅವಳೊಳಗಿನ ಭಾವನೆಗಳು ಮೆಲ್ಲ ಮೆಲ್ಲಗೆ ಅಡುಗೆ ಮನೆಯ ಒಲೆಯ ಕಿಚ್ಚಿನೊಳಗೂ ಮದ್ದು ಸಿಗಬಹುದೇನೋ ಈ ನೋವಿನ ಬೇಗುದಿಗೆ ಎಂಥದ್ದೋ ಒಂದು ನಿರೀಕ್ಷೆ ಹಾಳೆಯ ಮೇಲೆ ಅಕ್ಷರಗಳ ರಂಗೋಲಿ ಬಿಡಿಸುವ ಲೇಖನಿ ಬಂತು ಪೊರಕೆ ಹಿಡಿದು ಅಂಗಳವ ಗುಡಿಸಿ ದ ಕೈಗೆ ಎಲ್ಲೆಡೆಯೂ ತಾತ್ಸಾರ , ದೌರ್ಜನ್ಯ ಕಾರಣ ಇವಳೊಬ್ಬಳು ಸಾಮಾನ್ಯ ಮಹಿಳೆ ಎದ್ದು ನಿಲ್ಲು , ನಿಲ್ಲಬೇಡ ನುಗ್ಗು ಎಂದು ಅವಳೊಳಗೆ ಮೊಳಗಿತ್ತು ಚುನಾವಣೆ ಕಹಳೆ ಮೀಸೆ ತಿರುಗಿಸಿದವರ ನಡುವೆಯೂ ಭರ್ಜರಿ ಸದ್ದು ಮಾಡತ್ತಿದೆ ಈಗ ಸೆರಗಿನ ಮರೆಯಲ್ಲಿದ್ದ ಹಸಿರು ಬಳೆ ಮುಂದಿನ ಸಾಲಿನಲ್ಲಿ ನಿಲ್ಲಬಲ್ಲಳು ಕಾರಣ ಇವಳೀಗ ಚುನಾಯಿತ ಪ್ರತಿನಿಧಿ ಕಂಡುಕೊಂಡಿದ್ದಾಳೆ ಹೆಂಗಳೆಯರ ಮೇಲಿನ ದೌರ್ಜನ್ಯದ ಖಾಯಿಲೆಗೆ ಔಷದಿ ಸಮುದಾಯವೇ ಇವಳಿಗೀಗ ಸಂಸಾರ ಸಮುದಾಯದ ಸಮಸ್ಯೆಗಳಿಗೆ ನೀಡಬಲ್ಲವಳಾಗಿದ್ದ...

ಅವಳೇ ನನ್ನಮ್ಮ...

ಅವಳಿರದಿದ್ದರೆ ನನ್ನದೆಂಬುದೊಂದು ಅಸ್ತಿತ್ವವೇ ಇಂದು ಇರುತ್ತಿರಲಿಲ್ಲ  ಅವಳ ಬಿಟ್ಟು ಬೇರಾರಿಗೂ ಈ ಏಳು-ಬೀಳಿನ ಜೀವನದ ಪಾಠವ ಇಷ್ಟು ಚನ್ನಾಗಿ ಕಲಿಸಲು ಸಾಧ್ಯವಿಲ್ಲ ಅವಳಿದ್ದರೇ ಎಲ್ಲಾ ಅವಳಿರದಿದ್ದರೆ ನನ್ನದೇನೂ ಇಲ್ಲ... ಗುರುವೆಂದರೇ ಅವಳೇ ನನ್ನಮ್ಮ... ಪುಟ್ಟ ಕಂದನ ಮೊದಲ ತೊದಲು ನುಡಿ ಅದುವೇ ಅಮ್ಮ ಎಡವಿ ಬಿದ್ದು ಪೆಟ್ಟು ತಿಂದಾಗೆಲ್ಲಾ ಅರಿವಿಲ್ಲದೇಯೇ ಬರುವ ಉದ್ಗಾರವೇ ಅಮ್ಮ ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತ ಸ್ತ್ರೀಯೆಂದರೆ ಅವಳೇ ನನ್ನಮ್ಮ... ಅವ್ವ ಎಂಬುದು ಕೇವಲ ಎರಡೂವರೆ ಅಕ್ಷರ ಆ ಹೆಸರಿನೊಳಗಿನ ಭಾವನೆಗಳು ಮಾತ್ರ ಸಾವಿರ ಸಾವಿರ ಪೂಜಿಸುವದರಲ್ಲೇನುಂಟು ಸುಖ ಆ ಕಲ್ಲು ದೇವರ ಕರುಳಬಳ್ಳಿಯನಂಚಿಕೊಂಡ ಈ ದೇವತೆಯ ಪೂಜಿಸೋಣ,  ಅದುವೇ ಜೀವನದ ಸಾಕ್ಷಾತ್ಕಾರ.. ದೇವತೆಯೆಂದರೇ ಅವಳೇ ನನ್ನಮ್ಮ ಅಮ್ಮಂದಿರ ದಿನಾಚರಣೆಯ ಸಂದರ್ಭದಲ್ಲಿ ಈ ಕವನದ ಮೂಲಕ ಎಲ್ಲಾ ಅಮ್ಮಂದಿರಿಗೂ ನನ್ನ ನಮನ

ಯುಗಾದಿ ಹಬ್ಬದ ಶುಭಾಶಯಗಳು ...

ಇಮೇಜ್
ಹಳೆಯದು ಕಳೆದು ಹೊಸದಾಗಿ ಬಂದಿದೆ ಯುಗಾದಿ ಕಹಿ ಸಿಹಿ ಜೀವನದೊಂದಿಗೆ ಆಚರಿಸೋಣ ಸಂಭ್ರಮದಿ ನೋವುಂಟು ನಲಿವುಂಟು ಎಲ್ಲರ ಜೀವನದಲ್ಲೂ ಶಾಶ್ವತವಲ್ಲ ಈ ನೋವು ಎಲ್ಲಾ ಕಾಲದಲ್ಲೂ ಬೇವು ಬೆಲ್ಲದ ಸವಿಯಲ್ಲಿಕಷ್ಟ ಸುಖ ಬೆರೆತಿರುವುದಂತೆ ಹಳೇಬೇರಿನಿಂದ ಹೊಸ ಚಿಗುರು ಬರುವಂತೆ ಹಿಂದಿನ ಕಹಿನೆನಪುಗಳು ಬತ್ತಿಹೋಗಲಿ ಮುಂದಿನ ಜೀವನ ಸಂತೋಷದ ಕಾರಂಜಿಯಾಗಲಿ ಗೆಲ್ಲುವ ಭರವಸೆಯ ಬೆಳಕು ಮೂಡಿಸಲಿ ಈ  ಜಯ ಸಂವತ್ಸರ ಮರೆಯಾಗಲಿ ಕೊನೆಯಾಗಲಿ ನಮ್ಮೊಳಗಿನ ದ್ವೇಷ ಮತ್ಸರ..... ಯುಗಾದಿ ಹಬ್ಬದ  ಶುಭಾಶಯಗಳು ...

ಮಹಿಳಾ ದಿನಾಚರಣೆಯ ಶುಭಾಶಯಗಳು .....

ಇಮೇಜ್
ಮಹಿಳಾ ದಿನದ ಅರ್ಥ ಪೂರ್ಣ ಆಚರಣೆ ಆಗಬೇಕಾಗಿರುವುದು - ಒಂದು ದಿನದ ಮಹಿಳಾ ಮಹಿಮೆಯ ಗುಣಗಾನದಿಂದ ಅಲ್ಲ. ನಮ್ಮ ಇಂದಿನ ಸಮಾಜದಲ್ಲಿ, ಇಷ್ಟೊಂದು ವಿಜ್ಞಾನ ತಂತ್ರಜ್ಞಾನದ ಪ್ರಗತಿಯ ದಿನದಲ್ಲಿಯೂ ಮಹಿಳೆಯರು ಎಷ್ಟೊಂದು ಕಷ್ಟಗಳನ್ನು ಎದುರಿಸುತ್ತಿದ್ದಾರೆ, ಬವಣೆ ಪಡುತ್ತಿದ್ದಾರೆ - ಎನ್ನುವುದನ್ನು ಎಲ್ಲರೂ ಮನಗಂಡು, ಆಕೆಗೂ, ಅವಳ ಕನಸುಗಳನ್ನು ನನಸು ಮಾಡುವ ಸಮಯ ಕೊಟ್ಟರೆ, ಆಗ ಮಹಿಳಾ ದಿನಕ್ಕೆ ಅರ್ಥ ಬರಲು ಸಾಧ್ಯ. ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು ..... ಜಗಬೆಳಗೋ ಸೂರ್ಯನಿಗುಂಟು ರಾತ್ರಿಯ ಬಿಡುವು ಬಾನ ಚಂದ್ರನಿಗುಂಟು ಅರ್ಧ ತಿಂಗಳ ಗಡುವು ಮಾನವೀಯತೆಯ ಶಕ್ತಿಯಾಗಿ ಸಮಾಜದ ಕನ್ನಡಿಯಾಗಿ ಮುಪ್ಪಲ್ಲಿ ಮರೆಯುವ ಮಕ್ಕಳಿಗೆ ತಾಯಿಯಾಗಿ ದಂಡಿಸುವ ಗಂಡನಿಗೆ  ನಿಸ್ಸಾಹಯಕ ಹೆಂಡತಿಯಾಗಿ ದಾರಿ ತಪ್ಪಿದ ತಮ್ಮನ ತಿದ್ದುವ ಅಕ್ಕನಾಗಿ ನೋವು ನಲಿವು ಹಂಚಿಕೊಳ್ಳುವ  ಅಣ್ಣನಿಗೆ ತಂಗಿಯಾಗಿ ಒಲುಮೆಯ ಗೆಳಯನಿಗೆ ಗೆಳತಿಯಾಗಿ ಸದಾ ದುಡಿಯುವ ಈ ಹೆಣ್ಣಿಗೆಲ್ಲುಂಟು ಬಿಡುವು.......! ಹೆಣ್ಣಿಂದಲೇ ಭೂಮಿಗೆ ಬಂದವರಿಗೆ ಹೆಣ್ಣು ಎಂದಾಕ್ಷಣ ಅದೇಕೋ ಕಾಣೆ ಬೇಸರ ಮೊಲೆಯುಣಿಸಿ ಬೆಳೆಸಿದವಳ ಮೇಲೆ ತಾತ್ಸಾರ ಹೇಳಿಕೊಳ್ಳಲು ಮಾತ್ರ ಪ್ರಕೃತಿ ಹೆಣ್ಣು ಭೂಮಿ ಹೆಣ್ಣು , ಭಾರತಾಂಬೆ ಹೆಣ್ಣು, ನದಿ ಹೆಣ್ಣು ಸಂಪತ್ತು ಹೆಣ್ಣು.... ಆದರೆ ವಾಸ್ತವದಲ್ಲಿ ಇನ್ನು ಬೆಳಕು ಕಾಣದ  ಹೆಣ್ಣು ಭ್ರೂಣದ ಮೇಲೆಯೇ ...

ನನ್ನ ದೇವತೆ..... ನನ್ನವ್ವ

ದಾರಿಯಲಿ ಎಡವಿ ಎದೆಗುಂದಿ ನಿಂತವನಿಗೆ ಧೈರ್ಯ ತುಂಬಿ ಮುನ್ನೆಡೆಸಿದವಳು ಗೆದ್ದು ಬೀಗುತ್ತಿದ್ದವರ ನಡುವೆಯೇ ನನಗೂ ಗೆಲುವಿನ ಹುಚ್ಚು ಹಿಡಿಸಿದವಳು ನನ್ನವ್ವ ಹಂಗಿಸಿದವರ ನಡುವೆ ಗೆದ್ದು ಬಂದಾಗ… ಓಡಲೊಳಗಿನ ನೋವ ತೋರ್ಪಡದೆ ತುಂಬಿಕೊಂಡ ಕಣ್ಣ ಮರೆಮಾಡಿ ನಕ್ಕವಳು ನನ್ನ ಕಣ್ಣೊಳಗೆ ತನ್ನ ಕನಸಿನ ಬೀಜವ ಬಿತ್ತಿ ಹರಿದ ಸೀರೆ ಸೆರಗಿನ ಅಂಚಲಿ ಕಣ್ಣೊರೆಸಿಕೊಂಡವಳು ನನ್ನವ್ವ ತಾನು ಕಲಿತದ್ದು ಮೂರಕ್ಷರವಾದರೂ ನನಗೆ ಕಲಿಸುವವರ ಮುಂದೆ ನಿಂತು ನನ್ನ ಕಲಿಕೆಯ ಬಗ್ಗೆ ದಿಟ್ಟನುಡಿಗಳಾಡಿದವಳು ನನ್ನೆದುರು ಕೋಪದಲಿ ನಟಿಸಿ ನಾ ಮಾಡಿದ ತಪ್ಪಿಗೆ ಬಾಸುಂಡೆ ಬಾರಿಸಿ ಮರೆಯಲಿ ತನ್ನನ್ನೇ ತಾನು ಹಂಗಿಸಿಕೊಂಡವಳು ನನ್ನವ್ವ ಇಂದು ಅವಳ ಕನಸೆಲ್ಲಾ ಈಡೇರಿದಾಗ ಜಗತ್ತನ್ನೇ ಗೆದ್ದವಳಂತೆ ಒಳಗೊಳಗೆ ಸಂಭ್ರಮಿಸಿದವಳು ಜಗದ ಜನರೆಲ್ಲಾ ಬದಲಾದರೂ ತಾನು ಮಾತ್ರ ಎಳ್ಳಷ್ಟು ಬದಲಾಗದೆ ಇನ್ನಷ್ಟು ಕನಸುಗಳೊಡನೆ ನನ್ನೊಡನಿರುವಳು ನನ್ನ ದೇವತೆ..... ನನ್ನವ್ವ                                                   -ಕನ್ನಡವೆ...

ಅವ್ವ ನನಗೆ ಕೊಡಲೇ ಇಲ್ಲ ಮುತ್ತು

ಅವ್ವ ನನಗೆ ಕೊಡಲೇ ಇಲ್ಲ ಮುತ್ತು ಅವಳಿಗೆ ಇರಲೇ ಇಲ್ಲ ಅಷ್ಟು ಪುರುಸೊತ್ತು ಸದಾ ದುಡಿಯಬೇಕಿತ್ತು ಹವಣಿಸಲು ನಮಗೆ ತುತ್ತು ಮೈಯೆಲ್ಲಾ ತೇಪೆ ಹಾಕಿದ ಸೀರೆ ಅವಳ ಸೊರಗಿದ ದೇಹವ ಮುಚ್ಚಲು ಪ್ರಯತ್ನಿಸುತಿತ್ತು ಅಂದು ಅಪ್ಪ-ಅವ್ವ ದುಡಿದು ತಂದದ್ದು ನಮ್ಮ ಹೊಟ್ಟೆಗೇ ಸಾಕಾಗುತಿತ್ತು ತಪ್ಪಲೆಯ ತಳದಲ್ಲಿನ ಗಂಜಿ ಮಡಿಕೆಯ ತಣ್ಣೀರು ಅಪ್ಪ-ಅಮ್ಮನಿಗೆ ಮೀಸಲಿತ್ತು ಮತ್ತೇ ಮುಂದೆ  ನಾಳೆಗೆ ಏನೂ ಎಂಬ ಅದೇ ಚಿಂತೆ ಅವರ ಕಾಡುತಿತ್ತು ಅಂದು ನನ್ನ ಬುದ್ದಿವಂತಿಕೆ ಕಂಡು ಸಂತೋಷದಿ ಬೆನ್ನು  ತಟ್ಟಿದ ಕೈ ಕೇವಲ ನನ್ನ ಅವ್ವನದಾಗಿತ್ತು ಇಂದು ಎಲ್ಲರು ನನ್ನ ಹೊಗಳಿ  ಬೆನ್ನು ತಟ್ಟುವಾಗ ನನ್ನವ್ವ ನ ಕೈ ಮಾತ್ರ ಕಣ್ಣೊರೆಸಿಕೊಳ್ತಿತ್ತು .             ವೆಂಕಟೇಶ್ . ೨೧.೦೧.೨೦೧೪

ಅವಳು-ಅವನು..!

ಭೇಟಿಗೆ ಕಾತರಿಸಿದೆ ಮನ ಸಿಗುವೆಯಾ ಎಂದೊಡನೆ ಒಪ್ಪಿದಳು ಅವಳು ಮೈ ಮನಸ ಗಾಳಿಯಲಿ ತೇಲಿ ಬಿಟ್ಟು ಅವಳ ಹೆಜ್ಜೆ ಸದ್ದಿಗೆ ಕಾದು ಕುಳಿತನು ಅವನು ಮೋಡಕ್ಕೆ ಮುತ್ತಿಡಲು ಹೊರಟ ಹಕ್ಕಿಯಂತೆ ಗಾಳಿಯಲಿ ತೇಲುತ್ತಾ ಬಂದಳು ಅವಳು ಬಂದು ಮುಂದೆ ನಿಂತವಳನ್ನೊಮ್ಮೆ ದಿಟ್ಟಿಸಿ ನೋಡಿ ಏನೂ ತೋಚದೇ ಗೊಂದಲದ ಗೂಡಾದನು ಅವನು ಬರಸೆಳೆದು ಅಪ್ಪಿಕೊಂಡ ಅವನ ತೋಳಲ್ಲಿ ಗೂಡಲ್ಲಿ ಬಚ್ಚಿಟ್ಟುಕೊಂಡ ಗುಬ್ಬಿಯಾದಳು ಅವಳು ಪ್ರೀತಿ ತುಂಬಿದ ಆ ಕಂಗಳ ಕಂಡು ಗರಿಬಿಚ್ಚಿದ ನವಿಲಿಂತೆ ಸಂಭ್ರಮಿಸಿದನು ಅವನು ಅವನೆದೆಯ ಪೊದೆಗೂದಲಲ್ಲಿ ಮುಖವಿಟ್ಟು ನಿದ್ರಿಸುತಿರೆ ಅವಳು ಬಿಸಿಯುಸಿರು ತಾಗಿ ನಿದ್ರೆಗೆ ಭಂಗವಾಗುವುದೆಂದು ಉಸಿರಾಡುವುದನ್ನೇ ಮರೆತನು ಅವನು ಅವನೆದೆ ಬಡಿತದ ಇಂಪಾದ ಸಂಗೀತದಲ್ಲಿ ಅವಳದೇ ಹೆಸರಿನ ಸ್ವರ ಕೇಳಿ ಕನಸಿಗೆ ಜಾರಿದಳು ಅವಳು ಅವಳ ಮುಡಿಯ ಮಲ್ಲಿಗೆಯ ಪರಿಮಳದಿ ತನ್ನ ಕನಸ ಮರೆತು ಅವಳ ಕನಸೊಳಗೆ ಒಂದಾದನು ಅವನು.....                                              - ಕನ್ನಡವೆಂಕಿ ೧೦.೦೧.೧೪

ಸಂಕ್ರಾಂತಿ ಶುಭಾಶಯಗಳು

ಮನಸ್ಸು-ಮನಸ್ಸುಗಳ ನಡುವಿನ ಕಾರ್ಮೋಡ ಸರಿದು ಸಮೃದ್ದ ಸೋದರತೆಯಲಿ ಮೂಡಲಿ ಶುಭಶಾಂತಿ ಕಾದು ಒಣಗಿದ ಇಳೆಗೆ  ವರ್ಷಧಾರೆಯಾಗುವಂತೆ ನೊಂದ ಮನಸ್ಸುಗಳಿಗೆ ಭರವಸೆಯ ಬೆಳಕಾಗಲಿ ಈ ಸಂಕ್ರಾಂತಿ ಸಂಕ್ರಾಂತಿ ಬರಲಿ  ಬತ್ತಿದ ನದಿಗೆ ಬಂದ ಗಂಗೆಯಾಗಿ ಬೀಸಲಿ ತಂಗಾಳಿ ಮುದ ನೀಡುತಾ ಮನಕ್ಕೆ ಪ್ರಸನ್ನವಾಗಿ ತೂಗುತಿವೆ ಹೊಲಗದ್ದೆಗಳಲ್ಲಿ ತೆನೆಗಳು ಭಾರವಾಗಿ ರೈತನ ಮನೆ ತುಂಬುತ್ತಿವೆ ಬೆಳೆಗಳು  ಬಂಗಾರವಾಗಿ ಈ ಸಂಕ್ರಾಂತಿ ನೀಡಲಿ ದುಡಿದ ಜೀವಗಳಿಗೆ ನವಚೇತನ ಸೂರ್ಯ ಕಿರಣಕೆ ಮೈಯೊಡ್ಡಿ  ತುಂಬಲಿ ಹೊಸತನ ನನಸಾಗುವ ಹೊಸ  ಕನಸುಗಳಿಗೆ ಚೇತನವ ತುಂಬಲು ನೆರವಾಗಿ ಬರಲಿ ಈ ಸಂಕ್ರಾಂತಿ ಎಲ್ಲರಿಗೂ ವರವಾಗಿ :-ವೆಂಕಟೇಶ್ 

ಶಾಲೆಯ ಸಮೀಪ ಧೂಮಪಾನ ನಿಷೇದ

ಶಾಲೆಯ ಸಮೀಪ ಧೂಮಪಾನ ನಿಷೇದ ಎಂಬ ಗೋಡೆಬರಹ ಬರೆಯುತ್ತಿದ್ದ ಪೈಂಟರ್ ನ ಬಾಯಲ್ಲಿ ಸಿಗರೇಟಿತ್ತು ಆ ಸಿಗರೇಟಿನಿಂದ ಹೊರಹೊಮ್ಮಿದ ಹೊಗೆ ಅಲೆ ಅಲೆಯಾಗಿ ತೇಲಿ ಬಂದಿತ್ತು ಪಾಠ ಹೇಳುತ್ತಿದ್ದ ಶಿಕ್ಷಕನ ಮೂಗಿದೆ ಬಡಿದಿತ್ತು ಅವನ ತಲೆ ಕೆಡಿಸಿತ್ತು ಆ ಕ್ಷಣಕ್ಕೆ ಕೈಬೆರಳ ನಡುವಿದ್ದ ಬಿಳಿ ಬಳಪ ಶಿಕ್ಷಕನಿಗೆ ಸಿಗರೇಟಿನಂತೆ ಗೋಚರಿಸಿತ್ತು ಜೇಬಲ್ಲಿ ಅಡಗಿ ಕುಳಿತಿದ್ದ ಸಿಗರೇಟು ಪೈಂಟರ್ ನವನ ಬಳಿ ಬೆಂಕಿ ಕೇಳಲು ಕಾತರಿಸಿತ್ತು ತರಗಿತಿಯಿಂದ ಹೊರಬಂದ ಶಿಕ್ಷಕನನ್ನು ಶಾಲೆಯ ಹಿಂದಿನ ಬೇಲಿ ಕೈ ಬೀಸಿ ಕರೆಯುತಿತ್ತು ಬೇಲಿಯ  ಹಿಂದಿನಿಂದ ಬಂದ ವಾಸನೆ ಕೊನೆಯ ಬೆಂಚಿನಲ್ಲಿ ನಿದ್ದೆ ಮಾಡುತಿದ್ದ ತರಲೆ ಗುಂಡನ ಮೂಗಿಗೆ ಬಡಿದಿತ್ತು ಥಟ್ಟನೆ ಎಚ್ಚರಗೊಂಡ ಗುಂಡನಿಗೆ ಮನೆಯಲ್ಲಿ ಅಪ್ಪ ಸೇದಿ ಬೀಸಾಡಿದ ತುಂಡುಬೀಡಿ ಕೈ ಬೀಸಿ ಕರೆದಂತೆ ಭಾಸವಾಯಿತು....                                                  -ಕನ್ನಡವೆಂಕಿ

ಸತ್ಯ-ಮಿಥ್ಯ

ಈ ಜೀವನವೇ ಒಂದು ಸತ್ಯ - ಮಿಥ್ಯಗಳ ಗೂಡು ಸತ್ಯದ ಹಾದಿಯಲ್ಲಿ ನಡೆದವನಿಗೆ ಸಿಕ್ಕಿದ್ದು ಸುಡುಗಾಡು ಸುಳ್ಳುಗಳ ಜಾಡಲ್ಲೇ ಸಾಗಬೇಕಿದೆ ಬದುಕಿನ ಹಾಡು ಸತ್ಯಶೋಧನೆ ಯ ಯೋಚನೆಯ ಕಿತ್ತು ಬಿಸಾಡು ಸುಳ್ಳುಗಳ ಬಂಡಿಯ ಮೇಲೆಯೇ ಎಲ್ಲರೊಡನೆ ನೀ ಓಡು ... ಓಡು .. ಓಡ ...!                                                                -ವೆಂಕಟೇಶ್

ದೂರ ಸರಿದವರು

   ಅತ್ಮಿಯರೇ, ಸುಮಾರು ಎರಡು ವರ್ಷ ಒಂದು ಕುಟುಂಬವಾಗಿ ನನ್ನೊಡನಿದ್ದ ಸಿಲ್ಯಾಂಪ್ಸ್ ಸ್ನೇಹಿತರಿಗಾಗಿ ಈ ಅಕ್ಷರ ನಮನ....  ಅರಿವಿಲ್ಲದೆ ಹನಿ ಜಾರುತಿಹುದು ದನಿಯಿಲ್ಲದೆ ಮನ ಬಿಕ್ಕಳಿಸುತಲಿಹುದು ದೂರವಾಗುವ ದಿನ ಇಂದೇ ಏಕೆ ಬಂದಿಹುದು ಅಲೆಮಾರಿ ಜೀವನದಲಿ ಊರ ಸೆಲೆ ತಂದವರು  ಮತ್ತೆ ಭೇಟಿ ಯಾಗುವೆ ಎನ್ನುತ್ತಾ ಮತ್ತೆ ಇಂದು ದೂರ ಸರಿಯುತಿರುವರು , ಕಳೆದ ಎರಡು ವರುಷದ ಹಲವು ಹರುಷಕೆ ಕಾರಣರಾದವರು ಇಂದು ಕಣ್ಣೊಳು ಕಂಬನಿ ಬಿರಿಯುತ್ತ ಹೊಸ್ತಿಲಲಿ ನಿಂತಿಹರು ಒಳಗೆ ಮನ ಅಳುತ್ತಿದ್ದರು ಮುಗುಳ್ನಗೆ ಬೀರುತಾ ನಗುತ್ತಿರುವರು ಎಲ್ಲೇ ಹೋದರು ಸಂತೋಷ ನಿಮ್ಮ ಪಾಲಿಗಿರಲಿ ಪ್ರತಿ ಹೆಜ್ಜೆಗೂ ನಗೆ ಹೂವು ಅರಳುತ ಶುಭ ಕೋರಲಿ ನನ್ನ ನೆನಪಿನ ಭುತ್ತಿಲಿ  ನಿಮ್ಮ ಪಾಲು ಎಂದೆಂದಿಗೂ ಇರಲಿ                              -ವೆಂಕಟೇಶ್

ಪ್ರೀತಿಯ ಕಹಾನಿ……….

ನಿಂತಾಗ ಪಯಸ್ವಿನಿ ನದಿಯ ತೂಗು ಸೇತುವೆಯ ಮೇಲೆ ಮನದ ಮೂಲೆಯಲ್ಲಿ ಶುರುವಾಯಿತು ಎಂಥದೋ ಸೆಲೆ ಕೇಳಿಬರುತ್ತಿತ್ತು ಶಾಂತ ಪ್ರವಾಹದ ನೀರಿನ ಜುಳು ಜುಳು ಹರಿದಾಡಿದಂತೆ ಭಾಸವಾಯಿತು ಎದೆಯೊಳಗೆ ಮಿಂಚು ಹುಳು ಬೀಳುತ್ತಲಿತ್ತು ಒಂದೇ ಸಮನೆ ತುಂತುರು ಹನಿ ಹನಿಯ ರಭಸಕ್ಕೆ ಕರಗುತ್ತಲಿತ್ತು ಎಲೆಯ ಮೇಲಿನ ಹನಿ ಇಬ್ಬನಿ ಹೊರಬರಲಾಗದೇ ಚಡಪಡಿಸುತಿತ್ತು ಮನದಾಳದ ಪಿಸುಧ್ವನಿ ಮನಸ್ಸಿನೊಳಗೆ ಬರವಣಿಗೆ ಆರಂಬಿಸಿತ್ತು ಬರೆಯಲು ಪ್ರೀತಿಯ ಕಹಾನಿ……… .                         - ಕನ್ನಡ ವೆಂಕಿ (ವೆಂಕಟೇಶ್)