ಪೋಸ್ಟ್‌ಗಳು

ಆಗಸ್ಟ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೆತ್ತವಳು...

ಪುಟ್ಟ ಕಂದನ ಮೊದಲ ತೊದಲು ನುಡಿಯೇ ಅಮ್ಮ . ಬಾಯಲ್ಲಿ ಜೊಲ್ಲು ಸುರಿಸುತ್ತಾ ತೊದಲು ನುಡಿಯಲ್ಲಿ ಅಮ್ಮಾ ಎಂದರೆ ಸಾಕು , ಆ ತಾಯಿಯ ಮುಖದಲ್ಲಿನ ಆನಂದಕ್ಕೆ ಸಾಟಿಯೇ ಇರುವುದಿಲ್ಲ . ಹೆಣ್ಣಿಗೆ ತಾಯಿ ಎಂಬ ಪಟ್ಟ ಬಂದೊಡನೆಯೇ ಅವಳ ಜೀವನದ ಸರ್ವಸ್ವವೂ ಸ್ವಾರ್ಥತರಹಿತವಾಗಿಬಿಡುತ್ತದೆ . ಇದು ಅವಳಿಗೆ ಆ ದೇವರು ಕೊಟ್ಟ ವರವೋ ಶಾಪವೋ ತಿಳಿಯದು . ತಾಯಿ ಎನಿಸಿಕೊಂಡವಳು ಎಂದಿಗೂ ತನಗೆ ಮಾತ್ರ ಇರಲಿ ಎಂಬುದಾಗಿ ಯೋಚಿಸುವುದಿಲ್ಲ , ಅವಳ ಎಲ್ಲಾ ಯೋಚನೆಗಳಲ್ಲಿಯೂ ತನಗೆ ಮಾತ್ರ ಎಂಬುದಕ್ಕಿಂತ ತನ್ನ ಮಕ್ಕಳಿಗೆ ಎಂಬ ಯೋಚನೆ ಇದ್ದೇ ಇರುತ್ತದೆ . ಈ ಭೂಮಿಗೆ ಬಂದು ಕಣ್ಣು ಬಿಟ್ಟ ಪ್ರತಿಯೊಂದು ಶಿಶುವಿನ ಬಾಯಿಂದ ಮೊದಲು ಬರುವ ಪದವೇ ಅಮ್ಮ .. ಅಳುವಿನಲ್ಲೂ ಮಗು ತನ್ನ ತಾಯಿಯನ್ನು ಅಕ್ಕರೆಯಿಂದ ಅಮ್ಮ ... ಎಂದು ಕರೆಯುತ್ತದೆ . ಅಮ್ಮ ಎಂಬುದು ಕೇವಲ ಎರಡೂವರೆ ಅಕ್ಷರಗಳ ಒಂದು ಪದ ಅಷ್ಟೆ ಆದರೆ ಆ ಪದದ ಒಳಗಿನ ಭಾವನೆಗಳು ಮಾತ್ರ ಸಾವಿರ ಸಾವಿರ . ಭಾಷೆ ಯಾವುದೇ ಆಗಿರಲಿ ಅಮ್ಮ ಎಂಬುದು ಹೃದಯದಿಂದ ಮಧುರವಾಗಿ ಮಾರ್ದನಿಸುವ ಶಬ್ದ . ನಮ್ಮ ನಡುವೆ ಹುಡುಕಿದರೆ ಕೋಟ್ಯನುಕೋಟಿ ಕೆಟ್ಟ ಮಕ್ಕಳು ದೊರಕುತ್ತಾರೆ . ಆದರೆ , ಕೆಟ್ಟ ತಾಯಿ ಎನಿಸಿಕೊಂಡವರು ಮಾತ್ರ ವಿರಳಾತಿವಿರಳ . ತಾಯಿ ಮಮಕಾರ , ಸಹನೆಯ ಸಾಕಾರ ಮೂರ್ತಿ . ತಾಯಿಯ ಹೃದಯ ಬಹು ಮೃದು ಆದರೆ ಮಕ್ಕಳ ವಿಷಯಕ್ಕೆ ಬಂದಾಗ ಮನಸ್ಸು ಮಾತ್ರ ಬಹಳ ಗಟ್ಟಿ , ಏನೇ ಆದರೂ ತನ್ನ ಮಕ್ಕಳನ್ನು ಬಿಟ್ಟುಕೊಡದ ಛಲ

ಕನಸಿಗೆ ಬೇಲಿಯುಂಟೆ

ಸೂರ್ಯನ ಕಿರಣಗಳ ಸ್ಪರ್ಷಕ್ಕಾಗಿಯೇ ಭೂಮಿಯೊಳಗಿಂದ ಮೋಳಕೆಯೊಡೆದು ಹೊರಬರುವ ಬೀಜಕ್ಕೆ ಕಿರಣಗಳು ಸ್ಪರ್ಷವಾದರೆ ಆ ಬೀಜ - ಕಿರಣಗಳ ಮಿಲನ ಬಣ್ಣಿಸಲು ಪದಗಳುಂಟೆ ಅಂದದ ಆ ಮುಖಕ್ಕೆ ಮುಂಗುರುಳ ಮರೆಮಾಡಿ ಎಡಕೆನ್ನೆಯ ಗುಳಿಯ ಪಕ್ಕ ಚುಕ್ಕೆಯನ್ನಿಟ್ಟು ಕಣ್ಣಹುಬ್ಬನಾರಿಸಿ ಅಂದದ ತುಟಿಗಳ ಮಧ್ಯೆ ನನ್ನೆಸರ ಕರೆದ ಅವಳ ಧ್ವನಿಗಿಂತ ಒಳ್ಳೆ ಸಂಗೀತ ಉಂಟೆ . ದುಂಬಿಯೊಡನೆ ಚುಂಬನ ಸಮರಕ್ಕಾಗಿಯೇ ಪದರ ಪದರಗಳನ್ನು ಭೇದಿಸಿಕೊಂಡು ಅರಳಿನಿಂತ ಹೂವಿಗೆ ದುಂಬಿಯ ಝೆಂಕಾರ ಕೇಳಿಸಿದರೆ ದುಂಬಿಗೂ - ಹೂವಿಗೂ ಇರುವ ನಂಟಿಗೆ ಸಾಟಿಯುಂಟೆ ನಿಡುಜಡೆಯ ಮಧ್ಯೆದಲ್ಲಿ ಮಲ್ಲಿಗೆಯ ಮುಡಿದು ಹಸಿರು ಧಾವಣಿಯ ಸೆರಗ ಸೊಂಟಕ್ಕೆ ಸಿಕ್ಕಿಸಿ ಮುಂಗೈಯ ಗಾಜಿನ ಬಳೆಗಳ ಹಿಂದಕ್ಕೆ ಸರಿಸಿ ಬಿರುಸಿನೆಜ್ಜೆಗಳಲ್ಲಿ ನನ್ನೆಡೆಗೆ ಬರುವ ಅವಳ ನಡಿಗೆ ಸಾಟಿಯುಂಟೆ ಭೂಮಾತೆಯ ಮೈತುಂಬಲಿಕ್ಕಾಗಿಯೇ ಮೋಡಗಳ ಚದುರಿಸಿ ಮಿಂಚಿನ ಬೆಳಕಲ್ಲಿ ಇಳೆಗೆ ಮನಸಾರೆ ಸುರಿಯುವ ಮಳೆ ಸುರಿದರೆ ಇಳೆ - ಮಳೆಗಳ ನಡುವಿನ ಸಂಗಮಕ್ಕೆ ಅಳತೆಯುಂಟೆ ಮುನಿಸಿನ ಮೊಗದಲ್ಲೇ ಮುದ್ದಿಸಲು ಸನಿಹ ಬಂದು ಕಣ್ಣಂಚಲ್ಲಿ ಜಿನುಗಿದ ಹನಿಯ ಒರೆಸಿ ಬೆರಳೊಳಗೆ ಬೆರಳು ಸೇರಿಸಿ ಬೆಸದ ಬೆಸುಗೆಗೆ ಮರುಳಾಗುವ ನನ್ನ ಈ ಕನಸು ಕಲ್ಪನೆಗೆ ಬೇಲಿಯುಂಟೆ ....!