ಕನಸಿಗೆ ಬೇಲಿಯುಂಟೆ




ಸೂರ್ಯನ ಕಿರಣಗಳ ಸ್ಪರ್ಷಕ್ಕಾಗಿಯೇ
ಭೂಮಿಯೊಳಗಿಂದ ಮೋಳಕೆಯೊಡೆದು
ಹೊರಬರುವ ಬೀಜಕ್ಕೆ ಕಿರಣಗಳು ಸ್ಪರ್ಷವಾದರೆ
ಆ ಬೀಜ-ಕಿರಣಗಳ ಮಿಲನ ಬಣ್ಣಿಸಲು ಪದಗಳುಂಟೆ

ಅಂದದ ಆ ಮುಖಕ್ಕೆ ಮುಂಗುರುಳ ಮರೆಮಾಡಿ
ಎಡಕೆನ್ನೆಯ ಗುಳಿಯ ಪಕ್ಕ ಚುಕ್ಕೆಯನ್ನಿಟ್ಟು
ಕಣ್ಣಹುಬ್ಬನಾರಿಸಿ ಅಂದದ ತುಟಿಗಳ ಮಧ್ಯೆ
ನನ್ನೆಸರ ಕರೆದ ಅವಳ ಧ್ವನಿಗಿಂತ ಒಳ್ಳೆ ಸಂಗೀತ ಉಂಟೆ.

ದುಂಬಿಯೊಡನೆ ಚುಂಬನ ಸಮರಕ್ಕಾಗಿಯೇ
ಪದರ ಪದರಗಳನ್ನು ಭೇದಿಸಿಕೊಂಡು
ಅರಳಿನಿಂತ ಹೂವಿಗೆ ದುಂಬಿಯ ಝೆಂಕಾರ ಕೇಳಿಸಿದರೆ
ದುಂಬಿಗೂ -ಹೂವಿಗೂ ಇರುವ ನಂಟಿಗೆ ಸಾಟಿಯುಂಟೆ

ನಿಡುಜಡೆಯ ಮಧ್ಯೆದಲ್ಲಿ ಮಲ್ಲಿಗೆಯ ಮುಡಿದು
ಹಸಿರು ಧಾವಣಿಯ ಸೆರಗ ಸೊಂಟಕ್ಕೆ ಸಿಕ್ಕಿಸಿ
ಮುಂಗೈಯ ಗಾಜಿನ ಬಳೆಗಳ ಹಿಂದಕ್ಕೆ ಸರಿಸಿ
ಬಿರುಸಿನೆಜ್ಜೆಗಳಲ್ಲಿ ನನ್ನೆಡೆಗೆ ಬರುವ ಅವಳ ನಡಿಗೆ ಸಾಟಿಯುಂಟೆ

ಭೂಮಾತೆಯ ಮೈತುಂಬಲಿಕ್ಕಾಗಿಯೇ
ಮೋಡಗಳ ಚದುರಿಸಿ ಮಿಂಚಿನ ಬೆಳಕಲ್ಲಿ
ಇಳೆಗೆ ಮನಸಾರೆ ಸುರಿಯುವ ಮಳೆ ಸುರಿದರೆ
ಇಳೆ-ಮಳೆಗಳ ನಡುವಿನ ಸಂಗಮಕ್ಕೆ ಅಳತೆಯುಂಟೆ

ಮುನಿಸಿನ ಮೊಗದಲ್ಲೇ ಮುದ್ದಿಸಲು ಸನಿಹ ಬಂದು
ಕಣ್ಣಂಚಲ್ಲಿ ಜಿನುಗಿದ ಹನಿಯ ಒರೆಸಿ
ಬೆರಳೊಳಗೆ ಬೆರಳು ಸೇರಿಸಿ ಬೆಸದ ಬೆಸುಗೆಗೆ
ಮರುಳಾಗುವ ನನ್ನ ಈ ಕನಸು ಕಲ್ಪನೆಗೆ ಬೇಲಿಯುಂಟೆ....!
                                                                                   -ಕನ್ನಡ ವೆಂಕಿ  03.08.2015




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು