ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

 ನಮಸ್ಕಾರ ಸ್ನೇಹಿತರೇ,

ಈ ನೆನಪುಗಳೇ ಹಾಗೆ ಅಲ್ವಾ, ಸದಾ ಕಾಡುತ್ತವೆ, ಅಳಿಸುತ್ತವೆ, ನಗಿಸುತ್ತವೆ ಒಳಗೊಳಗೆ ಒಂಥರಾ ಖುಷಿ ನೀಡುತ್ತವೆ. ಇಂಥ ಎಲ್ಲಾ ಭಾವನೆಗಳನ್ನು ಒಮ್ಮೆಲೆ ಅನುಭವಿಸಿದ್ದು ನಮ್ಮ ಕೂಟಗಲ್‌ ನ ಪಂಡಿತ್‌ ನೆಹರೂ ಪ್ರೌಡಶಾಲೆಯ ಗುರುಗಳ ಗುರುವಂದನಾ ಕಾರ್ಯಕ್ರಮದಲ್ಲಿ.

ನಮ್ಮ ಬ್ಯಾಚ್‌ ಅಂದರೆ ೧೯೯೯ ರ ಎಸ್‌ ಎಸ್ ಎಲ್‌ ಸಿ ಬ್ಯಾಚ್‌ ಗೆ ೨೫ ವರ್ಷ ತುಂಬಿತು. ಕಾಕತಾಳಿಯಾವೆಂಬಂತೆ ಈ ವರ್ಷವೇ ನಮ್ಮ ಶಾಲೆಯ ಹಿರಿಯ ವಿಧ್ಯಾರ್ಥಿಗಳ ತಂಡ ಗುರುವಂದನಾ ಕಾರ್ಯಕ್ರಮ ಏರ್ಪಡಿಸಿತ್ತು. ಈ ಕಾರ್ಯಕ್ರಮದ ಬಗ್ಗೆ ಗೊತ್ತಾದಾಗಲೇ ಮನಸ್ಸು  ಆ ದಿನಗಳ ನೆನಪುಗಳಿಗೆ ಜಾರಿಹೋಗಿತ್ತು. ಯಾವುದೇ ಕಾರಣಕ್ಕೂ ಈ ಕಾರ್ಯಕ್ರಮ ಮಿಸ್‌ ಮಾಡಲೇಬಾರದು ಎಂದು ನಿರ್ಧರಿಸಿಬಿಟ್ಟಿದ್ದೆ.

ದಶಕಗಳ ನಂತರ ಆ ಶಾಲಾ ಕಟ್ಟಡದ ಆವರಣಕ್ಕೆ ಕಾಲಿಟ್ಟ ತಕ್ಷಣ ಮೈ ರೋಮಾಂಚನವಾಯಿತು. ೨೫ ವರ್ಷಗಳ ನೆನಪು ಒಮ್ಮೆಲೆ ಮೂಡಿಬಂತು. ಈ ಶಾಲೆ ಬಿಟ್ಟು ಹೋದ ಮೇಲೆ ಪಿಯು ಕಾಲೇಜು, ಡಿಗ್ರಿ ಕಾಲೇಜು, ಯೂನಿವರ್ಸಿಟಿಗಳಲೆಲ್ಲಾ ಕಲಿತ ನಮಗೆ ಅಲ್ಲಿನ ಯಾವುದೂ ನೆನಪಿಲ್ಲ, ಆದರೆ ೨೫ ವರ್ಷಗಳ ಹಿಂದೆ ಕಲಿತ ಈ ಶಾಲೆಯಲ್ಲಿ ಒಂದೊಂದು ಜಾಗದ ನೆನಪೂ ಒಂದೂಂದು ಘಟನೆಗಳೂ ಸಹ ಇನ್ನು ಮನಸ್ಸಿನಾಳದಲ್ಲಿ ಹಾಗೆಯೇ ಇದ್ದವು. ಈದಿನ ಅವುಗಳೆಲ್ಲಾ ಹಾಗೇ ಜಾರಿಬಂದವು.

ಒಬ್ಬೊಬ್ಬರಾಗಿಯೇ ಹಳೇ ಸ್ನೇಹಿತರು ಜೊತೆ ಸೇರಿದರು, ಅವರ ಕಣ್ಣುಗಳಲ್ಲಿಯೂ ಸಹ ಆ ಅತೀವ ಆನಂದದ ಭಾವನೆಯನ್ನು ಕಾಣಬಹುದಾಗಿತ್ತು. ಎಲ್ಲರೂ ಸೇರಿ ನಾವು ಕಲಿತ ಒಂದು ತರಗತಿಯ ಒಳಹೊಕ್ಕಾಗ, ಇನ್ನೂ ಅದೇ ಹಳೇ ಮರದ ಡೆಸ್ಕುಗಳು ನಮ್ಮನ್ನು ಸ್ವಾಗತಿಸಿದೆವು. ಅಂದು ಆರು ಜನ ಕೂರುತ್ತಿದ್ದ ಆ ಡೆಸ್ಕಿನ ಮೇಲೆ ಇಂದು ಇಬ್ಬರೇ ಕುಳಿತೆವು.. ಆ ಕ್ಷಣಕ್ಕೆ ೪೦ ವರ್ಷದ ನಾವೆಲ್ಲ ೧೫ ವರ್ಷದ ಮಕ್ಕಳಾಗಿದ್ದೆವು.  ಒಬ್ಬೊಬ್ಬರೂ ಒಂದೊಂದು ನೆನಪುಗಳನ್ನು ಮೆಲುಕು ಹಾಕುತ್ತಿದ್ದರು.

ಆ ಡೆಸ್ಕು, ಕಿಟಕಿ, ಗೋಡೆ, ಪಡಸಾಲೆ ನೋಡುತ್ತಿದ್ದಾಗಲೇ ಕಣ್ಣೀರು ಬರತೊಡಗಿತು. ಆ ಮೈದಾನದಲ್ಲಿ ಆಡಿದ ಆಡಗಳು, ಕರಿಯಣ್ಣನ ಅಂಗಡಿಯ ಕಡ್ಲೆಪುರಿ, ಕಡ್ಲೆಕಾಯಿಯ ನೆನಪಾಯಿತು.


೧೯೯೫ ರ ಜೂನ್‌ ಮೊದಲನೇ ವಾರ ನಾನು ಈ ಹೈಸ್ಕೂಲ್‌ ಆವರಣಕ್ಕೆ ಮೊಟ್ಟ ಮೊದಲ ಬಾರಿಗೆ ಕಾಲಿಟ್ಟೆ. ನಮ್ಮ ಸುತ್ತುಮುತ್ತಲ ಹಳ್ಳಿಗಳಿಗೆಲ್ಲಾ ಈ ಕೂಟಗಲ್‌ ಶಾಲೆಯ ಬಹಳ ಹೆಸರುವಾಸಿಯಾಗಿತ್ತು. ರಾಮನಗರದ ಹೈಸ್ಕೂಲ್‌ ನಮ್ಮ ಹಳ್ಳಿಗೆ ಹತ್ತಿರವಿದ್ದರೂ ಸಹ ನಾನು ಕೂಟಗಲ್‌ ಗೆ ಸೇರಿದೆ.

ಈ ಕೂಟಗಲ್‌ ನ ಹೈಸ್ಕೂಲ್‌ ನಲ್ಲಿ ಆದಿನಗಳಲ್ಲಿ ಶಾಲೆ ಕಲಿಯುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ, ಈಗಾಗಲೇ ಕೂಟಗಲ್‌ ಶಾಲೆಯಲ್ಲಿ ಕಲಿಯಲು ಬಂದು ಅರ್ಧಕ್ಕೆ ಶಾಲೆ ಬಿಟ್ಟವರ ಉಚಿತ ಹಿತವಚನಗಳು ನನಗೆ ದಿಗಿಲು ಹುಟ್ಟಿಸಿದ್ದಂತೂ ನಿಜ. “ಹೋಗು ಹೋಗು ಅಲ್ಲಿನ ಮೇಷ್ಟ್ರು ಕೈಲಿ ಒದೆ ತಿಂದ್ರೆ ನಿನಗೆ ಗೊತ್ತಾಗತ್ತೆ, ಆ ಎಂ.ಸಿ.ಎಂ, ವಿ.ಸಿ, ವಿ.ಇ.ಕೇ, ಟಿಜಿಎನ್‌ ಇವರೆಲ್ಲ ಕೊಡೋ ಏಟು ಹೆಂಗಿರತ್ತೆ ಗೊತ್ತಾ” ಅಂತ ಹೆದರಿಸಿಬಿಟ್ಟಿದ್ದರು.

ಆದರೂ ನನ್ನ ತಾಯಿ ಹಠ ಮಾಡಿ ಇಲ್ಲಿಗೆ ಸೇರಿಸಿದರು, ಆ ಹಿಂದಿ ಮೇಷ್ಟು ಎಂ.ಸಿ.ಎಂ ನಮ್ಮ ತಾಯಿಗೆ ಸಂಬಂಧದಲ್ಲಿ ಚಿಕ್ಕಪ್ಪನಾಗಬೇಕಿತ್ತು. ಆ ಧೈರ್ಯದಲ್ಲಿ ನನ್ನನ್ನು ಇಲ್ಲಿಗೆ ಸೇರಿಸಿದ್ದರು.

ಮೊದಲನೇ ದಿನವೇ  ವಿ.ಇ.ಕೇ ಅವರ ರೌದ್ರಅವತಾರ ನನ್ನನ್ನು ಬೆಚ್ಚಿ ಬೀಳಿಸಿತ್ತು. ಮೊದಲ ಬಾರಿಗೆ ಖಾಕಿ ಪ್ಯಾಂಟ್‌ ತೊಟ್ಟ ಖುಷಿಯಲ್ಲಿ ಇನ್‌ ಶರ್ಟ್‌ ಮಾಡಿಕೊಂಡು ಹೋಗಿದ್ದ ನನ್ನನ್ನು ನೋಡಿ, “ಲೇ ಬಿಚ್ಚೋ ಇನ್‌ ಶರ್ಟ್‌, ಏನು ಸ್ಟೈಲ್‌ ಮಾಡೋಕೆ ಬಂದಿದಿಯಾ ಇಲ್ಲಿ” ಒಂದು ಗದರು ಹಾಕಿದ್ದರು. ಅಂದಿನಿಂದ ಮೂರು ವರ್ಷ ಈ ಶಾಲೆಯಲ್ಲಿ ಇನ್‌ ಶರ್ಟ್‌ ಮಾಡಲೇ ಇಲ್ಲ ಹಾಗು ಇನ್‌ ಶರ್ಟ್‌ ಮಾಡಿದ ಒಬ್ಬ ವಿಧ್ಯಾರ್ಥಿಯನ್ನು ನೋಡಲೇ ಇಲ್ಲ. ( ವಿ.ಇ,ಕೆ ಮಾತ್ರ ಭಾರಿ ಸ್ಟೈಲ್‌ ಮಾಡ್ತಿದ್ದರು, ಕಪ್ಪು ಕನ್ನಡಕ, ಬಲಗೈಗೆ ವಾಚ್‌ ಹಾಗು ಇನ್ನ ಶರ್ಟ್‌ ಇಲ್ಲದೇ ಶಾಲೆಗೆ ಬರುತ್ತಿರಲಿಲ್ಲ ಅವರು).

ನಮ್ಮ ಊರು ವಿಜಯಪುರದಿಂದ ನಾನೊಬ್ಬನೇ ಬರುತ್ತಿದ್ದೆ, ನಮ್ಮ ಪಕ್ಕದ ಊರು ಜಯಪುರದಿಂದ ಜಿ.ವಿ.ಕುಮಾರ, ಚಲುವರಾಜ್‌, ಗೋಪಿ, ಸೌಭಾಗ್ಯ, ನೀಲಮ್ಮ ಹಾಗು ಮಣಿ ಬರುತ್ತಿದ್ದರು. ನಮ್ಮ ಪಕ್ಕದ ಊರಿನ ಗೊಲ್ಲರದೊಡ್ಡಿಯಿಂದ ರಮೇಶ್‌ ಹಾಗು ನಾಗರಾಜ್‌ ಬರುತ್ತಿದ್ದರು ಅವರು ನಮ್ಮ ಸೀನಿಯರ್‌ ಗಳು. ಒಮ್ಮೊಮ್ಮೆ ನಾನು ಅವರ ಸೈಕಲ್ ನಲ್ಲಿ ಬರುತ್ತಿದೆ.

ಬೆಳಿಗ್ಗೆ ಹೊತ್ತು ಮಹದೇಶ್ವರ ಅಂತ ಒಂದು ಬಸ್‌ ಬರುತ್ತಿತ್ತು ಅದರಲ್ಲಿ ೫೦ ಪೈಸೆ ಕೊಟ್ಟು ಟಾಪ್‌ ಮೇಲೆ ಕುಳಿತು ಪ್ರಯಾಣ ಮಾಡುತ್ತಿದ್ದೆವು. ಬಸ್‌ ಇಲ್ಲದ ದಿನ ಒಂದು ಮಿನಿ ಬಸ್‌ ಬರುತ್ತಿತ್ತು, ಅದರಲ್ಲಿ ಸೀಟುಗಳಿರುತ್ತಿರಲಿಲ್ಲ, ಕುರಿಗಳನ್ನು ತುಂಬಿದ ಹಾಗೆ ತುಂಬುತ್ತಿದ್ದರು. ನಾವು ಒಂದಷ್ಟು ಜನ ನಮ್ಮ ಜಯಪುರ ಗೇಟ್‌ ನಲ್ಲಿ ಬಸ್‌ ಟಾಪ್‌ ಮೇಲೆ ಹತ್ತಿ, ಕಂಡಂಕ್ಟರ್‌ ಶ್ಯಾನುಬೋಗನಹಳ್ಳಿಯಲ್ಲಿ ಟಾಪ್‌ ಮೇಲೆ ಬರುವಷ್ಟರಲ್ಲಿ ಇಳಿದು ಓಡಿಬಿಡುತ್ತಿದ್ದೆವು. ಆ ೫೦ ಪೈಸೆ ಮಧ್ಯಾಹ್ನದಲ್ಲಿ ಕಡ್ಲೆಪುರಿಗೆ ಆಗುತ್ತಿತ್ತು. ಸಂಜೆ ವೇಳೆ ಮಾಗಡಿಯಿಂದ ರಾಮನಗರಕ್ಕೆ ಬರುತ್ತಿದ್ದ ಲಕ್ಷಿನರಸಿಂಹ ಬಸ್‌ನಲ್ಲಿ ವಾಪಸ್‌ ಪ್ರಯಾಣ. ಆ ಬಸ್‌ ಇಲ್ಲವಾದರೆ, ನಡಿಗೆಯೇ ಗತಿ ನಮಗೆ, ಕೂಟಗಲ್‌ ಕರೆ ಹಾದಿಯಿಂದ ಹಿಡಿದು, ಹೊಸೂರಿನ ಮೇಲೆ ಶ್ಯಾನುಭೋಗನಹಳ್ಲಿ ತಲುಪಿ, ಜೇಬಲ್ಲಿ ಕಾಸಿದ್ದರೆ ಅಲ್ಲಿನ ಅಂಗಡಿಯಲ್ಲಿ ಬಜ್ಜಿ ತಿಂದು ನಡೆದುಕೊಂಡು ಹೋಗಬೇಕಿತ್ತು.

ಆಗ ನಮಗೆ ಪಾಠ ಮಾಡುತ್ತಿದ್ದವರೆಂದರೆ:

ಎಸ್.ಹೆಚ್ – ಸಿದ್ದಯ್ಯ – ಗಣಿತ (ಮುಖ್ಯ ಶಿಕ್ಷಕರು)

ವಿ.ಆರ್‌ - ವಿ ರಾಮಕೃಷ್ಣಯ್ಯ – ಕೃಷಿ

ಡಿ.ಆರ್-‌ ಡಿ.ರಂಗಣ್ಣ – ದೈಹಿಕ ಶಿಕ್ಷಣ

ಪಿ.ಆರ್‌ - ಪಿ.ರಾಮಾಂಜು – ಸಮಾಜ

ಎಂ.ಸಿ.ಎಂ- ಎಂ.ಸಿ ಮಲ್ಲಯ್ಯ – ಇಂಗೀಷ್

ವಿ.ಸಿ – ವಿ.ಚಂದ್ರಪ್ಪ – ವಿಜ್ಞಾನ

ಎಂ.ಸಿ.ಜಿ – ಎಂ.ಸಿ. ಮರಿಚನ್ನೆಗೌಡ – ಹಿಂದಿ

ಹೆಚ್.ವಿ.ಡಿ – ಹೆಚ್.ವಿ ದೇವರಾಜು – ಸಮಾಜ

ಟಿ.ಜಿ.ಎನ್-‌ ತಿಮ್ಮಪ್ಪ ಗಣಪ್ಪ ನಾಯಕ್‌ - ಇಂಗ್ಲೀಷ್‌

ಜೆ.ಜೆ.ಎನ್‌ - ಜನಾರ್ಧನ ಜಟ್ಟಿ ನಾಯಕ್‌ - ಕನ್ನಡ

ಎಂ.ಎಸ್‌ - ಎಂ.ಶಿವಣ್ಣ - ಕನ್ನಡ

ವಿ.ಇ.ಕೆ- ವಿ.ಇ ಕರಡೀಗೌಡ – ಗಣಿತ

ಟಿ.ಎಂ.ಎಸ್-‌ ಟಿ.ಎಂ ಶಿವಣ್ಣ - ಗಣಿತ ವಿಜ್ಞಾನ

ಎಸ್.ಎಲ್-‌ ಶಿವಲಿಂಗಯ್ಯ - ಗಣಿತ ವಿಜ್ಞಾನ

ಕೆ.ಎನ್-‌ ಕೆ.ನಂಜಮ್ಮ - ಹಿಂದಿ

ಈ ಒಬ್ಬೊಬ್ಬ ಮೇಷ್ಟ್ರುಗಳದ್ದು ಒಂದೊಂದು ಥರ ಸ್ಟ್ರಿಟ್.‌ ಶಾಲೆಯ ಬೆಲ್‌ ಆಗುತ್ತಿದ್ದದ್ದು ೧೦.೨೦ ಕ್ಕೆ ಆದರೆ ೧೦ ಘಂಟೆಯಾದ ನಂತರ ಬಹುತೇಕ ವಿಧ್ಯಾರ್ಥಿಗಳ ದೃಷ್ಟಿ ಶಾಲೆಯ ಗೇಟ್‌ ನ ಕಡೆಗೆ ಇರುತ್ತಿತ್ತು. ಯಾಕೆಂದರೆ ವಿ.ಸಿ ಮತ್ತು ಎಂ.ಸಿ.ಎಂ ಇಬ್ಬರೂ ಒಟ್ಟಿಗೆ ಒಂದೇ ಗಾಡಿಯಲ್ಲಿ ಬರುತ್ತಿದ್ದರು. ಯಾವುದಾದರು ಒಂದು ದಿನ ಇವರ ಗಾಡಿಯಲ್ಲಿ ಒಬ್ಬರೇ ಬಂದರೆಂದರೆ ಇಡೀ ಮೈದಾನದಲ್ಲಿ ಇರುತ್ತಿದ್ದ ವಿದ್ಯಾರ್ಥಿಗಳಿಗೆ ಆನಂದವೋ ಆನಂದ. ಇವತ್ತೊಂದಿನ ಏಟು ತಿನ್ನೋದು ತಪ್ಪಿತು ಎಂಬ ಖುಷಿ.

ವಿಜ್ಞಾನ ಪಾಠ ಮಾಡುತ್ತಿದ್ದ ವಿ.ಸಿ ಅವರ ಕೈಯಲ್ಲಿನ ಒಂದು ಸಣ್ಣ ದೊಣ್ಣೇಯ ಏಟು ತಿನ್ನದವರಿಲ್ಲ, ಅಂಗೈಯನ್ನು ಹಿಂದಕ್ಕೆ ಮಡಚಿ, ಬೆರಳುಗಳು ಗಿಣ್ಣಿನ ಮೇಲೆ ಬೀಳುತ್ತಿದ್ದ ಆ ಏಟುಗಳನ್ನು ಮರೆಯಲಾಗುವುದೇ.

ಟಿ.ಜಿ.ಎನ್‌ ರವರ ಕೋಪಕ್ಕೆ ಬಲಿಯಾಗದವರುಂಟೆ. ಆದರೂ ಟಿ.ಜಿ.ಎನ್‌ ಅವರ ಇಂಗೀಷ್‌ ಚಾಕಚಕ್ಯತೆಗೆ ಸಾಟಿ ಇಲ್ಲಬಿಡಿ.

ಕನ್ನಡ ಎಂ.ಎ ಮಾಡಿದ ನನಗೆ, ಇಂದಿಗೂ ನಮ್ಮ ಎಂ.ಎಸ್.‌ ಮೇಷ್ಟ್ರು ಹೇಳಿಕೊಟ್ಟ ಲಘು, ಗುರು, ಮಾತ್ರೆ ಯ ವ್ಯಾಕರಣವೇ ನೆನಪಿಗೆ ಇರೋದು.

ಟಿ.ಎಂ.ಎಸ್‌ ಅಂದ್ರೆ ಒಂಥರಾ ಭಯ, ಅವರು ತರಗತಿ ಒಳಗೆ ಬಂದ ತಕ್ಷಣವೇ ಓಡಿಹೋಗಿಬಾಗಿಲು ಮುಚ್ಚಬೇಕಿತ್ತು. ಮೊದಲನೇ ಡೆಸ್ಕಿನ ಮೇಲೆ ಕುಳಿತುಕೊಳ್ಳುತ್ತಿದ್ದ ನನಗೆ ಆ ಕೆಲಸ ಖಾಯಂ ಆಗಿತ್ತು.

ಹಿಂದಿ ತರಗತಿಯಲ್ಲಿ ಯಾರದರೂ ಆಕಳಿಸಿದರೆ, “ ಆಕಳಿಸಿಂಗ್‌ + ತೂಕಡಿಸಿಂಗ್=‌ ನಿದ್ದೆ ಮಾಡಿಂಗ್”‌ ಅಂತ ತಮ್ಮ ಬೆರಳುಗಳಿಂದಲೇ ತಲೇಯ ಮೇಲೆ ಮೊಟಕುತ್ತಿದ್ದರು ಎಂ,ಸಿ.ಜಿ.

ಗಣಿತ ಪಾಠ ಮಾಡಲು ಬರುತ್ತಿದ್ದ, ಎಸ್.ಹೆಚ್.‌ ಯಾರದರೂ ಡೆಸ್ಕುಗಳ ಮೇಲೆ ಬ್ಯಾಗುಗಳನ್ನು ಇಟ್ಟಿದ್ದರೆ, ಅದೆಲ್ಲಿಂದ ಅವರಿಗೆ ಕೋಪ ಬರುತ್ತಿತ್ತೋ, ದಬಾರನೆ ಎಲ್ಲಾ ಬ್ಯಾಗುಗಳನ್ನು ಎತ್ತಿ ಬಿಸಾಕಿಬಿಡುತ್ತಿದ್ದರು.

ಸದಾ ತಾಯಿಯ ಮಮತೆಯಿಂದಲೇ ಪಾಠ ಮಾಡುತ್ತಿದ್ದವರು ಕೆ.ಎನ್‌ ಮೇಡಮ್‌, ಶಾಲೆಯಲ್ಲಿ ಇದ್ದ ಏಕೈಕ ಮಹಿಳಾ ಶಿಕ್ಷಕರು ಇವರು. ಹಿಂದಿ ಮತ್ತು ಸಮಾಜ ಪಾಠ ಮಾಡುತ್ತಿದ್ದರು. ಇವರು ನಮಗೆ ಹೊಡೆದಿದ್ದು ಬಹಳ ಅಪರೂಪ

ಸದಾ ಮೃದು ಜೀವವೆಂದರೆ ಅದು ಹೆಚ್.ವಿ,ಡಿ ಸರ್‌, ಅವರು ನೋಡಲು ಥೇಟ್‌ ಹೆಚ್.ಡಿ.ಕುಮಾರಸ್ವಾಮಿಯ ರೂಪವೇ ಅವರದು. ವಿ.ಇ.ಕೆ ಮತ್ತು ಅವರದ್ದು ಕುಚಿಕು ಜೋಡಿ..

ಪಿ.ಟಿ ಮಾಸ್ಟರ್‌ ಡಿ.ಆರ್‌ ಸಹ ಮೃದು ಸ್ವಭಾವದ ವ್ಯಕ್ತಿ. ಕಪ್ಪು ಕನ್ನಡಕ ಬಾಯಲ್ಲಿ ಸೀಟಿ ಹಿಡಿದು ಇಡೀ ಮೈದಾನ ಸುತ್ತುತ್ತಿದ್ದ ವ್ಯಕ್ತಿ.

“ಲೇ ಬಾರೋ ಇಲ್ಲಿ, ಹೋಗಿ ಕೋಳಿಕಸ ತಗೋಬಾರೋ” ಎನ್ನುತ್ತಿದ್ದವರು ವಿ.ಆರ್‌ ಮೇಷ್ಟ್ರು.

ಇನ್ನು ಪಿ.ಆರ್‌ ಮೇಷ್ಟ್ರು ಅಷ್ಟೇ, ಕೋಪ ಮಾಡಿಕೊಂಡಿದ್ದೇ ಬಹಳ ಕಡಿಮೆ. ಅವರದು ಗಂಭೀರ ವ್ಯಕ್ತಿತ್ವ. ಸಮಾಜ ಬೋಧನೆಯಲ್ಲಿ ಅವರ ಮೀರಿಸಿದವರು ನಮಗೆ ಯಾವ ಕಾಲೇಜು/ಯೂನಿವರ್ಸಿಟಿಯಲ್ಲಿಯೂ ಕಾಣಲಿಲ್ಲ.

ಪ್ರಸ್ತುತ, ಎಂ.ಎಸ್‌, ಎಂ.ಸಿ.ಜಿ, ವಿ.ಸಿ, ಎಸ್.ಹೆಚ್,  ಡಿ.ಆರ್‌, ಹೆಚ್.ವಿ.ಡಿ ಸರ್‌ ಗಳು ನಮ್ಮ ಜೊತೆ ಇಲ್ಲ, ಆದರೆ ಇವರ ಆಶೀರ್ವಾದ ಸದಾ ನಮ್ಮ ಮೇಲೆ ಇರುತ್ತದೆ.

ಈ ಗುರುವಂದನಾ ಕಾರ್ಯಕ್ರಮದಲ್ಲಿ ವಿ.ಇ.ಕೆ, ಎಂಸಿಎಂ, ಪಿಆರ್‌, ವಿಆರ್‌, ಟಿ.ಜಿ.ಎನ್‌, ಕೆ.ಎನ್‌ , ಟಿಎಂಎಸ್‌ ಗುರುಗಳನ್ನು ಮಾತ್ರ ನೋಡುವ ಭಾಗ್ಯ ನಮ್ಮದಾಯಿತು.  ವಿ.ಇ.ಕೆ ದು ಇಂದಿಗೂ ಅದೇ ಗತ್ತು ಗೈರತ್ತು. ವಯಸ್ಸಾದರೂ ಸಹ ಅದೇ ಆದಿನಗಳ ಗತ್ತು.

ಪಿ.ಆರ್‌ ಸರ್‌ ಮಾತ್ರ ಆಗ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ, ಅವರಿಗೆ ವಯಸ್ಸಾದಂತೆಯೇ ಕಾಣುವುದಿಲ್ಲ. 

ಇವರೆಲ್ಲರನ್ನು ನೋಡಿ ಅಲ್ಲಿದ್ದ ಪ್ರತಿಯೊಬ್ಬರೂ ಅವರವರ ಬಾಲ್ಯದ ದಿನಗಳಿಗೆ ಜಾರಿಹೋಗಿದ್ದರು. ಕೂಟಗಲ್‌ ಗ್ರಾಮದ ಮಧ್ಯಭಾಗದಿಂದ ಡೊಳ್ಳು ಕುಣಿತದೊಂದಿಗೆ ಈ ಶಿಕ್ಷಕರನ್ನು ಶಾಲಾ ಆವರಣಕ್ಕೆ ಕರೆತರಲಾಯಿತು. ಪ್ರತಿಯೊಂದು ಮನೆಯವರೂ ಸಹ ಈ ಶಿಕ್ಷಕರ ಬಳಿ ಬಂದು ಯೋಗ ಕ್ಷೇಮವಿಚಾರಿಸುತ್ತಿದ್ದರು. ಶಾಲಾ ಆವರಣದಲ್ಲಿ ಪುಷ್ಪಮಳೆಗರೆಯಲಾಯಿತು. ಆ ಶಿಕ್ಷಕರು ಮುಖದಲ್ಲಿದ್ದ ಸಂತೋಷ ಹಾಗು ಹಳೇ ವಿಧ್ಯಾರ್ಥಿಗಳ ಸಂಭ್ರಮವನ್ನು ಪದಗಳಲ್ಲಿ ವರ್ಣಿಸಲಾಗದು.

ಇಂಥ ಒಂದು ಅಧ್ಬುತ ಕಾರ್ಯಕ್ರಮವನ್ನು ಮಾಡುವ ಯೋಚನೆಮಾಡಿದ ಮನಸ್ಸುಗಳಿಗೆ ಅನಂತಾನಂತ ಧನ್ಯವಾದಗಳು.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು