ಹೆತ್ತವಳು...


ಪುಟ್ಟ ಕಂದನ ಮೊದಲ ತೊದಲು ನುಡಿಯೇ ಅಮ್ಮ. ಬಾಯಲ್ಲಿ ಜೊಲ್ಲು ಸುರಿಸುತ್ತಾ ತೊದಲು ನುಡಿಯಲ್ಲಿ ಅಮ್ಮಾ ಎಂದರೆ ಸಾಕು, ಆ ತಾಯಿಯ ಮುಖದಲ್ಲಿನ ಆನಂದಕ್ಕೆ ಸಾಟಿಯೇ ಇರುವುದಿಲ್ಲ. ಹೆಣ್ಣಿಗೆ ತಾಯಿ ಎಂಬ ಪಟ್ಟ ಬಂದೊಡನೆಯೇ ಅವಳ ಜೀವನದ ಸರ್ವಸ್ವವೂ ಸ್ವಾರ್ಥತರಹಿತವಾಗಿಬಿಡುತ್ತದೆ. ಇದು ಅವಳಿಗೆ ಆ ದೇವರು ಕೊಟ್ಟ ವರವೋ ಶಾಪವೋ ತಿಳಿಯದು . ತಾಯಿ ಎನಿಸಿಕೊಂಡವಳು ಎಂದಿಗೂ ತನಗೆ ಮಾತ್ರ ಇರಲಿ ಎಂಬುದಾಗಿ ಯೋಚಿಸುವುದಿಲ್ಲ, ಅವಳ ಎಲ್ಲಾ ಯೋಚನೆಗಳಲ್ಲಿಯೂ ತನಗೆ ಮಾತ್ರ ಎಂಬುದಕ್ಕಿಂತ ತನ್ನ ಮಕ್ಕಳಿಗೆ ಎಂಬ ಯೋಚನೆ ಇದ್ದೇ ಇರುತ್ತದೆ. ಈ ಭೂಮಿಗೆ ಬಂದು ಕಣ್ಣು ಬಿಟ್ಟ ಪ್ರತಿಯೊಂದು ಶಿಶುವಿನ ಬಾಯಿಂದ ಮೊದಲು ಬರುವ ಪದವೇ ಅಮ್ಮ.. ಅಳುವಿನಲ್ಲೂ ಮಗು ತನ್ನ ತಾಯಿಯನ್ನು ಅಕ್ಕರೆಯಿಂದ ಅಮ್ಮ... ಎಂದು ಕರೆಯುತ್ತದೆ. ಅಮ್ಮ ಎಂಬುದು ಕೇವಲ ಎರಡೂವರೆ ಅಕ್ಷರಗಳ ಒಂದು ಪದ ಅಷ್ಟೆ ಆದರೆ ಆ ಪದದ ಒಳಗಿನ ಭಾವನೆಗಳು ಮಾತ್ರ ಸಾವಿರ ಸಾವಿರ. ಭಾಷೆ ಯಾವುದೇ ಆಗಿರಲಿ ಅಮ್ಮ ಎಂಬುದು ಹೃದಯದಿಂದ ಮಧುರವಾಗಿ ಮಾರ್ದನಿಸುವ ಶಬ್ದ.
ನಮ್ಮ ನಡುವೆ ಹುಡುಕಿದರೆ ಕೋಟ್ಯನುಕೋಟಿ ಕೆಟ್ಟ ಮಕ್ಕಳು ದೊರಕುತ್ತಾರೆ. ಆದರೆ, ಕೆಟ್ಟ ತಾಯಿ ಎನಿಸಿಕೊಂಡವರು ಮಾತ್ರ ವಿರಳಾತಿವಿರಳ . ತಾಯಿ ಮಮಕಾರ, ಸಹನೆಯ ಸಾಕಾರ ಮೂರ್ತಿ. ತಾಯಿಯ ಹೃದಯ ಬಹು ಮೃದು ಆದರೆ ಮಕ್ಕಳ ವಿಷಯಕ್ಕೆ ಬಂದಾಗ ಮನಸ್ಸು ಮಾತ್ರ ಬಹಳ ಗಟ್ಟಿ , ಏನೇ ಆದರೂ ತನ್ನ ಮಕ್ಕಳನ್ನು ಬಿಟ್ಟುಕೊಡದ ಛಲ. ಆದರೆ ಈ ಸಹನೆಯ ಮೂರ್ತಿಯ ಹೃದಕ್ಕೆ ಕಿಚ್ಚನ್ನು ಹಚ್ಚುವ ಮಕ್ಕಳಿಗೆ ಯಾಕೆ ತಾಯಿಯ ಆರ್ತನಾದ ಕೇಳಿಸದೋ ತಿಳಿಯದು. ತನ್ನ ಛಲದಿಂದಲೇ ತನ್ನ ಮಗನನ್ನು ಸಮಾಜ ಪ್ರಸಿದ್ದ ವ್ಯಕ್ತಿಯಾಗಿಸಿದ ತಾಯಿ ಕೊನೆಗೆ ಪಟ್ಟಣದ ವೈಭೋಗದಲ್ಲಿ ಮೈಮರೆತಿದ್ದ ತನ್ನ ಮಗನನ್ನು ನೋಡಲು ಬಂದು ಬೀದಿ ಪಾಲಾದ, ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತ ಕಥೆಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ...



ರಾತ್ರಿ ಊಟವಾದ ನಂತರ ನಾನು ನನ್ನ ಸ್ನೇಹಿತ ಒಂದಷ್ಟು ದೂರ ನಡೆದಾಡುವ ಅಭ್ಯಾಸವಿತ್ತು. ಬೆಳಿಗ್ಗೆಯಿಂದ ಶಬ್ದಗಳ ಜಾತ್ರೆಯಲ್ಲಿ ಮೂರ್ಚೆ ಹೋಗಿದ್ದ ಗುಬ್ಬಚ್ಚಿಗಳು ತಮ್ಮ ಗೂಡಿನಲ್ಲಿ ನಿದ್ರೆಗೆ ಜಾರುತ್ತಿದ್ದವು. ನನ್ನ ರೂಮಿನಿಂದ ಸ್ವಲ್ಪ ದೂರದಲ್ಲೇ ಇರುವ ಒಂದು ಪಾರ್ಕಿನ ಕಡೆ ಹೆಜ್ಜೆ ಹಾಕಿದೆವು . ಆ ಪಾರ್ಕಿನ ಒಳಗಡೆ ಒಂದು ಕಲ್ಲು ಬೆಂಚಿನ ಮೇಲೇ ವೃದ್ದ ಜೋಡಿಯೊಂದು ಕುಳಿತಿತ್ತು. ನೋಡಿದ ತಕ್ಷಣವೇ ಅವರು ಹಳ್ಳಿಯವರು ಎಂಬುದು ತಿಳಿಯುತಿತ್ತು. ಸಮಾರು 70 ರ ವಯಸ್ಸಿನ ಅಜ್ಜ ಇನ್ನೂ ಬಹಳ ಗಟ್ಟಿ ಮುಟ್ಟಾಗಿಯೇ ಇದ್ದ, ಅಜ್ಜಿಯ ಹಣೆಯ ಮೇಲಿನ ಕುಂಕುಮ ಬೆಳಗಿನ ಸೂರ್ಯೋದಯವನ್ನು ನೆನಪಿಸುವಂತೆ ರಾರಾಜಿಸುತ್ತಿತ್ತು. ಆದರೆ ಅವರಿಬ್ಬರ ಮುಖದಲ್ಲಿಯೂ ಸಂತಸದ ಛಾಯೆ ಮಾತ್ರ ಇರಲಿಲ್ಲ. ಅದು ಬೇರೆಯವರಿಗೆ ತಿಳಿಯದಿರಲೆಂದೇ ನಗು ಮುಖದ ಮುಖವಾಡ ಧರಿಸಿ ಅಲ್ಲಿ ಕುಳಿತಿದ್ದರು. ಸ್ವಲ್ಪ ಸಮಯ ತಿರುಗಾಡಿದ ನಮಗೆ ಕಾಲು ಸೋತಿತ್ತು, ಕಣ್ಣುಗಳು ಭಾರವಾಗತೊಡಗಿದ್ದವು. ಪಾರ್ಕಿನ ಬಾಗಿಲು ಮುಚ್ಚುವ ಸಮಯವಾಗಿದ್ದರಿಂದ ಅಲ್ಲಿನ ಕಾವಲುಗಾರ ಎಲ್ಲರನ್ನು ಹೊರಗೆ ಕಳುಹಿಸುತ್ತಿದ್ದ. ಎಲ್ಲರಂತೆಯೇ ನಾವು ಹೊರಬಂದೆವು. ಹೊರಬರುವಾಗ ನಾನು ಆ ಜೋಡಿಯ ಕಡೆಗೊಮ್ಮೆ ನೋಡಿದೆ ಊರಿನಲ್ಲಿನ ನನ್ನ ಅಜ್ಜ ಅಜ್ಜಿಯ ನೆನಪಾಯಿತು ಆ ಕ್ಷಣ. ಅದೇ ನೆನಪಲ್ಲಿ ಮನೆಗೆ ಮರಳಿದೆ. ಒಂದತ್ತು ನಿಮಿಷಗಳ ನಂತರ ಮಲಗಿಕೊಂಡೆವು. ಆದರೆ ನನ್ನ ಮನಸ್ಸು ಮಾತ್ರ ಆ ವೃದ್ದ ದಂಪತಿಯ ಬಳಿಯಲ್ಲೇ ಇತ್ತು , ಇದ್ದಕ್ಕಿದ್ದಂತೆ ನನಗೇನೂ ನೆನಪಾಯಿತು ಆ ಅಜ್ಜಿಯ ಕೈಯಲ್ಲಿ ಭಾರವಾದ, ತುಂಬಿದ ಎರಡು ಬ್ಯಾಗುಗಳಿದ್ದವು. ಅರೇ, ಅವರು ನಮ್ಮಂತೆ ಪಾರ್ಕಿನಲ್ಲಿ ವಿರಮಿಸಲು ಬಂದಿದ್ದರೇ ಅವರ ಕೈಯಲ್ಲಿ ಆ ಬ್ಯಾಗುಗಳು ಯಾಕಿರುತ್ತಿದ್ದವು ಎಂಬ ಆಲೋಚನೆ ಬಂತು . ತಕ್ಷಣವೇ ಅವರ ದುಖ್ಹ ಭರಿತ ಮುಖ ನನ್ನ ಕಣ್ಣುಂದೆ ಬಂತು. ಮನಸ್ಸಿನ ಹೆದ್ದಾರಿಯಲ್ಲಿ ಏನೇನೂ ಯೋಚನೆಗಳು ಹರಿದಾಡಲಾರಂಭಿಸಿದವು . ಗೆಳೆಯನಿಗೆ ತಿಳಿಸಿದರೆ ' ಏ ನಿನ್ನದು ಏನು ಮಾರಾಯ ಅಲ್ಲೇ ಪಕ್ಕದ ಮನೆಯವರಿರಬೇಕು, ತಿರುಗಾಡೋಕೆ ಬಂದಿರ್ತಾರೆ ಬಿಡೋ' ಎಂದುಬಿಟ್ಟ. ಆದರೆ ನನಗೆ ಏನೋ ಹೇಳಲಾಗದ ಸಂಕಟ ಶುರುವಾಗಿತ್ತು. ಮತ್ತೆ ನನ್ನ ಸ್ನೇಹಿತನಿಗೆ ಪೀಡಿಸಿದೆ, ಏನಾದರೂ ಆಗಲಿ ಒಮ್ಮೆ ಅಲ್ಲಿಗೆ ಹೋಗಿ ಬರೋಣ ಬಾ ಎಂದು ಒಪ್ಪಿಸಿದೆ. ಒಲ್ಲದ ಮನಸ್ಸಿನಿಂದ ನಿದ್ದೆಗಣ್ಣಿನಲ್ಲಿಯೇ ಎದ್ದು ಬಂದ . ಸುಮಾರು 10.00 ರ ಸಮಯ ರಸ್ತೆಗಳೆಲ್ಲಾ ನಿರ್ಜನವಾಗಿದ್ದವು, ಮನೆಯೊಳಗಿನ ಬೆಳಕುಗಳು ನಿಧಾನವಾಗಿ ಕರಗುತ್ತಲ್ಲಿದ್ದವು. ವೇಗವಾಗಿ ಹೆಜ್ಜೆ ಹಾಕುತ್ತಾ ನಾವಿಬ್ಬರೂ ಆ ಪಾರ್ಕಿನ ಬಳಿ ಬಂದೆವು . ಎಂದಿನಂತೆ ಆ ಪಾರ್ಕಿನ ಬಾಗಿಲು ಬೀಗ ಜಡಿದಿತ್ತು . ಯಾರು ಕಾಣಿಸಲಿಲ್ಲ, ನನ್ನ ಸ್ನೇಹಿತ 'ಎಂಥ ಹುಚ್ಚುತನ ನಿಂದು ಈ ಹೊತ್ತಲ್ಲಿ ಬಾರೋ" ಎಂದು ಗೊಣಗುತಲೇ ಇದ್ದ. ಅಷ್ಟೇನೂ ದೊಡ್ಡದಲ್ಲದ ಆ ಪಾರ್ಕಿನ ಸುತ್ತಾ ಬಂದರೂ ಯಾರು ಇರಲಿಲ್ಲ. ಸುಮ್ಮನೇ ಏನೇನೋ ಯೋಚನೆ ಮಾಡಿದೆವಲ್ಲಾ ಎನ್ನುತ್ತಾ ಹಿಂದಿರುಗಿದೆವು. ದಾರಿಯಲ್ಲಿ ಬರುತ್ತಾ ಅದೇ ದಾರಿಯಲ್ಲಿನ ಬಸ್ ನಿಲ್ದಾಣದ ಸೀಟುಗಳ ಮೇಲೆ ಕತ್ತಲೆಯಲ್ಲಿ ಯಾರೋ ಕುಳಿತಿರುವುದು ಕಾಣಿಸಿತು. ನನ್ನ ಮನಸ್ಸಿನ ಹಳೇ ಯೋಚನೆಗಳಿಗೆ ಮತ್ತೆ ಬೆಳಕು ಮೂಡಿತು. ಹತ್ತಿರ ಹೋಗಿ ನೋಡಿದರೆ ಆಶ್ಚರ್ಯ ! ನಾನು ಅಂದುಕೊಂಡ ಹಾಗೆ ಅವರು ನಿರಾಶ್ರಿತರ ಹಾಗೆ ಕುಳಿತಿದ್ದರು, ನಿರ್ಭಾವುಕ ಮುಖದ ಅಜ್ಜ ಅವನ ಭುಜಕ್ಕೊರಗಿ ಕಣ್ಣೀರಿನ ಮಳೆಗೆರೆಯುತ್ತಿದ್ದ ಅದೇ ಅಜ್ಜಿ !. ನಮ್ಮನ್ನು ಕಂಡ ತಕ್ಷಣ ಯಾರೋ ಕಳ್ಳರಿರಬೇಕು ಎಂದುಕೊಂಡು ಗಾಭರಿಯಾದರು. ಹತ್ತಿರ ಹೋದ ನಾನು, ಯಾವೂರು ಯಜಮಾನ್ರೇ, ಎಲ್ಲಿಗೆ ಬಂದಿದ್ರೀ, ಹೀಗೆಲ್ಲಾ ಇಲ್ಲಿ ಇರೋಕಾಗಲ್ಲ ಪೋಲಿಸಿನವರು ಬಂದ್ರೆ ಓಡಿಸಿ ಬಿಡ್ತಾರೆ, ಯಾಕೆ ಇಲ್ಲಿ ಕುಳಿತಿದ್ದೀರಾ ಎಂದೆ.. ಒಂದೇ ಸಮನೆ ಕೇಳಿದ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇರಲಿಲ್ಲ.. ಸ್ವಲ್ಪ ಮೌನದ ನಂತರ " ಊರಿಗೆ ಹೋಗಬೇಕಿತ್ತು ಕಣಪ್ಪಾ, ಬಸ್ ಸಿಗ್ನಿಲ್ಲಾ, ಟೇಮಾಗೋಯ್ತು, ಅದ್ಕೆ ಇಲ್ಲೆ ಮನ್ಗಿದ್ದು ಹೊತ್ತಾರೆ ಬಸ್ ಗೆ ಹೋಗುವ ಅಂತಾ ಇಲ್ಲಿ ಕುಂತಿದೀವಿ ಕಣಪ್ಪಾ" ಎಂದ ಅಜ್ಜ. ಅಜ್ಜಿಯ ಕಣ್ಣೀರು ಅಜ್ಜನ ಅರ್ಧ ಅಂಗಿಯನ್ನು ನೆನಸುತ್ತಲೇ ಇತ್ತು . ಅಜ್ಜನ ಮಾತು ನಿಜವೆಂದೇ ಎನಿಸುತ್ತಿದ್ದರು , ಅಜ್ಜಿಯ ಆ ಮುಖಭಾವ ಬೇರೆಯದೇ ಕಥೆ ಹೇಳುತ್ತಿತ್ತು. ಅಪರಿಚಿರ ಬಳಿ ಅಷ್ಟು ಸಾರಸಗಟಾಗಿ ಮಾತನಾಡುವ ಕೌಶಲ ನಮ್ಮ ಹಳ್ಳಿ ಹಿರೀಕರಿಗೆ ಇರುವುದಿಲ್ಲ. ನಾವು ಪಟ್ಟಣದವರಲ್ಲ ಹಳ್ಳಿಯವರೇ ಎಂಬುದು ತಿಳಿದರೇ ಅವರು ಖಂಡಿತ ಅರಾಮವಾಗಿ ಮಾತನಾಡಬಹುದು ಎಂಬ ಆಲೋಚನೆ ಬಂತು . “ ಸರಿ ಯಜಮಾನ್ರೆ , ಆದ್ರೆ ಈ ಥರ ರೋಡಲ್ಲಿ ಇರ್ಬಾರ್ದು ಇದು ಬೆಂಗಳೂರು ಪಟ್ಟಣ ಅಲ್ವಾ, ಯಾವೂರು ನಿಮ್ದು, ನಾನೂ ಹಳ್ಳಿಯವನೇ ಇಲ್ಲೇ ರಾಮನಗರದವನು" ಎಂದು ಅಜ್ಜನನ್ನು ಮಾತನಾಡಿಸಿದೆ. ಹಳ್ಳಿಯವನೇ ಅಂದ ಮೇಲೆ ಅಜ್ಜನು ಸ್ವಲ್ಪ ಆರಾಮವಾದಂತೆ ಎನಿಸಿತು . ಅಜ್ಜಿಯೂ ಕಣ್ಣೊರೆಸಿಕೊಂಡು ಕುಳಿತಿತು. “ ನಮ್ದು ನಾಗಮಂಗಲ ಕಡೆ ಒಂದು ಹಳ್ಳಿ ಕಣಪ್ಪಾ , ಇಲ್ಲೇ ಮಗನ ಮನೆಗೆ ಬಂದಿದ್ವಿ ಊರಿಗೆ ಹೋಗಬೇಕಿತ್ತು, ಟೇಮಾಗೋಯ್ತು, ಕತ್ತಲೇಲಿ ಎಲ್ಲಿಗೆ ಹೋಗಬೇಕೋ ಗೊತ್ತಾಗ್ನಿಲ್ಲ ಅದ್ಕೆ ಇಲ್ಲೇ ಕುಂತ್ಕಡಿದೀವಿ" ಅಂದ. ತಕ್ಷಣ ನನ್ನ ಸ್ನೇಹಿತ " ಮಗನ ಮನೆಗೆ ಬಂದಿದ್ದೋ ಅಂತೀರಾ ಮತ್ತೆ ಅವರ ಮನೇಲೇ ಇದ್ದು ಬೆಳಿಗ್ಗೆ ಹೋಗಬಹುದಿತ್ತಲ್ಲವಾ ಅಜ್ಜ" ಅಂದ. ಆ ಕ್ಷಣದಲ್ಲಿ ಅವರ ಮುಖದಲ್ಲಿ ಆದ ಆ ಬದಲಾವಣೆ ಕತ್ತಲೆಯಲ್ಲಿಯೂ ನನಗೆ ಗೋಚರಿಸಿತು . ನೊಂದ ಜೀವಗಳನ್ನು ಮತ್ತೆ ನೋಯಿಸಲು ಮನಸ್ಸಾಗಲಿಲ್ಲ. ಅಷ್ಟ್ರಲ್ಲೇ ಅಜ್ಜ ಮಾತು ಶುರುಮಾಡಿತು, “ಇಲ್ಲಪ್ಪಾ ಮಗನ ಮನೆಯಿಂದ ಊರಿಗೆ ಹೋಗತ್ತಿವಿ ಅಂತ ಹೇಳಿ ಬಂದ್ವಿ ಆದ್ರೆ ದಾರಿ ಗೊತ್ತಾಗ್ಲಿಲ್ಲ ಅದ್ಕೆ ಅದು ಅದು....” ಅಂತ ಮಾತು ತಡವಡರಿಸುತ್ತಾ ಮಾತು ನಿಲ್ಲಿಸಿತು, ಮತ್ತೆ ಕೆದಕುತ್ತಾ ಹೋದ್ರೆ ಸಮಯ ಆಗುತ್ತೆ , ಆ ಜೀವಗಳು ಇನ್ನಷ್ಟು ನೊಂದುಕೊಳ್ತವೆ ಅಂತ ಗೊತ್ತಾಯ್ತು. “ ಸರಿ ಅಜ್ಜ ಏನು ತೊಂದ್ರೆ ಇಲ್ಲ, ಇಲ್ಲ ಪಕ್ಕದಲ್ಲೇ ನಮ್ ಮನೆ ಇದೆ ಅಲ್ಲಿ ಬನ್ನಿ ಬೆಳಿಗ್ಗೆಗೆ ನಾವೇ ಬಸ್ ಹತ್ತಿಸ್ತೀವಿ" ಅಂದೆ. ಬೇಡ ಕಣಪ್ಪಾ ಇಲ್ಲೇ ಇದ್ದು ಹೊತ್ತಾರೆಗೆ ಹೋಯ್ತಿವಿ ಬಿಡಪ್ಪಾ ಅಂತು ಅಜ್ಜಿ. ಬೇಡ ಅಜ್ಜಿ ಇದು ಹಳ್ಳಿ ಅಲ್ಲ, ಇಲ್ಲೇಲ್ಲಾ ಹೀಗೆ ಇರೋ ಹಾಗಿಲ್ಲ ಬನ್ನಿ ಅಂದೆ. ಆದ್ರೆ ಬರೋ ಮನಸ್ಸು ಮಾಡಿಲ್ಲ. ಅಷ್ಟ್ರಲ್ಲೇ ನನ್ನ ಸ್ನೇಹಿತ " ಅಜ್ಜ ಮಗ ಅಂತ ಹೇಳಿದ್ರಲ್ಲಾ ಅವರದು ಪೋನ್ ನಂಬರ್ ಇದ್ರೆ ಕೊಡಿ ಅವರಿಗೆ ಹೇಳ್ತಿವಿ ಅಂದ . ಮದ್ಯದಲ್ಲೇ ಬಾಯಿ ಹಾಕಿದ ಅಜ್ಜಿ "ಅಯ್ಯೊಯ್ಯೋ ಬೇಡ ಮಗಾ ನಾವು ಇಲ್ಲೇ ಇದ್ದು ಹೋಗ್ತೀವಿ ಅಂತು. ಏನು ಮಾಡಬೇಕೋ ತೋಚದಾಯಿತು. ಆಗ ಅಜ್ಜನೇ ನೋಡಪ್ಪಾ ಇದ್ರಲ್ಲಿ ಇದೇ ಅವನ ನಂಬರು ಅಂತ ಒಂದು ಚಿಕ್ಕ ಪುಸ್ತಕ ಕೊಡ್ತು. ಮಗನ ಹೆಸರು ಕೇಳಿ ಪೋನ್ ನಂಬರು ತೆಗೆದ್ವಿ.. ಖುಷಿಯಿಂದ ಕರೆ ಮಾಡಿದ್ವಿ, ಆದ್ರೆ ಅತ್ತಲಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಪೋನ್ ರಿಂಗಣಿಸುತ್ತಲೇ ಇತ್ತು ಕರೆ ಸ್ವೀಕರಿಸಲಿಲ್ಲ. ನನ್ನ ಸ್ನೇಹಿತ ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇದ್ದ. ಸಮಯ ಜಾರುತ್ತಲೇ ಇತ್ತು ದಾರಿಯಲ್ಲಿ ತಿರುಗಾಡುತ್ತಿದ್ದ ಜನ ನಮ್ಮನ್ನೇ ಯಾವುದೋ ಅನುಮಾನದಲ್ಲಿ ನೋಡುತ್ತಿದ್ದರೇ ಹೊರತು ಯಾರೂ ಹತ್ತಿರ ಬಂದು ವಿಚಾರಿಸಲಿಲ್ಲ. ಕೊನೆಗೂ 10.15ರ ಸುಮಾರಿಗೆ ಕರೆ ಸ್ವೀಕರಿಸಿದರು. ಅತ್ತಲಿಂದ ಒಂದು ಹೆಣ್ಣು ಧ್ವನಿ ಮಾತನಾಡಿತು. ಹೀಗಿಗೇ ಎಂದು ಹೇಳಿದ್ದೇ ತಡ ಪೋನ್ ಕಟ್ ಆಯಿತು. ಮತ್ತೆ ಪ್ರಯತ್ನಿಸಿದಾಗ " ನೋಡ್ರೀ ಸುಮ್ಮನೇ ತೊಂದ್ರೆ ಕೊಡಬೇಡಿ, ನಮ್ ಯಜಮಾನ್ರು ಮನೇಲಿ ಇಲ್ಲ , ನಾನು ಒಬ್ಳೆ ಆಚೆ ಬರೋಕೆ ಆಗಲ್ಲ" ಅಂತ ಹೇಳಿ ಕಟ್ ಮಾಡಿದ್ರು. ಇದನ್ನು ಕೇಳಿ ಅಜ್ಜಿಯ ದುಃಖದ ಕಟ್ಟೆ ಒಡೆಯಿತು. ಪರಿಸ್ಥಿತಿ ಏನು ಎಂಬುದು ನಮಗೆ ಅರ್ಥವಾಯಿತು . “ನೋಡಿ ಅಜ್ಜಿ ನಿಮ್ಮನ್ನು ನೋಡ್ತಿದ್ರೆ ನಮ್ ಅಜ್ಜಿ-ತಾತ ನೇ ನೆನಪಾಗ್ತಿದಾರೆ ಏನು ತೊಂದ್ರೆ ಇಲ್ಲ ಬನ್ನಿ ಇಲ್ಲೇ ನಮ್ ಮನೆ ಇದೆ, ಅಲ್ಲಿ ಹೋಗೋಣ ಬೆಳಿಗ್ಗೆ ಕಳ್ಸಿಕೊಡ್ತೀವಿ" ಅಂತ ಅವರ ಮನವೊಲಿಸಿ ಮನೆಗೆ ಕರೆದುಕೊಂಡು ಬಂದ್ವಿ. ಮನೇಲಿ ಉಳಿದಿದ್ದ ಸಾಂಬಾರಿಗೆ ಸ್ವಲ್ಪ ಅನ್ನ ಮಾಡಿದ್ವಿ , ಎಷ್ಟೇ ಮನವೊಲಿಸಿದರೂ ಅಜ್ಜಿ ಊಟ ಮಾಡಿಲ್ಲ. ಬಾಯಿ ಬಿಟ್ಟು ಮಾತನಾಡದಿದ್ದರೂ ಕಣ್ಣೀರು ಮಾತ್ರ ಧಾರಕಾರವಾಗಿ ಹರಿಯುತ್ತಿತು. ನಾವು ಮತ್ತೇ ಏನು ಕೇಳುವ ಗೋಜಿಗೆ ಹೋಗಲಿಲ್ಲ. ಈಗ ಮಲಗಿ ಯೋಚನೆ ಮಾಡಬೇಡಿ ಅಂತ ಹೇಳಿ ಮಲಗೋಕೆ ವ್ಯವಸ್ಥೆ ಮಾಡಿದ್ವಿ. ತಲೆಯಲ್ಲಿ ಏನೇನೋ ಅಲೋಚನೆಗಳು ಹರಿದಾಡುತ್ತಲೇ ಇದ್ವು. ಅಜ್ಜ ನಿದ್ರೆ ಮಾಡಿದ್ರು ಆದರೆ ಅಜ್ಜಿ ಮಾತ್ರ ಮಲಗಲೇ ಇಲ್ಲ, ಕುಂತ ಹಾಗೆ ರಾತ್ರಿ ಕಳೆದು ಬಿಟ್ರು.
ಬೆಳಿಗ್ಗೆ ನಮಗಿಂತ ಮೊದಲೇ ಅಜ್ಜ ಎದ್ದು ಬಿಟ್ಟಿದ್ದರು . ಅಜ್ಜಿ ಮೂಲೆಗೆ ಒರಗಿಕೊಂಡೆ ನಿದ್ರೆಗೆ ಜಾರಿದ್ದರು. ಅಜ್ಜನನ್ನು ಟೀ ಕುಡಿಯೋಣ ಬನ್ನಿ ಅಂತ ಹೊರಗೆ ಕರೆತಂದೆವು. ಅಷ್ಟೊತ್ತು ಮೌನವಾಗಿದ್ದ ಅಜ್ಜ ತಮ್ಮ ಕಥೆ ಹೇಳಲು ಪ್ರಾರಂಬಿಸಿತು.
ಮಧ್ಯಮ ವರ್ಗದ ಕುಟುಂಬ ಒಬ್ಬನೇ ಮಗ ಬದುಕಿಗೆ ಅಂತ ಬೇಸಾಯದ ಭೂಮಿ . ಕಷ್ಟ ಪಟ್ಟು ಮಗನನ್ನು ಓದಿಸಿದರು , ಸರ್ಕಾರಿ ನೌಖರಿಗೆ ಸೇರಿಸಬೇಕೆಂಬ ಮಹದಾಸೆ ಇತ್ತು ಆದರೆ ಓದುವಾಗಲೇ ಪ್ರೀತಿಯ ಬಲೆಗೆ ಬಿದ್ದ ಮಗ, ಖಾಸಗಿ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡ. ಸರ್ಕಾರಿ ನೌಖರಿ ಕನಸಾಗೇ ಉಳಿಯಿತು. ಮಗನ ಮನನೋಯಿಸಲು ಇಷ್ಟವಿಲ್ಲದೇ ಅವನೊಪ್ಪಿದ ಹುಡುಗಿ ಜೊತೆಯಲ್ಲೇ ಮದುವೆ ಮಾಡಲಾಯಿತು. ಮದುವೆಯಾದ ಸ್ವಲ್ಪ ದಿನಕ್ಕೆ ಮಗ ಮನೆಗೆ ಬಂದು ವ್ಯವಸಾಯದ ಭೂಮಿ ಮಾರಿಬಿಡಿ ಬೆಂಗಳೂರಿನಲ್ಲಿ ವ್ಯಾಪಾರ ಶುರು ಮಾಡುತ್ತೇನೆ ಎಂದು ತಕರಾರು ತೆಗೆದ. ಅಂದು ಮಗನ ಶ್ರೇಯೋಭಿಲಾಸೆಗಾಗಿ ವಂಶಪಾರಂಪರ್ಯವಾಗಿ ಬಂದಿದ್ದ ಭೂಮಿಯಲ್ಲಿ ಸ್ವಲ್ಪ ಭಾಗವನ್ನು ಮಾರಿ ಹಣ ಕೊಟ್ಟರೂ ತೃಪ್ತಿಯಾಗದೇ, ಪೂರ್ತಿ ಜಮೀನು ಮಾರುವಂತೆ ರಂಪಾಟ ತೆಗೆದು ಹಂಗಿಸಿ ಹೋದ. ಆನಂತರ ಊರಿನ ಕಡೆ ಮುಖ ಮಾಡಲಿಲ್ಲ. ಮೊಮ್ಮಗ ಹುಟ್ಟಿದ ವಿಷಯ ಮೂರನೆ ವ್ಯಕ್ತಿಯಿಂದ ತಿಳಿದು ಒಂದೆರಡು ಸಲ ಬಂದು ನೋಡಿಕೊಂಡು ಹೋಗಿದ್ದರು. ಮಗನ ಮಮಕಾರ ಮೊಮ್ಮಗನೊಡನೆ ಕಾಲಕಳೆಯಬೇಕೆಂಬ ವಾತ್ಸಲ್ಯವೇ ಈ ದಂಪತಿ ಬೆಂಗಳೂರಿಗೆ ಬರಲು ಕಾರಣವಾಗಿತ್ತು. ಬರುವಾಗ ತನ್ನೂರಲ್ಲಿ ಬೆಳೆದ ತರಕಾರಿ ಹಾಗು ತಾನೆ ತಯಾರಿಸಿದ ತಿಂಡಿ ತಿನಿಸುಗಳ ಎರಡು ಬ್ಯಾಗುಗಳನ್ನು ಅಜ್ಜಿಯೇ ರೆಡಿಮಾಡಿದ್ದಳು. ಮನೆ ಹುಡುಕಿಕೊಂಡು ಬಂದಾಗ ಬೀಗ ಹಾಕಿದ ಬಾಗಿಲಿನ ದರ್ಶನವಾಗಿತ್ತು. ಸಂಜೆ ಬರುತ್ತಾರೆ ಕೆಲಸಕ್ಕೆ ಹೊರಗೆ ಹೋಗಿದ್ದಾರೆ ಎಂದು ಪಕ್ಕದ ಮನೆಯವ್ರು ಹೇಳಿದರು. ಕತ್ತಲು ಕರಗುವ ಸಮಯಕ್ಕೆ ಸೊಸೆ ಮತ್ತು ಮೊಮ್ಮಗನ ದರ್ಶನವಾಗಿತ್ತು . ಅಜ್ಜಿ ತಾತನ ಮುಖಪರಿಚಯವೂ ಆ ಮಗುವಿಗೆ ಆಗಿರಲಿಲ್ಲ. ಕಾದು ಸೊರಗಿದ್ದವರನ್ನು ಸೌಜನ್ಯಕ್ಕೂ ಮಾತನಾಡಿಸದ ಸೊಸೆ ಮೌನವಾಗಿ ಬಾಗಿಲು ತೆಗೆದು ಒಳಹೋದಳು. ಒಳಬನ್ನಿ ಎಂಬ ಒಂದು ಮಾತು ಆಡಲಿಲ್ಲ. ಸ್ವಲ್ಪ ಸಮಯದ ನಂತರ ಹೊರಬಂದು "ನೀವು ಈ ಥರ ಕೊಳಕು ವೇಷದಲ್ಲಿ ನಮ್ಮ ಮನೆ ಮುಂದೆ ಕುಳಿತಿದ್ದು ಅವಮಾನ ಮಾಡಬೇಕು ಅಂತಾನೆ ಬಂದ್ರ, ನಿಮ್ಮ ಮಗ ಊರಲ್ಲಿ ಇಲ್ಲ , ಬರೋದು ಮೂರು ದಿನ ಆಗತ್ತೆ, ಇರೋದಾದ್ರೆ ಇದ್ದು ಬೆಳಿಗ್ಗೆ ಹೋಗಿ" ಅಂಥದ್ದು ಒಳಗೆ ಹೊರಟು ಹೋದಳು.. ಬಾಗಿಲ ಸಂಧಿಯಲ್ಲೇ ನಿಂತು ಅಜ್ಜ ಅಜ್ಜಿಯನ್ನು ತದೇಕಚಿತ್ತದಿಂದ 4 ವರ್ಷದ ಆ ಮಗು ನೋಡುತ್ತಿತ್ತು. ಒಬ್ಬರ ಮುಖ ಒಬ್ಬರು ನೋಡಿಕೊಂಡು ಮುಂದೇನು ಎಂಬ ಪ್ರಶ್ನೆ ಮೂಡಿತು ಇವರಲ್ಲಿ. ಅದೇ ಸಮಯಕ್ಕೆ ಅಜ್ಜಿ ಆ ಮೊಮ್ಮಗುವನ್ನು ಕರೆದಳು.. ಏನೋ ಭಯದಿಂದ ಅಮ್ಮ ಬಂದುಬಿಡುತ್ತಾಳೆ ಎಂಬ ಸಂಕೋಚದಿಂದಲೇ ಆ ಮಗು ಹತ್ತಿರ ಬಂತು. ಆ ಮಗುವನ್ನು ಮುದ್ದಿಸುತ್ತಾ ತನ್ನ ಬ್ಯಾಗಿನಲ್ಲಿದ್ದ ತಿಂಡಿಯನ್ನು ಮಗುವಿನ ಕೈಗಿತ್ತಳು. ಅಷ್ಟರಲ್ಲೇ ಬಂದ ಸೊಸೆ, “ ಎಲ್ಲೆಲ್ಲಿಂದ ತಂದಿದೀರೋ ಇದನ್ನೆಲ್ಲಾ ಕೊಟ್ಟು ಮಗು ಆರೋಗ್ಯ ಹಾಳು ಮಾಡಬೇಡಿ. ಹೀಗೆ ಹೊರಗಡೆ ನೆ ನಿಂತು ನಮ್ ಮರ್ಯಾದೆ ಕಳೀಬೇಡಿ ಒಳಗಡೆ ಬರೋಕೆ ಏನು ನಿಮಗೆ" ಎಂದಳು. ಇಲ್ಲಾ ಕಣವ್ವಾ ಊರಿಗೆ ಹೋಗಬೇಕು ಟೇಮಾಯ್ತದೆ, ಅವನಿಗೆ ಸಮಯ ಸಿಕ್ಕರೆ ತಪ್ಪದೇ ಊರಿಗೆ ಬರೋಕೆ ಹೇಳು, ನೀನು ಬಾ ಸ್ವಲ್ಪ ಮಾತನಾಡೋದಿದೆ. ನಾವು ಈಗ ಹೊರಡ್ತೇವೆ ಎಂದ ಅಜ್ಜ. ಸೌಜನ್ಯಕ್ಕಾದರೂ ಈ ಸಂಜೇಲಿ ಹೇಗೆ ಹೋಗ್ತಿರಾ ಬೇಡ ಎನ್ನಲಿಲ್ಲ ಆ ಹೆಣ್ಣು.
ಬಳಿಯಿದ್ದ ಬ್ಯಾಗುಗಳನ್ನು ಅಜ್ಜ ನೇ ತೆಗೆದು " ಇದರಲ್ಲಿ ಇವಳೇ ಮಾಡಿದ ತಿಂಡಿ ಇದೆ, ತರಕಾರಿ ಸೊಪ್ಪು ಇದೇ ತಗಳವ್ವಾ, ಸುರಕೊಂಡು ಬ್ಯಾಗು ಕೊಡು ಎಂದ. “ಇದೆಲ್ಲಾ ಏನು ಬೇಡ, ಮಗುಗೇ ಆರೋಗ್ಯ ಸರಿಯಿಲ್ಲ , ನಿಮಗೆ ತರೋಕೆ ಯಾರು ಹೇಳಿದ್ದು ವಾಪಸ್ ತಗೊಂಡ್ಹೋಗಿ" ಎಂದಳು. ಮರುಮಾತನಾಡದೇ ಅಜ್ಜ ಅಜ್ಜಿ ಮನೆಯಿಂದ ಆಚೆ ಹೊರಟರು. ಏನೂ ಅರಿಯದ ಆ ಮುಗ್ದ ಕಂದ ಪಿಳಿಪಿಳಿ ಕಣ್ಣು ಬಿಡುತ್ತಾ ಇವರನ್ನೇ ನೋಡುತ್ತಿತ್ತು.
ಅಜ್ಜನ ಕಣ್ಣುಗಳು ತೇವವಾಗಿದ್ದವು, “ ಯಾಕಪ್ಪಾ ಬೇಕು ಈ ಜನುಮ, ಇದ್ದ ಒಬ್ಬ ಮಗನೇ ಇದ್ದೂ ಇಲ್ಲದಂಗೇ ಆಗಿದಾನೆ, ಬೇಡ ಅಂದ್ರು ಈ ಮುದಿ ಜೀವ ಕೇಳಿಲ್ಲ, ಈಗ ನೋಡು ಹೇಗೆ ಸೊರಗುತ್ತಾ ಕುಳಿತಿದ್ದಾಳೆ" ಎಂದ.
ಒಂದು ಕ್ಷಣ ನಮಗೆ ಕರುಳು ಕಿತ್ತ ಹಾಗೆ ಆಯಿತು . ಅಜ್ಜನನ್ನು ಸಮಾದಾನ ಪಡಿಸಿ ಮನೆಗೆ ಬಂದು ಅಜ್ಜಿಯನ್ನು ಮಾತನಾಡಿಸಿದೆವು. ಬಹಳ ನೊಂದುಹೋಗಿತ್ತು ಆ ಜೀವ. “ನಮ್ಮೂರಲ್ಲಿ ಬಿಕ್ಷುಕರು ಬಂದ್ರು ಒಂದು ಗಳಿಗೆ ಕುಂತಿದ್ದು ಹೋಗ್ರಪ್ಪಾ ಅಂತೀವಿ , ಆದ್ರೆ ನಮ್ಮ ಕರುಳೇ ನಮಗೆ ದೂರ ಆಗೋಯ್ತಲ್ಲಾ ದೇವ್ರೇ" ಅಂಥ ಅಳಲಾರಂಬಿಸಿತು. ಸ್ವಲ್ಪ ಮೌನದ ನಂತರ ಏನೋ ಹೊಳೆದಂತಾಗಿ "ಮಕ್ಕಳಾ ನಿಮ್ ದಮ್ಮಯ್ಯ ಅಂತೀನಿ ಆ ಮಗು ಹೋಗೋ ಇಸ್ಕೂಲ್ ಹೆಸ್ರು ಈ ಬುಕ್ ನಾಗೆ ಇದೆ , ಅಲ್ಲಿಗೆ ಒಂಚೂರು ಕರ್ಕೊಂಡು ಹೋಗ್ರಪ್ಪಾ ಕೊನೆ ಸಲ ಆ ಮಗೀನ ಮಕ ನೋಡ್ಕೋತೀನಿ ಅಷ್ಟೇ ಸಾಕು, ಆ ದೇವ್ರು ನಮ್ಮ ಹಣೇಲಿ ಬರೆದಿದ್ದೆ ಇಷ್ಟು ಅನ್ಕೊಂಡು ಹೊಂಟೊಯ್ತಿವಿ" ಅಂತು ಆ ಅಜ್ಜಿ. ನನ್ನ ಸ್ನೇಹಿತ ಆ ಪುಸ್ತಕ ತೆಗೆದು ನೋಡಿದ , ಸರಿ ಹೋಗೋಣ ಎಂದು ಕರೆದುಕೊಂಡು ಹೊರಟೆವು . ಆ ಶಾಲೆಗೆ ತಲುಪುವ ಮುನ್ನವೇ ನನ್ನ ಗಾಡಿಯಲ್ಲಿ ಕುಳಿತಿದ್ದ ಅಜ್ಜ ಗಾಡಿ ನಿಲ್ಲಿಸಪ್ಪಾ ಇಲ್ಲೇ ಎಂದ, ಯಾಕೆ ಎಂದು ನಿಲ್ಲಿಸಿದಾಗ ಅದೇ ರಸ್ತೆಬದಿಯಲ್ಲಿ ಇವರ ಮಗ ಮತ್ತು ಮೊಮ್ಮಗ ನಡೆದು ಬರುತ್ತಿದ್ದಾರೆ..! , ಆ ತಾಯಿ ಹೃದಯಕ್ಕೇ ಸ್ವರ್ಗವೇ ಸಿಕ್ಕಂತಾಯಿತು. ಅ ಮುಖದ ಮೇಲಿನ ಸಂತಸ, ಎಲ್ಲಿ ತನ್ನ ಮಗನನ್ನು ನೋಡದೇ ಹೋಗಿಬಿಡುತ್ತೇನೋ ಎಂಬ ನೋವಲ್ಲಿದ್ದ ಅಜ್ಜಿಗೆ ಈ ಮಗನ ಮುಖ ನೋಡಿದ ತಕ್ಷಣ ತನ್ನ ಒಡಲಿನ ಅವಮಾನ ನೋವುಗಳೆಲ್ಲಾ ಮರೆತು ಹೋದವು. ಇದ್ದಕ್ಕಿಂದಂತೆ ಇವರನ್ನು ಕಂಡ ಮಗನಿಗೆ ಇವರು ಇಲ್ಲಿ ಹೇಗೆ ಎಂದು ಮುಖದಲ್ಲಿ ಆಶ್ಚರ್ಯ ಅನುಮಾನ ಒಟ್ಟಿಗೆ ಮೂಡಿದವು. ಅಜ್ಜ ಮಾತ್ರ ಯಾವುದೇ ಭಾವವನ್ನೂ ತೋರ್ಪಡದೇ ಕಲ್ಲಿನ ಹಾಗೆ ನಿಂತಿದ್ದ. ಅಜ್ಜಿ ಮಗನ ಮುಖವನ್ನೇ ದಿಟ್ಟಿಸಿ ನೋಡಿ , “ಯಾಕಪ್ಪಾ ನಾವ್ ಸತ್ತೋಗಿದೀವಿ ಅಂದುಕೊಂಡ, ಎರಡು ವರ್ಷ ಆಯಿತಲ್ಲೊ ನಿನ್ ಮುಖ ತೋರಿಸಿ, ಅಂಥ ತೆಪ್ಪು ನಾವ್ ಏನಪ್ಪಾ ಮಾಡಿದ್ವಿ ನಿನಗೆ " ಅಂಥ ಅಳೋಕೆ ಶುರು ಮಾಡಿದರು. ನಡುರಸ್ತೆಯೆಲ್ಲೇ ಎದುರಾದ ಈ ಪರಿಸ್ಥಿತಿಗೆ ಆ ಮಗ ಸಂಕೋಚಪಡುತ್ತಿದ್ದ. ನಂತರ ಅಜ್ಜಿಯನ್ನು ಸಮಾಧಾನ ಮಾಡಿ ಮೊಮ್ಮಗನ ಬಳಿ ಬಿಟ್ಟು, ಈ ಮಗನಿಗೆ ನೆಡೆದ ವಿಷಯವನ್ನೆಲ್ಲಾ ವಿವರಿಸಿದೆವು. ಎಲ್ಲವನ್ನೂ ಕೇಳಿದ ಮೇಲೂ ಆ ಮಗನ ಮುಖದಲ್ಲಿ ಯಾವುದೇ ಭಾವನೆಗಳು ವ್ಯಕ್ತವಾಗಲಿಲ್ಲ. “ ಈಗ ಯಾಕೆ ಬರ್ಬೇಕಾಗಿತ್ತು ನೀವು , ಪೋನ್ ಮಾಡಿಸಬೇಕಿತ್ತು, ದುಡ್ಡು ಕೇಳಿದ್ರೆ ಕಳಿಸ್ತಿದೆ. ಸುಮ್ಮನೇ ಈಥರ ಬಂದು ನಮ್ಮ ನೆಮ್ಮದಿ ಹಾಳು ಮಾಡ್ತಿರಾ,ನೀವು ಮನೆಗೆ ಬಂದಿದ್ದು ನನಗೆ ಗೊತ್ತಿಲ್ಲ, ಅವಳು ಏನು ಹೇಳಿಲ್ಲ" ಎಂದ. ಸಾವರಿಸಿಕೊಂಡ ಅಜ್ಜಿ ಸರಿ ಬಿಡಪ್ಪಾ ನಿನ್ ನೆಮ್ಮದಿ ಗೆ ನಾವು ಯಾಕೆ ಕಲ್ಲು ಹಾಕಲಿ, ಚನ್ನಾಗಿರು ನಾವ್ ಹೋಯ್ತಿವೀ.. ಮನೆಗೆ ಹೋಗಿ ಅವಳನ್ನು ಏನೂ ಅನ್ಬೇಡ.. ಎಂದು ಹೇಳಿ ಮೊಮ್ಮಗುವನ್ನು ಮುದ್ದಿಸಿ ಸೆರೆಗಲ್ಲಿ ಬಾಯಿ ಮುಚ್ಚಿಕೊಂಡು ಅಳುತ್ತಾ ರಸ್ತೆಯ ಬದಿಗೆ ಹೋಗಿ ಕುಳಿತುಕೊಂಡಿತು.
ಸಾರಿ ಸರ್ ನೀವ್ಯಾರು ಅಂಥ ನನಗೆ ಗೊತ್ತಿಲ್ಲಾ , ನನ್ನ ಪರಿಸ್ಥಿತಿ ಸ್ವಲ್ಪ ಸರಿಯಿಲ್ಲ, ದಯವಿಟ್ಟು ಇವರನ್ನು ಬಸ್ ಸ್ಟ್ಯಾಂಡಿಗೆ ಬಿಟ್ಟು ಬಿಡಿ ಎಂದ.
ತನ್ನಪ್ಪನ ಮುಖವನ್ನು ದಿಟ್ಟಿಸಿ ನೋಡುವ ಧೈರ್ಯ ಮಾಡಲಿಲ್ಲ, ಐನೂರರ ನೋಟು ತೆಗೆದು ಅಪ್ಪನ ಕೈಗಿಟ್ಟು ಹೋಟೆಲ್ ನಲ್ಲಿ ಏನಾದ್ರು ತಿಂದು ಬಸ್ ಚಾರ್ಜ್ ಮಾಡಿಕೊಂಡು ಹೋಗಿ ಮುಂದಿನ ತಿಂಗಳು ಊರಿಗೆ ಬರ್ತೇನೆ ಎಂದ.
ನಮ್ಮ ಕೋಪ ನೆತ್ತಿಗೇರಿತ್ತು " ಏಯ್ ಏನ್ ದೊಡ್ಡ ಮನುಷ್ಯನಯ್ಯಾ ನೀನು , ಥೂ ನಿನ್ ಮುಖಕ್ಕೆ. ಹೆತ್ತ ಅಪ್ಪ ಅಮ್ಮ ನ ಹೀಗೆ ನಡುಬೀದಿಲಿ ಬಿಟ್ಟು ಹೋಗ್ತೀನಿ ಅಂತಿಯಲ್ಲಾ ನಿಂಗೇನಾರ ಮನುಷ್ಯತ್ವ ಇದೇಯಾ, ಹೆಂಡತಿಗೆ ಹೆದರಿ ಇಷ್ಟು ನೀಚವಾಗಿ ನಡ್ಕೊತಿದೀಯಲ್ಲಾ ನೀನು ಒಬ್ಬ ಗಂಡಸ್ಸಾ, ನಿನ್ ಹೆಂಡತಿ ಅವರ ಅಪ್ಪ ಅಮ್ಮ ಬಂದ್ರೆ ಹೀಗೆ ನಡ್ಕೋತಾಳಾ, ಪಾಪ ಇವರಾಗಿದ್ಕೆ ಸುಮ್ನೆ ನಿಂತಿದ್ದಾರೆ , ಬೇರೆಯವರಾಗಿದ್ರೆ ಕಾಲಲ್ಲಿ ಇರೋ ಚಪ್ಪಲಿಲಿ ನಿನ್ ಮುಖಕ್ಕೆ ಒಡೆದು ಉಗಿದು ಹೋಗ್ತಿದ್ರು, ಆ ಅಜ್ಜಿನ ನೋಡ್ರೀ ನಿಮಗೆ ಸ್ವಲ್ಪಾನು ಹೆತ್ತಕರುಳಿನ ಸಂಕಟ ಗೊತ್ತಾಗ್ತಿಲ್ವಾ " ಎಂದು ನನ್ನ ಸ್ನೇಹಿತ ಅಬ್ಬರಿಸೋಕೆ ಶುರು ಮಾಡಿದ. ತಮ್ಮ ತಮ್ಮ ಮ್ಕಕಳನ್ನು ಶಾಲೆಗೆ ಬಿಡೋಕೆ ಹೋಗುತ್ತಿದ್ದ ಜನರೆಲ್ಲಾ ನೋಡಿ ಹೋಗ್ತಿದ್ದರು. ಈ ಮಗ ಅವಮಾನದಿಂದ ಮುಖ ತಗ್ಗಿಸಿ ನಿಂತಿದ್ದ. ತನ್ನ ಮಗನ ಮುಖ ನೋಡಲಾಗದ ಆ ಅಜ್ಜ ನಮ್ಮ ಕಡೆ ತಿರುಗಿ " ಸುಮ್ನಿರಪ್ಪಾ ಏನು ಮಾತಾಡಬೇಡ , ಬೀದಿಲಿ ಮಾನ ಹೊಯ್ತದೇ, ಬನ್ರಪ್ಪಾ ಹೋಗಾಣ" ಅಂತ ಅಲ್ಲಿಂದ ಹೊರಡಿಸಿದ. ಮರುಮಾತನಾಡದೇ ಆ ಮಗ ತನ್ನ ಮಗುವನ್ನು ಕರೆದುಕೊಂಡು ಹೊರಟೇಬಿಟ್ಟ. ಆ ಮಗು ಹಿಂದಿರುಗಿ ನೋಡುತ್ತಲೇ ಇತ್ತು .
ಮನೆಗೆ ಬಂದ ಅಜ್ಜಿಯ ಮುಖದಲ್ಲಿ ಏನೋ ಒಂದು ನಿರ್ಧಾರಿತ ಭಾವ ಕಾಣುತ್ತಿತ್ತು . ಆ ದೇವ್ರು ಅವರನ್ನು ಚನ್ನಾಗ ಇಟ್ಟಿರಲಿ ಕಣಪ್ಪಾ, ನಾವು ಬರ್ತೀವಿ, ನಿಮ್ಮಂಥ ಮಕ್ಕಳು ನಮಗೆ ಸಿಗಲಿಲ್ಲ ಅಷ್ಟೆ, ದೇವ್ರು ನಿಮಗೆ ಒಳ್ಳೆದ್ ಮಾಡ್ಲಿ ಕಣಪ್ಪಾ.. ಈ ತರಕಾರಿ, ತಿಂಡಿ ಎಲ್ಲಾ ನೀವೇ ತಗೋಳ್ರಪ್ಪಾ ನೀವು ನಮ್ ಮಕ್ಕಳಿದ್ದಾಗೆ ಇದ್ದೀರಿ.. ಅಂತ ಹೇಳಿ ಆ ಅಜ್ಜಿ ತನ್ನೆರಡು ಬ್ಯಾಗುಗಳನ್ನು ಖಾಲಿ ಮಾಡಿತು. ಅಜ್ಜ ತನ್ನ ಕೈಲಿದ್ದ ಐನೂರರ ನೋಟನ್ನು ಅಜ್ಜಿಗೆ ನೀಡಿದ. ಸೀದಾ ದೇವರ ಕೋಣೆಗೆ ಹೋದ ಅಜ್ಜಿ 2 ನಿಮಿಷ ಮೌನವಾಗಿ ನಿಂತಿದ್ದು ಬಂತು. ಏಷ್ಟು ಕೇಳಿಕೊಂಡರೂ ಇಬ್ಬರೂ ತಿಂಡಿ ತಿನ್ನಲಿಲ್ಲ. ಬೆಳಿಗ್ಗೆ ಟೈಮಲ್ಲಿ ತಿಂದು ಅಭ್ಯಾಸವಿಲ್ಲವೆಂದು ಹೇಳಿ ಹೊರಟೇ ಬಿಟ್ಟರೂ.
ನಮಗೇ ಅವರಿಬ್ಬರ ಸ್ಥಿತಿಯನ್ನು ಕಂಡು ಬಹಳ ನೋವಾಗಿತ್ತು ಭಾರವಾದ ಮನಸ್ಸಿನಿಂದಲೇ ಅವರನ್ನು ಬಸ್ ಹತ್ತಿಸಿ ಬಂದೆವು. ಹೊರಡುವ ಮುನ್ನ ಆಜ್ಜನ ಬಳಿ ಆ ಊರಿನ ವಿಳಾಸ ತೆಗೆದುಕೊಂಡೆವು .
ಮನಸ್ಸು ತುಂಬಾ ಭಾರವಾಗಿಬಿಟ್ಟಿತ್ತು, ಆ ಮಗನನ್ನು ಮತ್ತೊಮ್ಮೆ ಹಿಡಿದು ಬಡಿಯಲೇ , ಮನೆಗೆ ಹೋಗಿ ಆ ಹೆಂಗಸಿಗೆ ಬುದ್ದಿ ಕಲಿಸಲೇ ಎಂದೆಲ್ಲಾ ಮನಸ್ಸು ಯೋಚಿಸುತ್ತಿತ್ತು . ಅದರಿಂದ ಏನೂ ಪ್ರಯೋಜನವಿಲ್ಲ ಹೆತ್ತವರ ನೋವಿನ ಶಾಪ ಇವರಿಗೆ ತಟ್ಟೇ ತಟ್ಟುತ್ತದೆ ಬಿಡು ಎಂದು ಸುಮ್ಮನಾಗಬೇಕಾಯಿತು . ಇಂಥವರನ್ನು ನೋಡೆ ನಮ್ಮ ಹಿರಿಯರು ಹೇಳೋದು... ಒಬ್ಬ ತಾಯಿ ಹತ್ತು ಮಕ್ಕಳನ್ನೂ ಸಾಕುತ್ತಾಳೆ. ಆದರೆ, ಹತ್ತು ಮಕ್ಕಳು ಒಬ್ಬ ತಾಯಿಯನ್ನು ಸಾಕಲು ಹಿಂಜರಿಯುತ್ತಾರೆ. ವಾತ್ಸಲ್ಯ ಮಯಿಯಾದ ತಾಯಿಯನ್ನು ಆನಂದವಾಗಿರುವಂತೆ ನೋಡಿ ಕೊಳ್ಳುವುದು ಪ್ರತಿಯೊಬ್ಬ ಮಗನ ಕರ್ತವ್ಯ. ಏಳೇಳು ಜನ್ಮ ಎತ್ತಿದರೂ ತಾಯಿಯ ಋಣ ಮಾತ್ರ ತೀರಿಸಲು ಸಾಧ್ಯವೇ ಇಲ್ಲ. ಮಕ್ಕಳು ತಾಯಿಗೆ ಎಷ್ಟೇ ಕೇಡು ಮಾಡಿದರೂ, ತಾಯಿ ಮಾತ್ರ ಎಂದೂ ತನ್ನ ಮಕ್ಕಳಿಗೆ ಕೇಡು ಬಯಸುವುದಿಲ್ಲ. ಇಷ್ಟಾದರೂ ಇಂದಿನ ಜನ ತಮ್ಮ ಹಾಳು ಘನತೆ ಗೌರವ ಅಂತೆಲ್ಲಾ ಮಾತನಾಡುತ್ತಾ ತಮ್ಮ ಹೆತ್ತವರನ್ನೇ ಮರೆಯುತ್ತಿರುವುದು ದುರ್ದೈವ.
ಈ ಭೂಮಿಯು ಮೇಲೆ ಒಳ್ಳೆಯವರೂ ಇರುವಂತೆಯೇ ಕೆಟ್ಟವರೂ ಸಹ ಇದ್ದಾರೆ, ಆದರೆ ತಾಯಿಯ ದೃಷ್ಟಿಯಲ್ಲಿ ತನ್ನ ಮಗನು ಎಷ್ಟೇ ಕ್ರೂರಿಯಾಗಿದ್ದರೂ, ಅವಳು ಅವನ್ನು ಕಾಣುವುದು ಅದೇ ಪ್ರೀತಿಯಿಂದಲೇ. ‘ಹೆತ್ತವಳಿಗೆ ಹೆಗ್ಗಣ ಮುದ್ದು"ಎಂಬ ಮಾತು ಸತ್ಯ. ಆದರೆ ಇಂದು ಅಂಥ ತಾಯಿಯನ್ನು ಕೊಲ್ಲುವಂತಹ ಮಕ್ಕಳು ಕೂಡಾ ಇದ್ದಾರೆ.
ಹೀಗೆ ಎರಡು ದಿನ ಕಳೆದು ಹೋಯಿತು , ಬದುಕಿನ ಜಂಜಡಗಳಲ್ಲಿ ಆ ವೃದ್ದ ದಂಪತಿ ಸ್ವಲ್ಪ ಮರೆತರು ಹಾಗಾಗ್ಗೆ ನೆನಪಲ್ಲಿ ಬರುತ್ತಿದ್ದರು. ಮೂರನೇ ದಿನ ಕೆಲಸ ಮುಗಿಸಿ ಮನೆಗೆ ಬಂದು ಎಂದಿನಂತೆ ವಿರಮಿಸುತ್ತಾ ಕುಳಿತಿದ್ದೆ. ಅದೇ ಸಮಯಕ್ಕೆ ಬಂದ ಸ್ನೇಹಿತ ಅವರ ನೆನಪು ಮಾಡಿದ. ಆ ದಿನ ಅಜ್ಜನ ಬಳಿ ತಗೆದುಕೊಂಡಿದ ವಿಳಾಸದಲ್ಲಿ ಆ ಊರಿನವನ ಪೋನ್ ನಂಬರು ಕೂಡ ಇತ್ತು . ಕುತೂಹಲಭರಿತರಾಗಿ ಆ ನಂಬರ್ ಗೆ ಕರೆ ಮಾಡಿದೆವು . ನಮ್ಮ ಹೃದಯ ಚೂರಾಗುವಂತಹ ವಾರ್ತೆ ನಮಗಾಗಿ ಕಾದಿತ್ತು .
ಇಲ್ಲಿಗೆ ಬಂದು ನೊಂದು ಕೊನೆಯಲ್ಲಿ ಯಾವುದೋ ನಿರ್ಧಾರಿತ ಭಾವನೆಯೊಂದಿಗೆ ಊರಿಗೆ ಮರಳಿದ ಅಜ್ಜಿ , ಆ ಊರಿನಲ್ಲಿ ಕಳೆದಿದ್ದು ಒಂದೇ ರಾತ್ರಿ, ಅದೇ ಕೊರಗಲ್ಲಿ ಯಾರ ಬಳಿಯೂ ಮಾತನಾಡದ ಆ ಜೀವ ಮರುದಿನ ರಾತ್ರಿ ಮಲಗಿಕೊಂಡವಳು ಬೆಳಿಗ್ಗೆ ಏಳಲೇ ಇಲ್ಲವಂತೆ.
ಎದೆಯ ಮೇಲೆ ಭಾರವಾದ ಬಂಡೆ ಬಿದ್ದ ಭಾಸವಾಯಿತು ನಮಗೆ, ನಾವು ಪೋನ್ ಮಾಡಿದ ಆ ವ್ಯಕ್ತಿಗೆ ಈ ಮಗನ ಬಗ್ಗೆ ವಿಚಾರಿಸಿದೆವು. “ಹೌದು ಸಾರ್ ಅವನನ್ನು ನೋಡೋಕೆ ಅಂತಾನೆ ಬೆಂಗ್ಳೂರಿಗೆ ಹೋಗಿದ್ರು , ಮಗನ ಮನೇಲಿ ಒಂದು ರಾತ್ರಿ ಇದ್ದು ಬಂದ್ರಂತೆ, ಅಲ್ಲಿ ಏನಾಯಿತೋ ಗೊತ್ತಿಲ್ಲ ಸಾರ್, ಅಲ್ಲಿಂದ ಬಂದ ಮೇಲೇ ಆಜ್ಜಮ್ಮ ಮೇಲೇಳಲೇ ಇಲ್ಲ ಹೋಗ್ಬಿಟ್ರು , ಬೆಳಿಗ್ಗೇನೆ ಪೂನ್ ಮಾಡಿದ್ರು ಮಗ ಬಂದಿದ್ದು ಮಧ್ಯ್ಹಾನ, ಕಾರ್ಯ ಮುಗಿಸಿ ಹೋರಟೇ ಹೋದ, ಒಳ್ಳೆ ಮನುಷ್ಯರು ಸಾರ್ ಪಾಪ ತುಂಬಾ ಕಷ್ಟ ಪಟ್ರು ಕೊನೆಗಾಲದಲ್ಲಿ ಸುಖವಾಗಿ ಸಾಯಲಿಲ್ಲ" ಎಂದ. ಇನ್ನು ಅವನ ಮಾತು ಮುಂದುವರೆಯುತ್ತಲೇ ಇತ್ತು ಕೇಳುವ ಶಕ್ತಿಯಿಲ್ಲದೇ ಪೋನ್ ಕಟ್ ಮಾಡಿದೆವು. ಎರಡು ದಿನದ ಹಿಂದೆ ಅಜ್ಜಿ ಕೊಟ್ಟುಹೋಗಿದ್ದ ತರಕಾರಿ ಸೊಪ್ಪು ಇನ್ನೂ ಬಾಡಿರಲಿಲ್ಲ ಆದರೇ ಆಶೀರ್ವದಿಸಿ ಹೋದ ಅಜ್ಜಿ ಇನ್ನಿಲ್ಲವಾಗಿದ್ದರು.
ಅಕಸ್ಮಾತ್ ಆಗಿ ದೇವರ ಕೋಣೆಗೆ ಹೋದ ನನಗೆ ದೇವರ ಪೋಟೋ ಮುಂದೆ ಐನೂರರ ನೋಟು ಕಾಣಿಸಿತು, ಸ್ನೇಹಿತನೂ ನನ್ನದಲ್ಲವೆಂದ. ಮತ್ಯಾರದು ಎಂದು ಯೋಚಿಸಿದಾಗ, ಮಗ ಕೊಟ್ಟ ದುಡ್ಡನ್ನು ಅಜ್ಜ ಅಜ್ಜಿಯ ಕೈಗೆ ಕೊಟ್ಟದ್ದು , ಅಜ್ಜಿ ದೇವರ ಪೋಟೋ ಎದುರು ಎರಡು ನಿಮಿಷ ನಿಂತಿದ್ದದ್ದು ನೆನಪಾಯಿತು. ಆ ತಾಯಿ ತನ್ನ ಮಗನ ದುಡ್ಡನ್ನು ಇಲ್ಲೇ ಬಿಟ್ಟು ಹೋಗಿದ್ದಳು. ತಾಯಿಯ ಮಹತ್ವವೇ ಗೊತ್ತಿಲ್ಲದಂತೆ ವರ್ತಿಸಿಬಿಟ್ಟನಲ್ಲ ಆ ಮಗ ಎಂದು ಕಣ್ಣು ತುಂಬಿ ಬಂತು ನನಗೆ .ಇಂತಹ ಘಟನೆಗಳು ಕೊನೆಯಾಗಬೇಕೆಂದರೆ ಮಕ್ಕಳು ತಾಯಿಯ ಮಹತ್ವವನ್ನು ಅರಿಯಬೇಕು, ಹೆತ್ತವರ ಕುರಿತು ಕಾಳಜಿ ವಹಿಸಿದರೆ ಜೀವನದ ಕೊನೆಯವರೆಗೂ ಮಕ್ಕಳ ಜೊತೆ ಹೆತ್ತವರು ಇರಲು ಸಾದ್ಯ ಎನಿಸಿತು. ಈ ಐನೂರರ ನೋಟನ್ನು ಆ ಮಗನ ಮುಖಕ್ಕೆ ಎಸೆದು ಕಪಾಲಕ್ಕೆರಡು ಬಾರಿಸಿಬರಬೇಕು ಎಂದು ಆ ಶಾಲೆಯ ಬಳಿ ಮೂರು ದಿನ ಕಾದೆವು ಆದರೆ ಆ ಮಗ ಬರಲೇ ಇಲ್ಲ. ಕೊನೆಗೆ ಒಂದು ದಿನ ಅಲ್ಲಿಯೇ ಆ ಮುಗುವನ್ನು ನೋಡಿದೆವು. ಅದಕ್ಕೇನು ಅರಿವಿರಲಿಲ್ಲ, ಆ ಮಗುವಿನ ಜೇಬಿಗೆ ಐನೂರರ ನೋಟನ್ನು ಇಟ್ಟು, “ಇದು ಆದಿನ ನಿಮ್ಮಪ್ಪ ನಿಮ್ಮ ಅಜ್ಜಿಗೆ ಕೊಟ್ಟಿದ್ದದ್ದು , ಅವರು ವಾಪಸ್ ಕೊಟ್ಟರು , ನಿಮ್ ಅಪ್ಪನಿಗೆ ಕೊಟ್ಟುಬಿಡು ಪುಟ್ಟಾ ಅಂತೇಳಿ ಹಿಂದಿರುಗಿ ಬಂದೆವು.
"ದುಡ್ಡು ಕೊಟ್ಟರೆ ಬೇಕಾದ್ದು ಸಿಗುತ್ತದೆ ಈ ಜಗದಲಿ ಕಾಣೋ ಹೆತ್ತ ತಾಯಿ ಕಳೆದುಕೊಂಡರ ಮತ್ತೆ ಸಿಗುವಳೇನೋ" ಎಂಬ ಜಾನಪದ ಗೀತೆ ಮತ್ತೆ ಮತ್ತೆ ನೆನಪಾಗುತ್ತಿತ್ತು …......

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು