ಸಾಮಾನ್ಯ ಮಹಿಳೆಯಲ್ಲ ಈಗ ಈಕೆ

ಮಹಿಳಾ ದಿನಾಚರಣೆಯ ಗುಂಗಿನಲ್ಲಿದ್ದಾಗ, ಚುನಾವಣೆಯಲ್ಲಿ ಸ್ಪರ್ಧಿಸಿರುವ ಮಹಿಳೆಯ ಬಗೆಗೆ ಅಕ್ಷರ ಜೋಡಣೆ


ಕಾದಿದ್ದಳು ಕೊನೆ ಸಿಗಬಹುದೇನೋ ಎಂದು
ದಣಿವರಿಯದ ದುಡಿಮೆಗೆ
ಮುದುಡಿಹೋಗಿತ್ತು ತುಳಿತದಬ್ಬರಕ್ಕೆ
ಅವಳ ಮುಡಿಯಲ್ಲಿನ ಮಲ್ಲಿಗೆ
ಆ ಮಲ್ಲಿಗೆಯೆಂತೆಯೇ ಬಾಡಿಹೋಗುತ್ತಿದ್ದವು
ಅವಳೊಳಗಿನ ಭಾವನೆಗಳು ಮೆಲ್ಲ ಮೆಲ್ಲಗೆ

ಅಡುಗೆ ಮನೆಯ ಒಲೆಯ ಕಿಚ್ಚಿನೊಳಗೂ
ಮದ್ದು ಸಿಗಬಹುದೇನೋ ಈ ನೋವಿನ ಬೇಗುದಿಗೆ
ಎಂಥದ್ದೋ ಒಂದು ನಿರೀಕ್ಷೆ
ಹಾಳೆಯ ಮೇಲೆ ಅಕ್ಷರಗಳ
ರಂಗೋಲಿ ಬಿಡಿಸುವ ಲೇಖನಿ ಬಂತು
ಪೊರಕೆ ಹಿಡಿದು ಅಂಗಳವ ಗುಡಿಸಿ ದ ಕೈಗೆ

ಎಲ್ಲೆಡೆಯೂ ತಾತ್ಸಾರ, ದೌರ್ಜನ್ಯ
ಕಾರಣ ಇವಳೊಬ್ಬಳು ಸಾಮಾನ್ಯ ಮಹಿಳೆ
ಎದ್ದು ನಿಲ್ಲು , ನಿಲ್ಲಬೇಡ ನುಗ್ಗು
ಎಂದು ಅವಳೊಳಗೆ ಮೊಳಗಿತ್ತು ಚುನಾವಣೆ ಕಹಳೆ
ಮೀಸೆ ತಿರುಗಿಸಿದವರ ನಡುವೆಯೂ
ಭರ್ಜರಿ ಸದ್ದು ಮಾಡತ್ತಿದೆ ಈಗ
ಸೆರಗಿನ ಮರೆಯಲ್ಲಿದ್ದ ಹಸಿರು ಬಳೆ

ಮುಂದಿನ ಸಾಲಿನಲ್ಲಿ ನಿಲ್ಲಬಲ್ಲಳು
ಕಾರಣ ಇವಳೀಗ ಚುನಾಯಿತ ಪ್ರತಿನಿಧಿ
ಕಂಡುಕೊಂಡಿದ್ದಾಳೆ ಹೆಂಗಳೆಯರ
ಮೇಲಿನ ದೌರ್ಜನ್ಯದ ಖಾಯಿಲೆಗೆ ಔಷದಿ
ಸಮುದಾಯವೇ ಇವಳಿಗೀಗ ಸಂಸಾರ
ಸಮುದಾಯದ ಸಮಸ್ಯೆಗಳಿಗೆ
ನೀಡಬಲ್ಲವಳಾಗಿದ್ದಾಳೆ ಪರಿಹಾರ

ಅನೀತಿ,ಅಕ್ರಮಗಳ ಮೇಲೆ ಸುರಿಯಲು
ಇವಳ ಸೆರಗಲ್ಲೂ ಉಂಟು ಕೆಂಡ
ಚನ್ನಾಗಿ ಅರಿತಿದ್ದಾಳೆ , ಕಲಿತಿದ್ದಾಳೆ
ಜನಪ್ರತಿನಿಧಿಗಿರಬೇಕಾದ ಮಾನದಂಡ
ದಿಟ್ಟತನದಿ ಮುಂದೆ ಬಂದವಳು
ಎಲ್ಲ ನೋವು ನಮಗೇ ಏಕೆ
ಎಂದು ಪ್ರಶ್ನಿಸುವ ಸಾಮರ್ಥ್ಯವುಳ್ಳವಳು ಈಕೆ
ಇವಳು ಸಾಮಾನ್ಯ ಮಹಿಳೆಯಲ್ಲ ಈಗ ಜೋಕೆ .
                                     - ವೆಂಕಟೇಶ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು