ನಮ್ಮ ಹಬ್ಬಗಳು ಮತ್ತು ನಾವು



ಬಾ ಮಳೆಯೇ ಬಾ ಇನ್ನು ಬಿರುಸಾಗಿ ಬಾ
ಜನರಾರು ಹೊರಗೆ ಬಾರದಂತೆ
ಜಿಡಿಜಿಡಿಯಾಗಿ ಬಾ
ಬೀದಿಗೆ ಬಂದು ಪಟಾಕಿ ಹೊಡೆಯದಂತೆ....!!
ಈ ದೀಪಾವಳಿ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಮೂರುದಿನಗಳ ಸತತ ಜಿಡಿ ಮಳೆ, ಬಹಳಷ್ಟು ಜನಕ್ಕೆ ಈ ಮಳೆಯಿಂದಾಗಿ ಬೇಸರ, ಸಿಡಿಮಿಡಿ ಆಗಿರಬಹುದು. ಮಳೆಯಲ್ಲಿ ತೋಯ್ದು ಬಂದರೂ ಸಹ ಈ ಮೂರುದಿನಗಳಲ್ಲಿ ಮಳೆ ಬಂದಿದ್ದಕ್ಕೆ ನನಗೆ ವೈಯುಕ್ತಿಕವಾಗಿ ಬಹಳ ಖುಷಿಯಾಯಿತು.
ಈ ಮೆಟ್ರೋ ನಗರಗಳ ಜೀವನದಲ್ಲಿ ನಮ್ಮ ಹಬ್ಬಗಳ ಆಚರಣೆಯ ಶೈಲಿಯೇ ಬದಲಾಗಿ ಹೋಗಿದೆ. ನಮ್ಮ ಹಿರಿಯರು ಆ ಹಬ್ಬಗಳಿಗೆ ನೀಡುತ್ತಿದ್ದ ಮಹತ್ವ ಹಾಗು ಆ ಹಬ್ಬಗಳ ಆಚರಣೆಯ ಹಿಂದೆ ಇದ್ದ ವೈಜ್ಞಾನಿಕ ಕಾರಣಗಳನ್ನು ಮರೆತಿದ್ದೇವೆ.
ಬೆಂಗಳೂರಿನಂತಹ ಮಹಾನಗರಗಳಲ್ಲಿ ಪ್ರತಿ ಹಬ್ಬದ ಸನ್ನಿವೇಶದಲ್ಲೂ ನಾವು ನೋಡುವ ಸನ್ನಿವೇಶಗಳು ಈ ಹಬ್ಬಗಳ ಬಗ್ಗೆ ಬೇಸರ & ವಾಕರಿಕೆ ಮೂಡಿಸುತ್ತವೆ. ಗಣೇಶ ಹಬ್ಬ ಮುಗಿದ ಮೇಲೆ ಯಾವ ಕೆರೆ ಕಟ್ಟೆಗಳಲ್ಲಿ ನೋಡಿದರೂ ವಿಘ್ನ ಭಗ್ನವಾಗಿ ಅನಾಥವಾಗಿ ಬಿದ್ದಿರುವ ಗಣಪ ವಿಗ್ರಹಗಳಿಗೆ ಬರವಿಲ್ಲ, ಈ ವಿಗ್ರಹಗಳಿನ ಬಣ್ಣದ ರಾಸಾಯನಿಕಗಳಿಗೆ ಬಲಿಯಾಗುವ ಅದೆಷ್ಟೋ ಜಲಚರಗಳಿಗೆ ಲೆಕ್ಕವಿಲ್ಲ. ದಸರಾ ಮುಗಿಯುತ್ತಿದ್ದಂತೆ ಬೀದಿ ಬೀದಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವಿಲೇವಾರಿಯ ಕಷ್ಟ ಪಾಪ ಆ ಅಮಾಯಕ ಕಸ ಸಂಗ್ರಹಿಸುವವರಿಗೆ ಮಾತ್ರವೇ ಗೊತ್ತು, ದುರ್ವಾಸನೆ ಅಂತ ಮೂಗು ಮುಚ್ಚಿಕೊಂಡು ತಿರುಗಾಡುತ್ತೇವೆಯೇ ಹೊರತು ಇದಕ್ಕೆ ಕಾರಣ ನಾವೇ ಅಂತ ಎಂದಿಗೂ ಯೋಚನೆ ಮಾಡಲ್ಲ.
ಇನ್ನೂ ಈ ದೀಪಾವಳಿಯ ದಿನ ಪಟಾಕಿಯ ಬೆಳಕನ್ನಷ್ಟೇ ನೋಡಿ ಸಂಭ್ರಮಪಡುತ್ತೇವೆ. ಆದರೆ ಆ ಬೆಳಕಿನ ಹಿಂದೆ ಬರುವ ವಿಷಯುಕ್ತ ಹೊಗೆಯನ್ನು ನಾವು ಗಮನಿಸೋದಿಲ್ಲ. ಹಬ್ಬದ ಮಾರನೆ ದಿನ ಕಣ್ಣು ಕಳೆದುಕೊಂಡು ಆಸ್ಪತ್ರೆ ಹಾಸಿಗೆ ಮೇಲೆ ರೋದಿಸುವ ಅದೆಷ್ಟೋ ಮಕ್ಕಳನ್ನು ಪ್ರತೀ ವರ್ಷ ನೋಡುತ್ತೇವೆ. ಸಂಭ್ರಮದಿಂದ ಹಬ್ಬ ಮುಗಿಸಿ ಮಲಗೋ ನಮಗೆ ತಿಳಿಯದ ಒಂದು ಸತ್ಯವಿದೆ, ಅದೇನೆಂದರೆ ಪಟಾಕಿ ಹೊಗೆಯಿಂದಾಗಿ ಹಬ್ಬ ಕಳೆದ ವಾರದೊಳಗೆ ಸಾವಿರಾರು ಪಕ್ಷಿಗಳು ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪುತ್ತವೆ ಎಂಬುದಾಗಿ ಕೆಲವು ಸಂಶೋಧನೆಗಳು ಹೇಳಿವೆ.
ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು, ನಮ್ಮ ವಿದ್ಯಾವಂತ ಸ್ನೇಹಿತರಿಗೆ ಈ ರೀತಿಯ ಪರಿಸರಕ್ಕೆ ಹಾನಿಯಾಗುವ ಹಬ್ಬಗಳ ಆಚರಣೆ ಬೇಡ, ನಮ್ಮ ಹಿರಿಯರು ಆಚರಿಸುತ್ತಿದ್ದ ಹಾಗೆ ಸಂಪ್ರದಾಯ ಬದ್ದವಾಗಿ ಆಚರಿಸೋಣ ಎಂದರೆ, ನಮ್ಮನ್ನು ಅವರು ಬೇರೆಯದೇ ರೀತಿಯಲ್ಲಿ ನೋಡಿ ವ್ಯಂಗ್ಯ ಮಾಡುತ್ತಾರೆ. "ನಾವೇನೂ ಪ್ರತಿದಿನ ಪಟಾಕಿ ಹೊಡಿತೀವಾ, ವರ್ಷದಲ್ಲಿ ಒಂದು ದಿನ ತಾನೇ ಅಷ್ಟಕ್ಕೆ ಏನಾಗಲ್ಲ ಬಿಡಿ" ಅನ್ನುತ್ತಾರೆ. "ಹಾಗಾದರೆ ವರ್ಷಪೂರ್ತಿ ನೀವು ವಿಷ ಕುಡಿಯಲ್ಲ, ಇವತ್ತು ಒಂದು ದಿನ ವಿಷ ಕುಡಿದು ಬಿಡಿ ಏನಾಗಲ್ಲ" ಅಂತ ನಾವು ಮರುತ್ತರ ಕೊಟ್ರೆ ಅವರು ನಿರುತ್ತರರಾಗುತ್ತಾರೆ. ಈ ನಾಗರೀಕ ಸಮಾಜಕ್ಕೆ ಯಾವ ಪರಿಯಲ್ಲಿ ಅರ್ಥೈಸಬೇಕೋ ತಿಳಿಯದು. ನಮ್ಮ ಎಲ್ಲಾ ಆಚರಣೆಗಳ ಹಿಂದೆ ಪರಿಸರ ಕಾಳಜಿ ಇರಬೇಕೇಂಬ ಸಣ್ಣ ನೈತಿಕತೆ ಯಾಕೆ ನಮ್ಮೊಳಗೆ ಮೂಡುತ್ತಿಲ್ಲ.
ಜೊತೆಗೆ ನಾವು ಮಾಡುವ ತಪ್ಪು ಆಚರಣೆಗಳನ್ನು ಸಮರ್ಥಿಸಿಕೊಳ್ಳಲು ಸಹ ಮುಂದಾಗುತ್ತೇವೆ, ಇತ್ತೀಚಗೆ ವಾಟ್ಸಪ್‌ನಲ್ಲಿ ಒಬ್ಬರು ಒಂದು ಸಂದೇಶವನ್ನು ಹಂಚಿಕೊಂಡಿದ್ದರು. " ಪ್ರತಿ ಹಬ್ಬಗಳು ನಮಗೆ ನಮ್ಮ ಹಿರಿಯರು ಕೊಟ್ಟಿರುವ ಆಚರಣೆಗಳು, ಆದರೆ ಅವುಗಳನ್ನು ಆಚರಿಸಲು ವ್ಯವಸ್ಥಿತವಾದ ಅಡಚಣೆ ಮಾಡಲಾಗುತ್ತಿದೆ , ನಮ್ಮ ಧರ್ಮಕ್ಕೆ ಅನ್ಯಾಯವೆಸಗಲಾಗುತ್ತಿದೆ, ಕೆಲವು ಮುಸ್ಲಿಂ /ಕ್ರಿಶ್ಚಿಯನ್ ಸಂಘಟನೆಗಳು ಹಿಂದುಗಳ ಆಚರಣೆಗಳನ್ನು ನಿಯಂತ್ರಿಸುವ ಸಲುವಾಗಿ ಬಣ್ಣದ ಗಣೇಶ ಇಡಬೇಡಿ, ಯುಗಾದಿಲಿ ಜೂಜಾಡಬೇಡಿ, ಪಟಾಕಿ ಹೊಡಿಬೇಡಿ ಅಂತ ಪೊಳ್ಳು ಭಾಷಣ ಮಾಡುತ್ತಿದ್ದಾರೆ ಆದರೆ ಮುಸ್ಲೀಮರು ಮೂಕಪ್ರಾಣಿಗಳನ್ನು ಸಾಯಿಸೋದು, ಕ್ರಿಶ್ಚಿಯನ್ನರು ಮಾಂಸ ಮದ್ಯ ಪಾರ್ಟಿಗಳನ್ನು ಮಾಡೋದರ ಬಗ್ಗೆ ಯಾರು ಮಾತಾಡಲ್ಲ " ಎನ್ನೋದು ಈ ಸಂದೇಶದ ಸಾರಾಂಶವಾಗಿತ್ತು .
ಆದರೆ ಈ ಸಂದೇಶ ಬರೆದ ವ್ಯಕ್ತಿಗೆ ಅರ್ಥವಾಗದ ಕೆಲವು ವಿಷಯಗಳಿವೆ , ಅವನಿಗೆ ಬಹುಶಃ ನಮ್ಮ ಹಿರಿಯರ ವೈಜ್ಞಾನಿಕ ಚಿಂತನೆ ತಿಳಿದಿಲ್ಲ. ನಮ್ಮ ಹಿರಿಯರು ನಮಗೆ ಹಬ್ಬಗಳ ಅಚರಣೆಯನ್ನು ಕಲಿಸಿಕೊಟ್ಟಿರೋದು ಸತ್ಯ , ಆದರೆ ನಾವು ಅದನ್ನು ಯಾವ ರೀತಿ ಆಚರಿಸುತ್ತಿದ್ದೇವೆ ಎಂಬುದನ್ನು ತಿಳಿದುಕೊಂಡಿಲ್ಲ ಎನ್ನೋದು ಸಹ ಸತ್ಯ. ಯುಗಾದಿ ಹಬ್ಬದ ದಿನ ನಮ್ಮ ಹಿರಿಯರು ಜೂಜಾಡುತ್ತಿರಲಿಲ್ಲ , ಬದಲಾಗಿ ತನ್ನ ನೆರೆಹೊರೆಯವರನ್ನೆಲ್ಲಾ ಸೇರಿಸಿ ಆರೋಗ್ಯಕರ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದರು, ಎಲ್ಲರೂ ಒಟ್ಟಾಗಿ ಜಾನಪದ ಕ್ರೀಡೆಗಳನ್ನು ಆಡುತ್ತಿದ್ದರು ಇದರಿಂದ ಮನುಷ್ಯ -ಮನುಷ್ಯನ ನಡುವೆ ಭಾಂಧವ್ಯ ಗಟ್ಟಿಯಾಗುತ್ತಿತ್ತೇ ವಿನಹ ಜೂಜಾಡಿ ಹಣವನ್ನೆಲ್ಲಾ ಕಳೆದುಕೊಂಡು ಅದೇ ಹಣಕ್ಕಾಗಿ ಕಿತ್ತಾಡಿ ದ್ವೇಷ ಬೆಳೆಸುತ್ತಿರಲಿಲ್ಲ.
ದೀಪಾವಳಿಯಂದು ಮನೆ ಮುಂದಿನ ಗೋಡೆಯ ಗೂಡಿನಲ್ಲಿ ಒಂದುವಾರ ವಿವಿಧ ನೈಸರ್ಗಿಕ ಎಣ್ಣೆ ದೀಪಹೊತ್ತಿಸಿ ಅದರ ಸುವಾಸನೆಯನ್ನು ಸಂಭ್ರಮಿಸುತ್ತಾ 'ಎಣ್ಣೇಲಿ ಹುಟ್ಟೋಳೆ/ಎಣ್ಣೇಲಿ ಬೆಳೆಯೋಳೆ/ಎಣ್ಣೇಲಿ ಬದುಕಾ ಸವೆಸೋಳೆ/ ಎಣ್ಣೇಲಿ ಬದುಕಾ ಸವೆಸೋಳೆ ನಮ್ಮವ್ವ/ಸತ್ಯದಿಂದುರಿಯೇ ನಮಗಾಗಿ " ಎಂದು ಹಾಡುತ್ತಾ ದೀಪಗಳ ಬೆಳಕಲ್ಲಿ ದೀಪಾವಳಿ ಆಚರಿಸುತ್ತಿದ್ದರೇ ಹೊರತು, ಆಡಂಬರಕ್ಕಾಗಿ, ತೋರಿಕೆಗಾಗಿ ಸುವಾಸನೆಯಿಲ್ಲದ ವಿದ್ಯುತ್ ದೀಪಗಳನ್ನು ಹಚ್ಚಿ, ಬಂಧು ಬಳಗದಿಂದ ದೂರವೇ ಉಳಿದು, ದುರ್ವಾಸನೆ ಹೊಗೆಯ ಪಟಾಕಿ ಹೊಡೆಯುತ್ತಿರುತ್ತಿರಲಿಲ್ಲ.
ತಮ್ಮ ಮನೋಭಾವಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಧರ್ಮಗಳ ಹೆಸರನ್ನು ತಂದುಕೊಳ್ಳುವ ಮನಸ್ಥಿತಿ ನಮ್ಮಲಿ ಬೆಳೆದುಬರುತ್ತಿರುವುದು ನಿಜವಾಗಿಯೂ ದುರಂತ ವೇ ಸರಿ, ಇಲ್ಲಿ ಹಿಂದು ಮುಸ್ಲಿಂ ಕ್ರಿಶ್ಚಿಯನ್ ವಿಷಯ ಬರಲ್ಲ, ಅವರವರ ಆಚರಣೆಗಳು ಹಾಗೆಯೇ ಇವೇ , ಹಿಂದುಗಳು ಮಾತ್ರವೇ ಹಬ್ಬದ ಆಚರಣೆಗಳಲ್ಲಿ ದಾರಿ ತಪ್ಪಿಲ್ಲ, ಮುಸ್ಲೀಮರು, ಕ್ರಿಶ್ಚಿಯನ್ನರು ಸಹ ತಮ್ಮ ಸಂಪ್ರದಾಯಿಕ ಆಚರಣೆಯನ್ನು ಮರೆಯುತ್ತಿರುವುದನ್ನು ಕಾಣಬಹುದು. ಆದರೆ ಇವತ್ತಿಗೂ ಗ್ರಾಮೀಣ ಪದ್ರೇಶದಲ್ಲಿ ಎಲ್ಲ ಧರ್ಮೀಯವರು ಎಲ್ಲಾ ಹಬ್ಬವನ್ನು ಒಟ್ಟಾಗಿಯೇ ಆಚರಿಸುತ್ತಾರೆ, ಆಸೆಯ ಹಿಂದೆ ಓಡುವ ನಗರದ ವಿದ್ಯಾಂತರ ತಲೆಯಲ್ಲಿ ಮಾತ್ರವೇ ಈರೀತಿಯ ಪುರಾವೆಯಿಲ್ಲದ ವಿವರಣೆಗಳು ಮತ್ತು ಸಮರ್ಥನೆಗಳು ಬರುತ್ತವೆ.
ಪ್ರಸ್ತುತ ಸಂದರ್ಭದಲ್ಲಿ ನಾವೆಲ್ಲಾ ಯಾಕೆ ಎಚ್ಚರಗೊಳ್ಳಬೇಕು ಎಂಬುದು ಬಹಳ ಮುಖ್ಯ. ನಮ್ಮ ಪರಿಸರ, ನಮ್ಮ ಕುಟುಂಬ, ಮಾನವೀಯ ಸಂಬಂಧಗಳು ಉಳಿಯಬೇಕಾದರೆ ನಮ್ಮ ಆಚರಣೆಗಳು ಮತ್ತು ನಮ್ಮ ಮನೋಭಾವಗಳು ಬದಲಾಗಬೇಕಿದೆ.
ನಾವೆಲ್ಲಾ ಹೇಗೋ ಬದುಕಿದ್ದಾಯಿತು, ಇನ್ನು ಮುಂದೆ ಈ ಸಮಾಜದ ಕಣ್ಣಾಗಬೇಕಿರುವ ನಮ್ಮ ಮಕ್ಕಳಿಗಾದರೂ ಈ ಬಗ್ಗೆ ಅರಿವು ಮೂಡಿಸೋಣ. ನಮ್ಮ ನಡುವೆಯೇ ಬಹಳಷ್ಟು ಮಕ್ಕಳು, ಅಸಹಾಯಕರು ಒಂದೊಂದು ತುತ್ತಿಗೂ ಕಾಯುತ್ತಾ ಇರುವುದನ್ನು ಕಾಣುತ್ತೇವೆ. ನಮ್ಮ ಮಕ್ಕಳಿಗೆ ಮೂರು ನಾಲ್ಕು ಸಾವಿರ ಖರ್ಚುಮಾಡಿ ಪಟಾಕಿ ಕೊಡಿಸುತ್ತೇವೆ, ಅವರೂ ಸಹ ಹಬ್ಬದ ದಿನ ಸಂತಸಪಡುತ್ತಾರೆ. ಆದರೆ ಇದರಿಂದ ಅವರಿಗಾಗುವ ಕಲಿಕೆ ಮಾತ್ರ ಸೂನ್ಯ. ಅದೇ ಹಣವನ್ನು ನಮ್ಮ ಮಕ್ಕಳ ಮೂಲಕವೇ ಯಾವುದಾದರು ಅನಾಥಾಶ್ರಮಕ್ಕೆ, ವೃದ್ದರಿಗೆ, ಅಸಹಾಯಕರಿಗೆ ಕೊಡಿಸಿ. ನಿಮ್ಮ ಮಕ್ಕಳ ಮನಸ್ಸಲ್ಲಿ ಆಗ ಸಾವಿರ ಪ್ರಶ್ನೆ ಮೂಡುತ್ತವೆ, ಆ ಪ್ರಶ್ನೆಗಳಿಗೆ ಉತ್ತರಿಸಿ ಅದರಿಂದಾಗುವ ಖುಷಿಯನ್ನು ತಿಳಿಸೋಣ, ಅದು ನಮ್ಮ ಮಕ್ಕಳಿಗೆ ಶಾಶ್ವತ ಕಲಿಕೆಯಾಗುತ್ತದೆ ಹಾಗು ಅವರೊಳಗೆ ಮಾನವೀಯ ಮನೋಭಾವ ಗಟ್ಟಿಗೊಳ್ಳುತ್ತದೆ.
ದೀಪಗಳ ಹಬ್ಬ ದೀಪಾವಳಿಯಲ್ಲಿ ಮಾನವೀಯ ದೀಪವನ್ನು ನಮ್ಮೊಳಗೆ ಹಚ್ಚಿಕೊಳ್ಳೋಣ ಮತ್ತೊಬ್ಬರಿಗೂ ಬೆಳಕಾಗೋಣ...
-ಕನ್ನಡವೆಂಕಿ ರಾಮನಗರ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು