ಹೊಸ ವರ್ಷಾಚರಣೆ....!

"ಏನಪ್ಪಾ ಹೊಸ ವರ್ಷ ಆಚರಣೆಗೆ ಏನು ಪ್ಲಾನ್, ಎಲ್ಲಿ ಹೋಗ್ತೀರಾ..??"  ಒಂದು ವಾರದಿಂದ ಎಲ್ಲಿ ಹೋದ್ರು ಈ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ  ಬಂದಿರತ್ತೆ, ನನಗೂ ತುಂಬಾ ಜನ ಈ ಪ್ರಶ್ನೆ ಕೇಳಿದ್ರು ಮತ್ತು ನಾನು ಸಹ ಬಹಳ ಮಂದಿಗೆ ಈ ಪ್ರಶ್ನೆ  ಕೇಳಿದ್ದೇನೆ. ನಮ್ಮ ನಮ್ಮ ಮನಸ್ಸಲ್ಲಿಯೇ ಏನೇನೋ ಯೋಜನೆಗಳು ಹೀಗೆ ಮಾಡಿದ್ರೆ ಹೇಗೆ, ಹಾಗೆ  ಮಾಡಿದ್ರೆ ಹೇಗೆ, ಅಲ್ಲಿ ಹೋಗೋಣ,ಇಲ್ಲಿ ಹೋಗೋಣ ಅಂತ.
ಇವೆಲ್ಲದರ ಯೋಚನೆ ಮಾಡ್ತಿರೋವಾಗಲೇ  ಥಟ್ಟನೆ ನನ್ನ ತಲೆಯೊಳಗೊಂದು ಯೋಚನಾ ಲಹರಿ  ಬಂದು ಹೋಯಿತು, ನಾವೆಲ್ಲಾ ಚಿಕ್ಕವರಿದ್ದಾಗ  ಹೇಗಿತ್ತು ಈ  ಹೊಸ ವರ್ಷದ ಆಚರಣೆ ಎಂಬ ಪ್ರಶ್ನೆ ನನ್ನೊಳಗೆ ಮೂಡಿ ಬಂತು. ನೀವುಗಳು ಸಹ ಒಮ್ಮೆ ಆ ನೆನಪಿನಾಳಕ್ಕೆ  ಹೋಗಿಬನ್ನಿ.
ಎಲ್ಲೋ ಪುಸ್ತಕದ ಪೇಜುಗಳ ಮಧ್ಯೆ ಅಡಗಿಸಿ ಇಟ್ಟ  ಒಂದು , ಎರಡು ಅಥವಾ ಐದು ರೂಪಾಯಿ ನೋಟುಗಳನ್ನು, ಟ್ರಂಕಿನ ಅಡಿಯಲ್ಲಿ  ಬಚ್ಚಿಟ್ಟ ಚಿಲ್ಲರೆ ಕಾಸನ್ನು ಒಟ್ಟುಗೂಡಿಸಿ  ಗ್ರೀಟಿಂಗ್ ಕಾರ್ಡು ತರಬೇಕಿತ್ತು. ಶಂಕರ್‌ನಾಗ್, ರಾಜ್ಕುಮಾರ, ಅಂಬರೀಶ್, ಪ್ರಭಾಕರ್  , ರವಿಚಂದ್ರನ್  ಪೋಟೋಗಳನ್ನೊಳಗೊಂಡ ಎಂಟಾಣೆಯ  ಗ್ರೀಟಿಂಗ್ ಕಾರ್ಡು, ಅದರ ಹಿಂಬದಿಯಲ್ಲಿ  
"ಕರುವಿಗೆ ಹಸು ಇಷ್ಟ,
ಹೂವಿಗೆ   ದುಂಬಿಗೆ   ಇಷ್ಟ,
ಆಕಾಶಕ್ಕೆ ಸೂರ್ಯ ಇಷ್ಟ,
ರಾತ್ರಿಲಿ  ಚಂದ್ರ ಇಷ್ಟ ,
ನನಗೆ  ನೀ ಇಷ್ಟ  ನಿನಗೆ ನಾ ಇಷ್ಟ"
 ಎಂದು  ಎಂದು ಬರೆದು, ಮನೆಯಲ್ಲಿ  ಸಿಗೋ ಹಳೇ ಲಗ್ನಪತ್ರಿಕೆ ಕವರ್ ಗಳೊಳಗೆ ಸೇರಿಸಿ, ಅಂಟು ಗೋಂದಿನಲ್ಲಿ ಅಂಟಿಸಿ ನಮ್ಮ ಸ್ನೇಹಿತರನ್ನು ಹುಡುಕಿ ಕೊಟ್ಟುಬರುತ್ತಿದ್ದ್ವೆವು.ನಮಗೆ ಬಂದ ಗ್ರೀಟಿಂಗ್ ಕಾರ್ಡುಗಳನ್ನೆಲ್ಲಾ ಮನೆಯ ಮುಂಬಾಗಿಲಿನ ಮೇಲೆ ಅಥವಾ ಮನೆಯ ತೊಲೆಗಳ  ಮೇಲೆ ಸಾಲಾಗಿ ಅಂಟಿಸಿಕೊಳ್ಳುತ್ತಿದ್ದೆವು. 5 ಪೈಸೆಯ ಶುಂಟಿ ಪೆಪ್ಪರ್‌ಮೆಂಟು, ಆಶಾ ಚಾಕಲೇಟು, ಎಂಟಾಣೆಯ  ಮಿಠಾಯಿಯೇ ನಮಗೆ ದೊಡ್ಡ ಸಿಹಿತಿಂಡಿ. ಜೇಬಲ್ಲಿ  ಕಾಸಿಲ್ಲದಿದ್ದರೂ ಆಗಿದ್ದ  ಖುಷಿ , ಸಂಭ್ರಮ, ಬಾಂಧವ್ಯಗಳು  ಜೀಬಿನ  ತುಂಬಾ  ವಿವಿಧ ಬ್ಯಾಂಕಿನ ಕಾರ್ಡುಗಳನ್ನೇ ತುಂಬಿಕೊಂಡ ನಮ್ಮ ಬಳಿ ಎಲ್ಲಿದೆ. ಈಗಿನ ನಮ್ಮ ಮಕ್ಕಳು  ನಾವು ಪಟ್ಟ ಆ ಖುಷಿಯನ್ನು  ಕಳೆದುಕೊಂಡಿದ್ದಾರೆ ಅನ್ನಿಸುತ್ತಿದೆ. ಸಂಭಂದಗಳ  ಭಾವನೆಯೇ ಇಲ್ಲದ  ಪೇಸ್‌ಬುಕ್, ವಾಟ್ಸಪ್ ಮೆಸೇಜ್‌ಗಳಲ್ಲೇ ನಮ್ಮೆಲ್ಲರ  ಶುಭಾಶಯ ವಿನಿಮಯ ಆಗಿಹೋಗುತ್ತಿದೆ. ದೂರ ಇರೋರನ್ನ ಹತ್ತಿರ ಇರೋರ ಥರಾ ನೋಡ್ತದಿವಿ ಆದರೆ ನಮ್ಮ ಪಕ್ಕದಲ್ಲೇ ಇರೋರನ್ನು  ದೂರ ಮಾಡ್ಕೋತಿದೀವಿ..
ಕಾಲ ಬದಲಾದಂತೆ ನಾವು ಬದಲಾಗಲೇ ಬೇಕಿದೆ ಅಲ್ವಾ.........
                                                                                                                                       -ಕನ್ನಡವೆಂಕಿ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು