ರೈತನ ಆತ್ಮಹತ್ಯೆ ಮತ್ತು ಪರಿಹಾರ ಧನ



ದಿನಬೆಳಗಾದರೆ ರೈತರ ಆತ್ಮಹತ್ಯೆ ಸುದ್ದಿ  ಮಾಮೂಲಿಯಾಗಿ ಹೋಗಿದೆ, ಪ್ರಾರಂಭದ ದಿನಗಳಲ್ಲಿ   ಮೊದಲ ಪುಟದಲ್ಲಿ ಸುದ್ದಿ ಮಾಡುತ್ತಿದ್ದ ಸುದ್ದಿಪತ್ರಿಕೆಗಳು ಸಹ  ಈಗ  ಮೆತ್ತಾಗಿವೆ, ಹಾಗು ಯಾವುದೋ ಒಮದು ಪುಟದ ಮೂಲೆಯನ್ನು  ಇದಕ್ಕಾಗಿಯೇ ಮೀಸಲಾಗಿಟ್ಟಿವೆ. ಮೊದಮೊದಲು  ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ  ಪೋಟೋಗ್ರಾಫರ್ ಸಮೇತ ಭೇಟಿ ನೀಡಿ ಪೋಸು ಕೊಟ್ಟು  ಸೂತಕದ ಮನೆಯಲ್ಲೂ ತಮ್ಮ ಬೇಳೆ ಬೇಯಿಸಿಕೊಂಡ  ಪುಢಾರಿಗಳು ಸಹ  "ಅಯ್ಯೋ ದಿನಾ ಸಾಯೋರಿಗೆ ಅಳೋರ್ಯಾರು " ಅಂತ ಸುಮ್ಮನಾಗಿದ್ದಾರೆ.
ನಾವೆಲ್ಲಾ ಕಾಲೇಜುದಿನಗಳಲ್ಲಿ ಓದುವಾಗ , ರೈತರ  ಬಗೆಗಿನ ನಮ್ಮ ಪಠ್ಯಪುಸ್ತಕದ ಮಾಹಿತಿಗಳಲ್ಲಿ  ರೈತ ಈ ದೇಶದ ಬೆನ್ನೆಲುಬು, ದೇಶ ಕಾಯೋ ಯೋಧ ನಿಗೆ   ಸಮ ಈ ರೈತ ಎಂಬೆಲ್ಲಾ   ಘೋಷಣೆಗಳನ್ನು ಓದಿ  ನಾನು ಒಬ್ಬ ರೈತನ ಮಗನಾಗಿ ಹುಟ್ಟಿದಕ್ಕೆ ಖುಷಿ ಪಟ್ಟಿದೆ. ಆದರೆ  ಈದಿನ ನಮ್ಮ ರೈತರ ಪಾಡನ್ನು ನೋಡಿದರೆ, ರೈತನಾಗಿ ಹುಟ್ಟುವುದೆ ಪಾಪವೆಂದೆನಿಸುತ್ತಿದೆ.

ಆತ್ಮಹತ್ಯೆ ಪ್ರಹಸನಗಳಿಗೆ  ಶಾಶ್ವತ ಪರಿಹಾರ  ಕಂಡುಕೊಳ್ಳಬೇಕಿರುವ ಸರ್ಕಾರವೇ ಈಗ ರೈತನ ಆತ್ಮಹತ್ಯೆಯನ್ನು  ಪ್ರೋತ್ಸಾಹಿಸುತ್ತಿದೆ. ಯಾಕೆ ಈ ರೀತಿ ಹೇಳುತ್ತಿದ್ದೇನೆ  ಗೊತ್ತಾ ? ಕಳೆದ ಕೆಲವು ವಾರದ ಹಿಂದೆ ಸರ್ಕಾರವೇ ಘೋಷಣೆ ಮಾಡಿದಂತೆ  ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಸರ್ಕಾರದಿಂದ 5 ಲಕ್ಷ ಪರಿಹಾರ ಸಿಗಲಿದೆ. ಈ ಪರಿಹಾರ ,ರೈತ ತೀರಿಕೊಂಡ ಮೇಲೆ  ಆತನ ಕುಟುಂಬಕ್ಕೆ ನೆರವಾಗುತ್ತದೆ ಎಂಬ  ದೂರಾಲೋಚನೆಯೇ ಇರಬಹುದು, ಆದರೆ  ಈ ಘೋಷಣೆಯಿಂದಾಗಿ ಆಗುತ್ತಿರುವ ನ ಅನಾಹುತಗಳ ಅರಿವು ಇನ್ನು ನಮ್ಮ ಸರ್ಕಾರಕ್ಕೆ  ಆಗದಿರುವುದು ದುರದೃಷ್ಟಕರವಾಗಿದೆ.
 ರೈತರು  ಜೂಜಾಡಿ ಸೋಮಾರಿತನದಿಂದ ಸಾಲಮಾಡಿಕೊಂಡು ಸಾಯುತ್ತಿದ್ದಾರೆ ಎಂದು ಒಬ್ಬ , ರೈತರು  ಕೌಟುಂಬಿಕ ಕಲಹ, ಪ್ರೇಮ ವೈಫಲ್ಯಗಳಿಂದ  ಸಾಯುತ್ತಿದ್ದಾರೆ ಎಂದು ಮತ್ತೊಬ್ಬ   ಹೀಗೆ  ರೈತನ ಆತ್ಮಹತ್ಯೆ  ಬಗ್ಗೆ  ರಾಜಕಾರಣಿಗಳ  ಎಲುಬಿಲ್ಲದ ನಾಲಿಗೆ   ಮನಸ್ಸಿಗೆ ಬಂದದ್ದನ್ನು  ಮಾತನಾಡುತ್ತಿದೆ.

ನಿಜವಾಗಿಯೂ  ರೈತನ ಆತ್ಮಹತ್ಯೆ ಹಿಂದಿರುವ ಕಾರಣಗಳೇನು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಲ್ಲಿ ನಿಜವಾದ ರೈತರೆಷ್ಟು, ಪರಿಹಾರಕ್ಕೋಸ್ಕರವೇ ಆತ್ಮಹತ್ಯೆ ಮಾಡಿಕೊಂಡು ತಮ್ಮ ಕುಟುಂಬಕ್ಕಾಗಿ ತಮ್ಮನ್ನೇ ಬಲಿ ಕೊಟ್ಟುಕೊಳ್ಳುತ್ತಿರುವ ರೈತರೆಷ್ಟು ಎಂಬ  ಸತ್ಯಗಳನ್ನು  ಈ ಸರ್ಕಾರ ಅರಿಯಬೇಕಿದೆ.
ತನ್ನ ಸಂಸಾರಕ್ಕಾಗಿ ಎಷ್ಟೆಲ್ಲಾ ಕಷ್ಟಪಟ್ಟು ದುಡಿದರೂ ಮೂರು ಕಾಸು ಉಳಿಯುತ್ತಿಲ್ಲ,  ವ್ಯವಸಾಯವನ್ನೇ ನಂಬಿ   ಮಕ್ಕಳಿಗೆ ಆರೋಗ್ಯ , ಶಿಕ್ಷಣ ನೀಡಲಾಗುತ್ತಿಲ್ಲವಲ್ಲ ಎಂಬ ನೋವಿನಿಂದ  , ನಿರೀಕ್ಷೆಯಿಟ್ಟುಕೊಂಡು ಬೆಳೆದ ಬೆಳೆ  ಬೆಲೆ ಸಿಗಲಿಲ್ಲವಲ್ಲ ಎಂಬ  ದುಖದಿಂದ, ಬೆಳೆಗಾಗಿ ಮಾಡಿದ ಸಾಲದ ಅವಮಾನದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರು ಬಹಳಷ್ಟಿದ್ದಾರೆ. ಆದರೆ  ತನ್ನಿಂದ ತನ್ನ ಸಂಸಾರಕ್ಕೆ  ಎನೂ ಮಾಡಲಾಗುತ್ತಿಲ್ಲ, ಕನಿಷ್ಟ  ತಾನು ಸತ್ತರೆ ಅದಕ್ಕೆ ಸಿಗುವ ಪರಿಹಾರದಿಂದಾದರೂ ತನ್ನ ಕುಟುಂಬಕ್ಕೆ ಸಹಾಯವಾಗಬಹುದೆಂದು ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಹೆಚ್ಚಾಗುತ್ತಿರುವುದು  ನಾವೆಲ್ಲಾ ಅರಗಿಸಿಕೊಳ್ಳಲೇಬೇಕಾದ ಕಹಿ ಸತ್ಯವಾಗಿದೆ. ಸರ್ಕಾರದ ಪರಿಹಾರ ಧನ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರಿಗೆ ಪ್ರೊತ್ಸಾಹ ಧನವಾಗುತ್ತಿದೆ.
ಇದೆಲ್ಲಾ  ಹೊರತುಪಡಿಸಿ, ಮತ್ತೊಂದು ಮಗ್ಗುಲಲ್ಲಿ  ಹಳ್ಳಿಯ ಯಾರೋ ಒಬ್ಬ ಯಾವುದೋ ಕಾರಣಕ್ಕೆ  ಆತ್ಮಹತ್ಯೆ ಮಾಡಿಕೊಂಡರೂ ಅದನ್ನು ಸಹ  ರೈತನ ಆತ್ಮಹತ್ಯೆ ಎಂದು ಬಿಂಬಿಸುವ ಕಾರ್ಯವೂ  ನಿರಂತರವಾಗಿ ನಡೆಯುತ್ತಿದೆ. ಇತ್ತೀಚೆಗೆ ಸೌದೆ ಮಂಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬ    ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ, ಆದರೆ ಆದಿನ ರಾತ್ರಿ ಮಾದ್ಯಮದಲ್ಲಿ ಪ್ರಸಾರವಾದ ಸುದ್ದಿ ನೋಡಿ ಆಶ್ಚರ್ಯವಾಯಿತು. "ಮತ್ತೊಬ್ಬ ರೈತನ ಆತ್ಮಹತ್ಯೆ, ಒಂದು ಎಕರೆ ಜಮೀನಿನಲ್ಲಿ ರೇಷ್ಮೆ ಬೆಳೆಯುತ್ತಿದ್ದ ರೈತ, ಇದಕ್ಕಾಗಿ 4 ಲಕ್ಷ ಸಾಲ ಮಾಡಿಕೊಂಡಿದ್ದ, ಬೆಳೆ  ನಷ್ಟವಾಗಿದ್ದರಿಂದ ಸಾಲಭಾದೆ  ತಾಳಲಾರದೆ ಆತ್ಮಹತ್ಯೆ" ಎಂಬುದು ಈ ಸುದ್ದಿಯಾಗಿತ್ತು. ಇದರ ಹಿಂದಿನ ಮರ್ಮ ನೀವೆ ಊಹಿಸಿಕೊಳ್ಳಿ.

ಆತ್ಮಹತ್ಯೆ ಯಾರೇ ಮಾಡಿಕೊಂಡರೂ ಅದು ಒಟ್ಟೂ ಸಮಾಜದ ವೈಫಲ್ಯದಂತೆ ಕಾಣುತ್ತದೆ, ಆದರೆ    ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರ ಬಗ್ಗೆ ಸರ್ಕಾರ  ಪರಿಹಾರ  ಒದಗಿಸುವ ಬದಲು ಬೇರೆ  ಕಾರ್ಯತಂತ್ರಗಳನ್ನು  ಹಮ್ಮಿಕೊಳ್ಳಬಹುದೇ ಎಂಬುದಾಗಿ   ಯೋಚಿಸಬೇಕಿದೆ.
ಕಾರಣ ಮತ್ತು  ಕಾರ್ಯತಂತ್ರಗಳನ್ನು  ನೋಡುತ್ತಾ  ಹೋದಾಗ ಹಲವಾರು ಅಂಶಗಳನ್ನು ಕಾಣಬಹುದು.
  1. ಪ್ರತಿಯೊಬ್ಬರು  ತಾವೇನಾಗಿದ್ದಾರೋ ಅದೇ ವೃತ್ತಿಯಲ್ಲಿ  ತನ್ನ ಮಕ್ಕಳು  ಇನ್ನೂ ಎತ್ತರಕ್ಕೆ ಬೆಳೆಯಬೇಕು ಎಂದು ಬಯಸುತ್ತಾರೆ, ಆದರೆ  ತಾನೇನಾಗಿದ್ದೇನೋ ಅದೇ ವೃತ್ತಿಯನ್ನು  ತನ್ನ ಮಕ್ಕಳು ಮಾಡದಿರಲಿ ಎಂದು ಯೋಚಿಸುವ ವ್ಯಕ್ತಿ ರೈತ ಮಾತ್ರ. ರೈತನ  ಮನಸ್ಸಲ್ಲಿ  ತಾನು ಸಮಾಜದ ಕಟ್ಟಕಡೆಯ  ವ್ಯಕ್ತಿ ಎಂಬ ಮನೋಭಾವ ಬೆಳೆದಿದೆ, ತನಗೆ ಸಮಾಜದಲ್ಲಿ  ಅಷ್ಟೇನೂ  ಬೆಲೆ ಸಿಗುತ್ತಿಲ್ಲ, ತನ್ನ ಬೆಳೆಗೆ  ಬೆಲೆ ಇಲ್ಲ, ಸರ್ಕಾರಿ ಕಛೇರಿಯ ಜವಾನನೂ ಸಹ ನನ್ನನ್ನು ಕೀಳಾಗಿ ನೋಡುತ್ತಾನೆ  ಇದು ನಾನು ರೈತನಾಗಿರೋದಕ್ಕೆ ಸಿಗುತ್ತಿರುವ ಪ್ರತಿಫಲ, ಆದರೆ  ನನ್ನ ಮಕ್ಕಳು  ನನ್ನಂತಾಗೋದು ಬೇಡ ಎಂದೇ ಪ್ರತೀ ರೈತನೂ ಯೋಚಿಸುತ್ತಾನೆ. ನಮ್ಮ ಆಡಳಿತ ಸರ್ಕಾರಗಳೂ ಸಹ  ಇದಕ್ಕೆ ಪೂರಕವಾಗಿಯೆ  ರೈತನನ್ನು ನಡೆಸಿಕೊಳ್ಳುತ್ತಿವೆ. ರೈತನ ಯಾವುದೇ ಕೆಲಸ ಆಗಬೇಕೆಂದರೂ  ಸರ್ಕಾರಿ ಅಧಿಕಾರಿಗಳು ರೈತನನ್ನು   ಸುಲಿಗೆ ಮಾಡಿಯೇ ಬಿಡುತ್ತಾರೆ. ಅದೆಷ್ಟೋ ಯೋಜನೆಗಳು ರೈತನಿಗೆ ತಲುಪುವುದೇ ಇಲ್ಲ, ಬದಲಾಗಿ  ರಾಜಕಾರಣಿಗಳ ಬೆಂಬಲಿಗರೆಂದು ಕರೆಸಿಕೊಳ್ಳುವವ ಪಾಲಾಗುತ್ತವೆ. ರೈತನ  ಕೈಗೆ  ಬೆಣ್ಣೆ ಸವರಿ ಆಸೆ ತೋರಿಸಿ, ಸೋ ಮಾರಿತನ ಬೆಳೆಸೋ  ಸರ್ಕಾರದ ಯೋಜನೆಗಳಿಗಿಂತ, ರೈತನ್ನು  ಗೌರವಿಸುವ ಮತ್ತು ಯುವಕರನ್ನು  ವ್ಯವಸಾಯ  ಕೃಷಿ ಸಾಮೂಹಿಕವಾಗಿ ಪ್ರೋತ್ಸಾಹಿಸುವ  ಯೋಜನೆಗಳು ಸರ್ಕಾದಿಂದ ಬರಬೇಕಿದೆ.
  2.  ಬರಗಾಲದ  ವಿದ್ಯುತ್ ಸಮಸ್ಯೆಯಲ್ಲಿಯೂ  ಹಗಲು ರಾತ್ರಿಯನ್ನದೇ ಕಷ್ಟಪಟ್ಟು  ತರಕಾರಿ ಹಣ್ಣು ಹಂಪಲುಗಳನ್ನು ಬೆಳೆಯುವ ರೈತನಿಗೆ ಅದಕ್ಕೆ   ಸರಿಯಾದ ಬೆಲೆ ಸಿಗದಿದ್ದರೆ ಹತಾಸನಾಗೋದು ಸಹಜ. ಕಷ್ಟಪಡೋದು  ರೈತ, ಅದರೆ  ಅನಾಯಾಸವಾಗಿ  ಲಾಭ ಮಾಡಿಕೊಳ್ಳೋದು ಮಾತ್ರ   ಮಾರುಕಟ್ಟೆಯ  ದಲ್ಲಾಳಿಗಳು.  ರೈತ  ತಾನು ಬೆಳೆದ  ಬೆಳೆಯನ್ನು   ಮಾರುಕಟ್ಟೆಗೆ  ತರುವಷ್ಟರಲ್ಲೇ  ಹೃರಾಣಾಗಿ ಹೋಗುತ್ತಾನೆ. ಈ ದಲ್ಲಾಳಿಗಳು  ರೈತನ ಶ್ರಮಕ್ಕೆ ಕವಡೆ ಕಾಸಿನ ಬೆಲೆಯನ್ನೂ ಸಹ ನೀಡುವುದಿಲ್ಲ. ತಮಗೇ ಬೇಕಾದ ರೀತಿಯಲ್ಲಿ  ಬೆಲೆ ಕಟ್ಟುತ್ತಾರೆ. ಅದೂ ಹೋಗಲಿ  ನಿಗದಿಮಾಡಿದ ಬೆಲೆಯನ್ನಾದರು  ರೈತನಿಗೆ ನೀಡುತ್ತಾರೆಯೇ  ಎಂದರೆ ಅದೂ ಇಲ್ಲ, ಕೇವಲ  ಅರ್ಧ ಘಂಟೆ ನಿಂತು ಬೆಲೆ ನಿಗದಿ ಮಾಡಿದ್ದಕ್ಕಾಗಿ   ಶೇ.10 ರಷ್ಟನ್ನು ಕಿತ್ತುಕೊಳ್ಳುತ್ತಾನೆ, ಇನ್ನು ತೂಕದಲ್ಲಿ ಸಹ ಮೋಸವಾಗುತ್ತದೆ, ಒಂದು ಮೂಟೆಗೆ  3-4 ಕೆ.ಜಿ  ಕಳೆಯುತ್ತಾನೆ ಆದರೆ ಇದಕ್ಕೆ ಕಾರಣವೇ ಇಲ್ಲ. ಬೆಳೆಗೆ ಬೆಲೆ ಇರಲಿ ಇಲ್ಲದಿರಲಿ  ಇವರ  ಕಮೀಷನ್ ಮಾತ್ರ  ಕಡಿಮೆಯಾಗದು. ಎಷ್ಟೋ ಸಲ  ಮಾರುಕಟ್ಟೆಗೆ  ಬಂದ ರೈತ  ತಾನು ಬೆಳೆದ  ಬೆಳೆಗೆ  ಬೆಲೆಯಿಲ್ಲದೆ,  ಮಾರಿದ ಹಣ  ದಲ್ಲಾಳಿ  ಕಮೀಷನ್, ಹಾಗು  ವಾಹನ ಬಾಡಿಗೆಗೆ ಸರಿಹೋಗಿ ತಾನು  ಬೆಳಿಗ್ಗೆ    ತಿಂಡಿ ತಿನ್ನಲೂ ಹಣವಿಲ್ಲದೆ ಬರಿಗೈಲಿ ವಾಪಸ್ಸಾಗುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇದೆಲ್ಲಾ ಗೊತ್ತಿದ್ದು   ಕೃಷಿ ಮಾರುಕಟ್ಟೆ ಅಧಿಕಾರಿಗಳು ಜಾಣಕುರುಡುತನ  ತೋರುವ ಬದಲು, ತಮ್ಮ ಜವಾಬ್ದಾರಿ ಅರಿತು ಕೆಲಸಮಾಡಬೇಕಿದೆ. ತನ್ನ  ಶ್ರಮಕ್ಕೆ  ಸರಿಯಾದ ಫಲ ಸಿಕ್ಕರೆ ಯಾವ ರೈತನೂ ಸಾಯುವ ನಿರ್ಧಾರ ಮಾಡುವುದಿಲ್ಲ. 
  3. ರಾಜಕಾರಣಿಗಳಿಗೆ, ಸಿನಿಮಾದವರಿಗೆ, ಕ್ರೀಡೆಯವರಿಗೆ , ದೊಡ್ಡ ಶ್ರೀಮಂತರಿಗೆ ಸಿಗುವ ಮೀಸಲಾತಿಗಳು, ಕೋಟಾಗಳು ಯಾವ ರೈತನಿಗೂ ಅಥವಾ ರೈತನ ಮಗನಿಗೂ ಸಿಗುವುದಿಲ್ಲ. ಇತ್ತೀಚೆಗೆ ಕೆಲವು ಆರೋಗ್ಯ  ಯೋಜನೆಗಳು ಬಂದಿವೆಯಾದರು ಅವುಗಳನ್ನು ಪಡೆಯಬೇಕಾದರೂ ಸಹ ರೈತರು ಅಲೆದಾಡಬೇಕಿದೆ. ರೈತನ ಮಕ್ಕಳಿಗೆ  ದೊಡ್ಡ ದೊಡ್ಡ ಶಿಕ್ಷಣ  ಸಂಸ್ಥೆಗಳಲ್ಲಿ  ದಾಖಲಾಗುವುದಕ್ಕೆ   ಅವಕಾಶ ಸಿಗಬೇಕಿದೆ. 
  4. ರಾಜ್ಯ ಸರ್ಕಾರಗಳ  ಬಜೆಟ್‌ನಲ್ಲಿ ಮೊದಲ ಸ್ಥಾನ ಪಡೆಯೋದೇ ಕೃಷಿ , ಅದರೆ ಆ ಬಜೆಟ್‌ನ  ಅನುದಾನ ಸಮರ್ಪಕವಾಗಿ  ರೈತನನ್ನು ತಲುಪಬೇಕಿರುವ ಬಗ್ಗೆ   ಸರ್ಕಾರ ಕಟ್ಟುನಿಟ್ಟಿನ  ಯೋಜನೆ ರೂಪಿಸಬೇಕಿದೆ. ರೈತರೆಂದ ಮೇಲೆ ಎಲ್ಲರೂ ರೈತರೇ, ಆದರೆ ಸರ್ಕಾರ  ಯೋಜನೆಗಳನ್ನು ರೂಪಿಸುವಾಗ  ಕೆಲವು ಮಾನದಂಡಗಳನ್ನು  ಹಾಕುತ್ತದೆ, ಉದಾ: ನಾಲ್ಕು ಎಕರೆಗಿಂತ ಹೆಚ್ಚು ಜಮೀನಿರುವ ರೈತರಿಗೆ ಮಾತ್ರವೇ  ಕೆಲವು ಯೋಜನೆಗಳು ಎಂದು , ಆದರೆ  ಹೆಚ್ಚು ಜಮೀನು  ಹೊಂದಿರುವ ರೈತರು ಸಾಮಾನ್ಯವಾಗಿ   ಮಧ್ಯಮವರ್ಗದ ವರಾಗಿದ್ದು  ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಸಧೃಡರಾಗಿರುತ್ತಾರೆ. ಅವರಿಗೆ ಮಾತ್ರವೇ ಯೋಜನೆಗಳನ್ನು ನೀಡುವುದಿಕ್ಕಿಂತ  ಸಾಮೂಹಿಕವಾಗಿ ಎಲ್ಲಾ ರೈತರಿಗೂ ಸಮಾನ  ಅವಕಾಶ ನೀಡಬೇಕಿದೆ. 
  5. ವ್ಯವಸಾಯ ಈಗ  ಅಸಂಘಟಿತ  ವಲಯವಾಗಿದೆ,  ಒಂದು ವ್ಯವಸ್ಥಿತವಾಗಿ ಯಾವ ಸಮಯದಲ್ಲಿ ಯಾವ ಬೆಳೆ ಬೆಳೆಯಬೇಕು, ಬೆಳೆಗಳ  ವೈಜ್ಞಾನಿಕ ಪೋಷಣೆ ಹೇಗಿರಬೇ ಕು ಎಂಬ ಅರಿವು ರೈತನಿಗೆ ಇಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಿದೆ.  ರೈತರಿಗೆ  ಲಾಭದಾಯಕ ಹಾ ಗು ವಿವಿದ ವಾತಾವರಣದಲ್ಲಿ ಬೆಳೆ ಯಬಹುದಾದ ಬೆಳೆಗಳ ಬಗ್ಗೆ ಅರಿವು ಮೂಡಿಸಬೇಕು. ರೈತರಿಗೆ  ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುವಂತಹ ತಂತ್ರಜ್ಞಾನ ಸಲಕರಣೆಗಳನ್ನು ಒದಗಿಸಬೇಕಿದೆ. ರೈತರು ಬೆಳೆಯುವ ಬೆಳೆಗಳಿಗೆ  ವಿಮೆ ಪದ್ದತಿ  ಹಾಗು ಬೆಂಬಲ ಬೆಲೆ ನೀಡಬೇಕು.  ಒಂದು  ವೇಳೆ   ಪ್ರಕೃತಿ ವಿಕೋಪದಿಂದಾಗಿ ಹಾನಿಯಾದರು ರೈತನಿಗೆ ಸಹಾಯವಾಗಬೇಕಿದೆ.
  6. ಮುಖ್ಯವಾಗಿ ಇತ್ತೀಚಿನ ದಿನಗಳಲ್ಲಿ ರೈತನ ಆತ್ಮಹತ್ಯೆಗೆ  ಸರ್ಕಾರದ ಪರಿಹಾರ ಧನವೂ ಸಹ ಕಾರಣ ಎಂಬುದು ಸತ್ಯ. ಸತ್ತಮೇಲೆ  ಪರಿಹಾರ ನೀಡಿ, ಇನ್ನಷ್ಟು ರೈತರು ಪರಿಹಾರದ ಹಣಕ್ಕಾಗಿಯೇ ಸಾಯುವುದಕ್ಕೆ ಪ್ರೋತ್ಸಾಹ ನೀಡುವ ಬದಲು, ರೈತರ ಕಲ್ಯಾಣಕ್ಕಾಗಿ ಅದೇ ಹಣವನ್ನು ಬಳಸುವ ಕಾರ್ಯಕ್ರಮಗಳನ್ನು ರೂಪಿಸಿ, ಆ ಕಾರ್ಯಕ್ರಮ ಎಲ್ಲಾ ರೈತರಿಗೂ ತಲುಪುವ ಪಾರದರ್ಶಕ ನೀತಿಯನ್ನು ಸರ್ಕಾರ ಜಾರಿಗೊಳಿಸಬೇಕು.

ಸಾಲಮನ್ನಾ, ಸಾಲ ಸೌಲಭ್ಯ, ಬೀಜ ಸೌಲಭ್ಯ, ಸಕಾಲದಲ್ಲಿ ವಿದ್ಯುತ್ ಸರಬರಾಜು, ನ್ಯಾಯೋಚಿತ ಬೆಂಬಲ ಬೆಲೆ ಇತ್ಯಾದಿ ಪರಿಹಾರ ಕ್ರಮಗಳು ರೈತರನ್ನು ಮುಟ್ಟುವ ವೇಳೆಗೆ; ಅಧಿಕಾರಶಾಹಿಯ ಆಲಸ್ಯ, ತಾಂತ್ರಿಕ ಕೊಕ್ಕೆಗಳು ಮತ್ತು ಭ್ರಷ್ಟತೆಯಿಂದಾಗಿ ಅವು ತಮ್ಮ ಗುರಿ ಕಳೆದುಕೊಂಡಿವೆ , ಸರ್ಕಾರಗಳು ಇತ್ತಕಡೆ ಗಮನಹರಿಸಿ ವೈಜ್ಞಾನಿಕವಾಗಿ ರೈತರಿಗೆ  ಸಹಾಯವಾಗುವಂತಹ  ಯೋಜನೆಗಳನ್ನು ರೂಪಿಸಿ ,ಅನ್ನದಾತನಿಗೆ   ಬೆನ್ನೆಲುಬನ್ನು ಗಟ್ಟಿ ಮಾಡಬೇಕಿದೆ.
-ಕನ್ನಡವೆಂಕಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು