ನಾವೆಲ್ಲಿದ್ದೇವೆ... ಎಲ್ಲಿದ್ದಾರೆ ನಮ್ಮ ಹೆತ್ತವರು....??


ಯಾವುದೋ ಜನಜಂಗುಳಿಯಲ್ಲಿದ್ದರೂ ಸಹ ಏಕಾಂಗಿ ಅನಿಸಿದಾಗ, ಈ ಜಗತ್ತಿನಲ್ಲಿ ಯಾರು ನನ್ನನ್ನು ಅರ್ಥಾನೇ ಮಾಡಿಕೊಳ್ತಿಲ್ಲ ಅನಿಸಿದಾಗ, ನಮ್ಮ ಜೀವನವನ್ನೇ ನಾವು ದ್ವೇಷಿಸಿಕೊಳ್ಳುವಂತಾದಾಗ ಹಾಗೇ ಸುಮ್ಮನೇ ಕಣ್ಣುಮುಚ್ಚಿ  ಈ ಜಗತ್ತಿನಲ್ಲಿ   ನನ್ನನ್ನು ಅತಿ ಹೆಚ್ಚು ಪ್ರೀತಿಸೋ ವ್ಯಕ್ತಿಗಳು, ನನ್ನ ಕ್ಷೇಮ ಬಯಸೋರು ಮತ್ತು ನನಗಾಗಿಯೇ ಬದುಕಿದವರು  ಯಾರಾದ್ರು ಇದಾರಾ ಅಂತ ಒಂದು ಕ್ಷಣ ಯೋಚಿಸಿ. ಆಕ್ಷಣದಲ್ಲಿ ನಮ್ಮ ಕಣ್ಣಿಗೆ ಬರೋದು ನಮ್ಮ  ತಂದೆ ತಾಯಿ ವ್ಯಕ್ತಿತ್ವ ಮಾತ್ರ.
"ಅಪ್ಪ ಸ್ಕೂಲ್  ಪೀಸು ಕಟ್ಟಬೇಕು, ಸ್ಕೂಲಿಂದ ಟ್ರಿಪ್ ಹೋಗ್ತಿದಾರೆ  ನಾನು ಹೋಗಬೇಕು "  ಅಂತ ದುಡ್ಡು ಕೇಳ್ತಾನೆ ಇರ್ತಿದ್ವಿ. 'ಎಷ್ಟೇ ಕೇಳಿದ್ರು ದುಡ್ಡು ಕೊಡಲ್ಲಾ, ಇವರಿಗೇಕೆ  ಅರ್ಥ ಆಗಲ್ಲಾ, ನಾವು ದಿನಾ ಸ್ಕೂಲಲ್ಲಿ ಬೈಸಿಕೊಳ್ಳೋದು ಇವರಿಗೆ ಇಷ್ಟಾನಾ" ಅಂತೆಲ್ಲಾ  ಜೊತೆಗಾರರೊಂದಿಗೆ  ಬೇಸರಿಸಿಕೊಳ್ತಿದ್ವಿ.  "ಈ ಟ್ರಿಪ್ ಎಲ್ಲಾ ಬೇಡ ಮಗಾ, ನಿನಗೆ  ಪ್ರಯಾಣ ಆಗಲ್ಲ, ನಮ್ಮ ಟೈಮ್ ಸರಿಯಿಲ್ಲ, ಮುಂದಿನ ವರ್ಷಕ್ಕೆ  ಹೋಗೋವಂತೆ ಬಿಡಪ್ಪಾ" ಅನ್ನೊ ಮಾತು  ಅಪ್ಪ ಅಮ್ಮನ ಕಡೆಯಿಂದ ಬರ್ತಿತ್ತು. ಆದರೆ ನನ್ನ ಮಗನೂ ಎಲ್ಲ ಮಕ್ಕಳ ಹಾಗೆ  ಸಂತೋಷವಾಗಿರಲಿ, ಟ್ರಿಪ್ ಹೋಗಲಿ ಅನ್ನೋ ಆಸೆ ಅಪ್ಪ ಅಮ್ಮನಿಗೂ ಇದೆ, ಆದರೆ ದುಡ್ಡು ಹೊಂದಿಸೋಕೆ ಆಗದೆ ಅಂತೆಲ್ಲಾ ಹೇಳ್ತಿದಾರೆ   ಅನ್ನೋ ಸತ್ಯ ನಮಗೆ ಆಗ ತಿಳಿಯುತ್ತಲೇ ಇರಲಿಲ್ಲ.
ಸ್ಕೂಲ್ ಪೀಸು ಕಟ್ಟಬೇಕು ಅಂತ ಜಬರ್‌ದಸ್ತ್ ಇಂದ ಕೇಳೋ ನಮಗೆ , ನಾವು  ಪೀಸು ಕೇಳಿದ ದಿನದಿಂದಲೇ ಅಪ್ಪ ಅಮ್ಮ ಆ ದುಡ್ಡು ಹೊಂದಿಸೋಕೆ ಎಷ್ಟು ಒದ್ದಾಡ್ತಿದಾರೆ ಅನ್ನೋದು ಗೊತ್ತಾಗಲೇ ಇಲ್ಲ. ಆಗ ಎಲ್ಲವೂ  ಬೇಕು, ಎಲ್ಲೇಲ್ಲೋ ಹೋಗಬೇಕು, ಏನೇನೋ ಮಾಡಬೇಕು  ಅನ್ನೋ ತುಡಿತ ಆದರೆ  ಅಪ್ಪ ಅಮ್ಮ ವಿನಾಕಾರಣ  ನನ್ನನ್ನು ತಡೀತಾರೆ ಅನ್ನೋ ಬೇಸರವಿತ್ತೇ ವಿನಾ, ಎಲ್ಲಿ ಹೋದಾಗ ನಮ್ಮ ಮಗನಿಗೆ ಏನಾಗಿಬಿಡುತ್ತೋ ಅನ್ನೋ  ಭಯ ಅವರಿಗೆ ಅನ್ನೋದು ನಮಗೆ ಕಾಣಲಿಲ್ಲ.
ಈಗ ಬೆಳೆದು ದೊಡ್ಡವರಾದ ಮೇಲೆ, ಒಮ್ಮೆ ಹಿಂತಿರುಗಿ ನೋಡಿದಾಗ ಒಂದೊಂದು ರೂಪಾಯಿ ಸಂಪಾದನೆ ಮಾಡೋದು ಎಷ್ಟು ಕಷ್ಟ ಅಂತ  ಗೊತ್ತಾದಾಗ, ಅವತ್ತು ಅಪ್ಪ ಅಮ್ಮ ಯಾಕೆ  ಸ್ಕೂಲ್ ಪೀಸು ಲೇಟಾಗಿ ಕೊಟ್ಟರು, ಟ್ರಿಪ್ಮಯಾಕೆ ಕಳಿಸಿಲ್ಲ ಅನ್ನೋ  ಸತ್ಯದ ಅರಿವಾಗ್ತಿದೆ. ಕಾಲವೆಂಬ ಕುದುರೆಯ ಹಿಂದೆ ಓಡುತ್ತಿರುವ ನಾವುಗಳು ನಮ್ಮನ್ನು ಓಡೋ ಅಷ್ಟು ದೊಡ್ಡವರಾಗಿಸಿದ ಅಪ್ಪ ಅಮ್ಮನನ್ನು  ಈ ಓಟದಲ್ಲಿ ಬಹಳ ದೂರದಲ್ಲಿಯೇ ಬಿಟ್ಟು ಓಡಿದ್ದೇವೆ. ಹಿಂತಿರುಗಿ ನೋಡಿದಾಗ  ನಮ್ಮ ವೇಗಕ್ಕೆ ಬರಲಾಗದೇ ಅವರದೇ ವೇಗದಲ್ಲಿ ಇರುವುದನ್ನು ಕಾಣುತ್ತೇವೆ.
ನಾವೆಷ್ಟೇ ಸಂಪಾದನೆ ಮಾಡಿದರೂ ಅವರನ್ನು ಹತ್ತಿರದಲ್ಲಿದ್ದು ನೋಡಿಕೊಳ್ಳದೇ ಹೋದರೆ ನಮ್ಮ ಸಂಪತ್ತೆಲ್ಲಾ ವ್ಯರ್ಥ ಅಲ್ಲವಾ ? ನಾವು ಏನು ಮಾಡಿದರೂ , ಏನು ಮಾಡದೇ ಇದ್ದರೂ ಅವರಿದ್ದ ಹಾಗೆ ಇದ್ದುಬಿಡುತ್ತಾರೆ, ಅದು ಎಲ್ಲಾ ತಂದೆ ತಾಯಿಗಳ   ಸಹಜ ಗುಣ, ನಮ್ಮ ಮಕ್ಕಳು ಬಿಟ್ಟು ಹೋದರು ಎನ್ನುವುದಕ್ಕಿಂತ, ನಮ್ಮ ಮಕ್ಕಳು ಬಹಳ ದೂರದಲ್ಲಿ ಚನ್ನಾಗಿ ಬದುಕುತ್ತಿದ್ದಾರೆ ಎನ್ನುವ ಖುಷಿಯಲ್ಲಿಯೇ ಉಳಿದುಬಿಡುತ್ತಾರೆ.
ಆದರೆ ಎಲ್ಲವನ್ನು  ಬಿಟ್ಟು ಬದುಕಿನ ವೇಗದಲ್ಲಿ   ಓಡುವ ನಮಗೆ , ಎಲ್ಲೋ ಒಂದು  ನಮ್ಮ ಅಪ್ಪಅಮ್ಮಂದಿರನ್ನು ನಾವೆಷ್ಟು  ಅರ್ಥಮಾಡಿಕೊಂಡಿದ್ದೇವೆ ಎಂಬ ಬಗ್ಗೆ , ನಮ್ಮಲ್ಲಿ  ನಾವೇ ಕೆಲವು ಪ್ರಶ್ನೆಗಳನ್ನು  ಹಾಕಿಕೊಳ್ಳಬೇಕಿದೆ. ಇಷ್ಟು ದಿನ ಈ ಬಗ್ಗೆ ಯೋಚನೆ ಮಾಡಿದ್ದೇವೊ ಇಲ್ಲವೋ ಗೊತ್ತಿಲ್ಲ, ಆದರೆ ಇನ್ನು ಮುಂದಾದರೂ ಅವರನ್ನು ಅರ್ಥ ಮಾಡಿಕೊಳ್ಳೋ ಪ್ರಯತ್ನ ಮಾಡೋಣ. ಎಷ್ಟೋ ಹಬ್ಬ  ಹರಿದಿನಗಳ ಆಚರಣೆಯನ್ನು ಸ್ನೇಹಿತರೊಂದಿಗೆ ಸೇರಿ  ಮಾಡುತ್ತೇವೆ. ಸಾಲು ಸಾಲು ರಜೆ ಸಿಕ್ಕಿಬಿಟ್ಟರೆ  ಜಾಲಿಯಾಗಿರೋ ಸ್ಥಳಗಳ ಪ್ರಯಾಣಕ್ಕೆ ಸಿದ್ದರಾಗತ್ತೇವೆ ಹೊರತು, ಈ ಸಮಯ ಅಪ್ಪಅಮ್ಮನ ಜೊತೆ ಇರೋಣ ಎಂಬ ಯೋಚನೆ ಮಾಡೋದೇ ಇಲ್ಲ. ಕೆಲಸ, ಓಡಾಟ, ದುಡ್ಡು, ಕಾರು, ಬಂಗಲೇ ಅಂತೆಲ್ಲಾ ತಲೆಕೆಡಿಸಕೊಳ್ಳೋ ಮಧ್ಯೆ ಅಪ್ಪ ಅಮ್ಮ  ದಿನಕ್ಕೊಮ್ಮೆಯೂ ನೆನಪಾಗೋದು ಕಡಿಮೇನೇ ಎನ್ನಬಹುದು. ಈ ಎಲ್ಲಾ  ಅಂಶಗಳನ್ನು  ಮನದಲ್ಲಿಟ್ಟುಕೊಂಡು, ಅಪ್ಪ ಅಮ್ಮನ ಬಗ್ಗೆಯೂ ಸ್ವಲ್ಪ ಯೋಚಿಸೋಣ  ಎಂದು ನಿರ್ಧರಿಸಿ ,ಅವರ ಬಗ್ಗೆ ನಮಗೇನು ಗೊತ್ತಿ ದೆ  ಎಂಬುದರ ಬಗ್ಗೆ   ನಮ್ಮನ್ನು ನಾವೇ ಈ ಕೆಳಕಂಡ ಪ್ರಶ್ನೆಗಳನ್ನು ಕೇಳಿಕೊಂಡು   ಸ್ವ-ವಿಮರ್ಶೆ ಮಾಡಿಕೊಳ್ಳೋಣ  ಬನ್ನಿ.

ಒಂದು ತಿಂಗಳಲ್ಲಿ ಎಷ್ಟು ದಿನ ಕೆಲಸ ಮಾಡ್ತೇನೆ, ಕೆಲಸವಿಲ್ಲದ ಎಷ್ಟು ದಿನ  ಅಪ್ಪ ಅಮ್ಮನ ಭೇಟಿ ಮಾಡ್ತಿನಿ ?
ಕೊನೆಯದಾಗಿ ಅಪ್ಪ ಅಮ್ಮನ ಜೊತೆ ಖುಷಿ ಖುಷಿಯಾಗಿ ಮಾತಾಡಿದ್ದು ಯಾವಾಗ ?
ಅಪ್ಪ ಅಮ್ಮನ ಜೊತೆ ಜೋರು ನಕ್ಕಿದ್ದು ಯಾವಾಗ ಮತ್ತು ಯಾಕೆ ?
ಅಪ್ಪ ಅಮ್ಮ ತುಂಬಾ ಇಷ್ಟ ಪಡೋ ಊಟ ತಿಂಡಿ ಯಾವುದು ಅಂತಾ  ನಮಗೆ  ಗೊತ್ತಿದೆಯಾ ?
ಕೊನೆಯದಾಗಿ ಅಪ್ಪ ಅಮ್ಮನ ಜೊತೆ ಕೂತು ಊಟ ಮಾಡಿದ್ದು ಯಾವಾಗ ?
ಅಪ್ಪ ಅಮ್ಮ ನೀವಂದ್ರೆ ನನಗೆ ತುಂಬಾ ಇಷ್ಟ ಅಂತ ಯಾವಾಗಲಾದ್ರು ಹೇಳಿದೀವಾ ?
ಅಪ್ಪ ಅಮ್ಮನ್ನ ತುಂಬಾ ಸಂತೋಷಡಿಸೋ ಅಂತ ವಿಷಯ ಯಾವುದು ಗೊತ್ತಿದೆಯಾ ?
ದೊಡ್ಡವರಾದ ಮೇಲೆ  ಯಾವತ್ತಾದ್ರು ಅಪ್ಪ ಅಮ್ಮನ  ಅಪ್ಪಿಕೊಂಡು  ಪ್ರೀತಿ ತೋರಿಸಿದೀವಾ  ?

ಬಹುಶಃ  ಈ ಮೇಲಿನ  ಯಾವ ಪ್ರಶ್ನೆಗೂ ನಮ್ಮಲ್ಲಿ ಬಹಳಷ್ಟು ಜನರಿಗೆ ಉತ್ತರವಿಲ್ಲ, ಎಲ್ಲ ವನ್ನು ಸಂಪಾದಿಸಿಕೊಳ್ಳೋ  ನಮಗೆ  ದೇವರೇ ಸಂಪಾದಿಸಿ ಕೊಟ್ಟಿರೋ  ಅಪ್ಪ ಅಮ್ಮನನ್ನು   ಅವರು ಇರುವಷ್ಟು ದಿನ ಸಂತೋಷವಾಗಿ ನೋಡಿಕೊಳ್ಳಬೇಕು ಅನ್ನೋ ಸತ್ಯ  ಅವರು ನಮ್ಮಿಂದ ದೂರ  ಆಗೋ ತನಕ ಗೊತ್ತಾಗೋದೇ ಇಲ್ಲ. ಕೆಲಸದ ನಡುವೆ  ಬಿಡುವು ಸಿಕ್ಕರೆ ಎಲ್ಲಿ ಹೋಗೋದು ಅಂತ ಸ್ನೇಹಿತರೊಡನೆ ಚರ್ಚೆ  ಮಾಡೋದನ್ನು ಬಿಟ್ಟು  ವರ್ಷದಲ್ಲಿ ಕೆಲವು ಬಾರಿಯಾದರೂ ಅಪ್ಪ ಅಮ್ಮನ ಜೋತೆ ಇರೋಣ . ಅವರ ಆರೋಗ್ಯ ವಿಚಾರಿಸೋಣ, ಅವರು ಹೋಗಬೇಕಿಂದಿರುವ ಸ್ಥಳಗಳಿಗೆ ಕರೆದೊಯ್ಯೋಣ, ಅವರು ಪ್ರೀತಿಸೋ ಜನರನ್ನು ಕರೆತರೋಣ. ಜೊತೆಗೆ ಮೇಲಿನ ಪ್ರಶ್ನೆಗಳನ್ನು ಮತ್ತೊಮ್ಮೆ ಓದಿ  ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋಣ........

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು