ನಮ್ಮ ಹಿರಿಯರ ಹಬ್ಬಗಳು ಮತ್ತು ನಮ್ಮ ಇಂದಿನ ಮನೋಭಾವಗಳು


 

 ನಮ್ಮ ಹಿರಿಯರ ಹಬ್ಬಗಳು ಮತ್ತು ನಮ್ಮ ಇಂದಿನ ಮನೋಭಾವಗಳು
(ನೇಸರ ಉದಯೋನ್ಮುಖ ಬರಹಗಾರರ ವೇದಿಕೆ, ಬೆಂಗಳೂರು ಸ್ಪರ್ಧೆಯಲ್ಲಿ ಮೊದಲನೇ ಬಹುಮಾನ ಪಡೆದ ಲೇಖನ)
ಅದೊಂದು ಕಾಲದಲ್ಲಿ, ಹಬ್ಬವೆಂದರೆ ಇಡೀ ಊರಿಗೆ ಊರೇ ಸಂಭ್ರಮದಿಂದ ಸಜ್ಜುಗೊಳ್ಳುತ್ತಿತ್ತು, ಹಬ್ಬದಿ ಹಿಂದಿನ ದಿನದಿಂದ ಹಬ್ಬ ಮುಗಿದ ಮೂರು ದಿನಗಳ ತನಕವೂ ಅದೇ ಸಂಭ್ರಮದಲ್ಲಿ ಜನರು ತಮ್ಮ ಎಲ್ಲಾ ನೋವು ಕಷ್ಟ ಕಾರ್ಪಣ್ಯಗಳನ್ನು ಮರೆತುಬಿಡುತ್ತಿದ್ದರು.
ಮನೆಯ ಮೂಲೆ ಮೂಲೆಯ ಕಸ ಕೊಳೆ ತೆಗೆದು ತೋರಣ-ತಳಿರುಗಳಿಂದ ಶೃಂಗಾರಗೊಳ್ಳುತ್ತಿದ್ದವು, ಇಲ್ಲಿ ಯಾವುದೇ ತೋರಿಕೆ ಇರುತ್ತಿರಲಿಲ್ಲ ಮತ್ತು ಆಡಂರವೂ ಇರುತ್ತಿರಲಿಲ್ಲ. ತಮ್ಮ ಬಳಿ ಇರುವ ವಸ್ತುಗಳೇ ಸಾಕಾಗುತ್ತಿದ್ದವು. ಅದಕ್ಕಿಂತ ಹೆಚ್ಚಾಗಿ ವರ್ಷದ ಕೆಲವು ಹಬ್ಬಗಳನ್ನು ಮಾತ್ರವೇ ಈ ರೀತಿ ವಿಜೃಂಭಣೆಯಿಂದ ಮಾಡಲಾಗುತಿತ್ತು. ನಾವೆಲ್ಲಾ ಚಿಕ್ಕವರಿದ್ದಾಗ ಹಬ್ಬದ ದಿನ ನಮ್ಮಗಳ ಅಪ್ಪಂದಿರು ಪೇಟೆಗೆ ಹೋಗಿ ಮದ್ಯ್ಹಾನದ ವೇಳೆ ಹಬ್ಬದ ಸಾಮಾನು ತರುತ್ತಿದ್ರು, ನಾವೆಲ್ಲಾ ಅವರ ಬರುವಿಕೆಯನ್ನೇ ಎದುರು ನೋಡುತ್ತಾ ಏನೇನು ತರಬಹುದು, ಯಾವ ಬಣ್ಣದ ಬಟ್ಟೆ ತರಬಹುದು, ಬಲೂನು ಪೀಪಿ ತರಬಹುದಾ ಎಂಬ ಕುತೂಹಲದಿಂದ ಕಾಯುತ್ತಿದ್ದೇವು. ಆ ಕುತೂಹಲದಲ್ಲಿದ್ದ ಖುಷಿ ಸಮಾನವಾದುದು ಯಾವುದೂ ಇಲ್ಲ.
ಈಗ ಏನಾಗಿದೆ, ತಿಂಗಳಿಗೆ ಎರಡು ಹಬ್ಬಗಳು ಸಂಕಷ್ಟಿ , ಏಕಾದಶಿ, ಚತುರ್ಥಿ, ಗೌರಿ ವ್ರತ, ಲಕ್ಷ್ಮೀಪೂಜೆ ಹೀಗೆ... ನಮ್ಮ ಹಳ್ಳಿಗಳಲ್ಲಿ ಮೊದಲಿಗೆ ಈ ವರಮಹಾಲಕ್ಷಿ ಪೂಜೆ, ಏಕಾದಶಿಗಳಂತಹ ಹಬ್ಬಗಳ ಪರಿಚಯವೇ ಇರಲಿಲ್ಲ, ಈಗ ಹಳ್ಳಿಗಳಲ್ಲಿಯೂ ಸಹ ಇದು ವ್ಯಾಪಕವಾಗಿಬಿಟ್ಟಿದೆ.
ಇವುಗಳಲ್ಲೆಲ್ಲಾ ನಮ್ಮ ಭಕ್ತಿಗಿಂತ ತೋರಿಕೆ ಆಡಂರವೇ ಹೆಚ್ಚಾಗಿರುವುದನ್ನು ನಾವು ಕಾಣಬಹುದು. ಎಳ್ಳು ಬೆಲ್ಲ ಬೀರುವ ಹಿಂದೆ ಇರುವ ಸಾಮಾಜಿಕ ಕಾರಣ ಈಗಿನ ದಂಪತಿಗಳಿಗೆ ಅರಿವಿಲ್ಲ, ಬದಲಾಗಿ ಅಕ್ಕಪಕ್ಕದರವ ಮನೆಗೆ ಎಳ್ಳುಬೀರಲು ಕಳುಹಿಸುತ್ತಿರುವ ಉದ್ದೇಶವೇ ಬೇರೆಯದೇ ಆಗರಿರುತ್ತದೆ, ಮಗಳು ಧರಿಸಿರುವ ಹೊಸ ಬ್ರಾಂಡೆಡ್‌ ಬಟ್ಟೆ, ಕಿವಿಯೋಲೆ, ಕೈಬಳೆಗಳ ಪ್ರದರ್ಶನವೇ ಈ "ಎಳ್ಳು ಬೆಲ್ಲ ಬೀರುವ ಭೇಟಿ"ಯ ಉದ್ದೇಶವಾಗಿರುತ್ತದೆ.
ನಮ್ಮ ಹಿರಿಯರು ವರ್ಷದಲ್ಲಿ ಕೆಲವೇ ಹಬ್ಬಗಳನ್ನು ಮಾತ್ರವೇ ಯಾಕೆ ಆಚರಿಸುತ್ತಿದ್ದರು ಎಂಬುದನ್ನು ನಾವುಗಳು ವೈಜ್ಞಾನಿಕವಾಗಿ ನೋಡಬೇಕಾಗಿದೆ. ಪ್ರತಿಯೊಂದು ಹಬ್ಬದಲ್ಲಿಯೂ ಸಹ ಒಂದೊಂದು ಸಾಮಾಜಿಕ ಹಾಗು ವೈಜ್ಞಾನಿಕ ಉದ್ದೇಶಗಳಿರುತ್ತಿದ್ದವು. ಅವುಗಳನ್ನು ವಿವರವಾಗಿ ನೋಡುವುದಾದರೆ :-
ಮಕರ ಸಂಕ್ರಾಂತಿ:
ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ, ಒಂದು ವರ್ಷದಲ್ಲಿ (ಸಂವತ್ಸರ) 12 ಮಾಸಗಳು ಅವುಗಳನ್ನು ಎರಡು ಭಾಗ ಮಾಡಿರುವರು. ಉತ್ತರಾಯಣ ಹಾಗೂ ದಕ್ಷಿಣಾಯನ. ಸೂರ್ಯ ಗ್ರಹವು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಸೂರ್ಯ, ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವನ್ನು ಮಕರ ಸಂಕ್ರಾಂತಿ ಎನ್ನುತ್ತಾರೆ.
ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಆನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳು ಕಾಲ ಉತ್ತರಾಯಣ ನಂತರ ಅಂದರೆ ಜೂನ್ 15ರ ನಂತರ ದಕ್ಷಿಣಾಯನ ಪ್ರಾರಂಭ ಆಗುತ್ತದೆ.
ಸಂಕ್ರಾಂತಿ ಹಬ್ಬವನ್ನು ಎಳ್ಳು-ಬೆಲ್ಲದ ಹಬ್ಬ ಎನ್ನುತ್ತಾರೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ರಾಶಿಯಾಗಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ. ಈ ಕಾರಣಕ್ಕಾಗಿ ಸುಗ್ಗಿಯ ಹಬ್ಬ ಎನ್ನುತ್ತಾರೆ. ಸಂಕ್ರಾಂತಿಯ ಹಬ್ಬದ ದಿನ ಎಳ್ಳು ದಾನ ಮಾಡಬೇಕು ಎಂಬ ನಿಯಮವಿದೆ. ಎಳ್ಳು ಶನಿ ಗ್ರಹದ ಪ್ರತಿನಿಧಿ ಹಾಗೂ ಆತನ ಧಾನ್ಯವಾಗಿದೆ. ಎಳ್ಳನ್ನು ನಾವು ದಾನ ಮಾಡಲು ಹೋದಾಗ ಸಾಮಾನ್ಯವಾಗಿ ಅದನ್ನು ತೆಗೆದುಕೊಳ್ಳಲು ಇಷ್ಟ ಪಡುವುದಿಲ್ಲ. ಆದ್ದರಿಂದ ಈ ಕಾರಣದಿಂದ ಎಳ್ಳಿನ ಜತೆಯಲ್ಲಿ ಬೆಲ್ಲ, ಕಡಲೆಬೀಜ, ಕೊಬ್ಬರಿಯನ್ನು ಮಿಶ್ರಣ ಮಾಡಿ ದಾನ ಮಾಡುವ ಪದ್ಧತಿ ಪ್ರಾರಂಭವಾಯಿತು. ಅಲ್ಲದೆ ಆ ಬೆಳೆಗಳು ಆಗ ತಾನೆ ಬೆಳೆದು ಮಾರುಕಟ್ಟೆಗೆ ಬಂದಿರುತ್ತದೆ. ಅವುಗಳನ್ನು ಪೂಜೆ ಮಾಡಿ ದಾನ ಧರ್ಮ ಮಾಡಿದರೆ ಇನ್ನು ಫಲ ಹೆಚ್ಚು ಬರುವುದು ಎಂಬ ನಂಬಿಕೆಯೂ ಇದೆ.
ವೈಜ್ಞಾನಿಕ ರೀತಿಯಲ್ಲಿ ನೋಡಿದಾಗ ಸಂಕ್ರಾಂತಿಯ ಸಮಯದಲ್ಲಿ ಚಳಿ ಹೆಚ್ಚು ಇರುತ್ತದೆ. ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚು ಆಗುತ್ತದೆ ಹಾಗೂ ಚರ್ಮದ ಕಾಂತಿಯೂ ಹೆಚ್ಚುತ್ತದೆ. ಇದೇ ಸಂಕ್ರಾಂತಿಯಲ್ಲಿ ಮನೆಯಲ್ಲಿರುವ ಗೋವುಗಳನ್ನು ಪೂಜಿಸಲಾಗುತ್ತದೆ. ಬೆಳ್ಳಬೆಳಿಗ್ಗೆಯೇ ಊರಿನ ಎಲ್ಲಾ ಗೋವುಗಳು ಕೆರೆಯ ಹತ್ತಿರ ಬಂದು ಸೇರುವುದನ್ನು ನಾವು ಬಾಲ್ಯದಲ್ಲಿ ನೋಡಿದ್ದೆವು, ಅಲ್ಲಿ ಹಸು ಕರು ಕುರಿ ಮೇಕೆಗಳೆಲ್ಲವಕ್ಕೂ ಮೈತೊಳೆಯುತ್ತಿದ್ದೆವು, ಆದಿನ ಅವುಗಳಿಗೆ ವಿಶೇಷವಾದ ಮೇವು ಹಾಕಲಾಗುತ್ತಿತ್ತು, ಆ ದಿನ ಸಂಜೆಯ ವೇಳೆ ಎಲ್ಲಾ ಹಸುಗಳಿಗು ಶೃಂಗಾರ ಮಾಡುವುದೇ ಒಂದು ದೊಡ್ಡ ಸಂಭ್ರಮವಾಗಿತ್ತು. ಕೊಂಬುಗಳಿಗೆ ನೀಲಿ ಬಣ್ಣ,ಬೆಂಡಿನ ಮತಾಪು, ಬಣ್ಣದಗುಲಾಮ್ ಪಟ್ಟೆ, ಟೇಪು, ಕರಿದಾರ, ಹೊಸ ಹಗ್ಗಗಳಿಂದ ಹಸುಗಳು ಶೃಂಗಾರಗೊಳ್ಳುತ್ತಿದ್ದವು. ಊರಿನ ಮುಂಬಾಗಿಲನ ಬಳಿ ಊರಿಂದ ಹೊರಗೆ ಸಂಕ್ರಾಂತಿ ಹಬ್ಬಕ್ಕೆಂದೇ ಸಂಕ್ರಾಂತಿ ಅಮ್ಮ ನ ಗೋಪುರವನ್ನು ಸಿದ್ದಪಡಿಸಲಾಗುತ್ತಿತ್ತು. ಮುಸ್ಸಂಜೆ ಸೂರ್ಯ ಮುಳುಗುವ ಸಮಯಕ್ಕೆ ಊರಿನ ಎಲ್ಲ ದನಕರುಗಳನ್ನು ಶೃಂಗಾರ ಮಾಡಿಕೊಂಡು ಈ ಸಂಕ್ರಾಂತಿ ಅಮ್ಮನ ಸನ್ನಿಧಿಗೆ ಬರಬೇಕಿತ್ತು. ಹಿಂಡು ಹಿಂಡಾಗಿ ಬಣ್ಣಬಣ್ಣದಿಂದ ವೈವಿಧ್ಯಮಯವಾಗಿ ಶೃಂಗರಿಸಿಕೊಂಡು ಬರುವ ದನಕರುಗಳನ್ನು ನೋಡುವುದೇ ಮಹದಾನಂದವಾಗಿರುತ್ತಿತ್ತು. ಅಲ್ಲಿ ಎಲ್ಲರೂ ಬಂದು ಸೇರಿದ ನಂತರ ಆ ಸಂಕ್ರಾಂತಿ ಅಮ್ಮನಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. ಮನೆಯ ಹಸು ಕರುಗಳಿಗೆ ಏನೂ ತೊಂದರೆಯಾಗದಿರಲೆಂದು ಹರಕೆ ಹೊತ್ತವರು ಕೋಳಿ ಬಲಿ ನೀಡುತ್ತಿದ್ದರು, ಮತ್ತೂ ಕೆಲವರು ಅಡ್ಡೆ ಕೋಳಿ (ಒಂದು ಕೋಲಿನ ಎರಡು ತುದಿಗೆ ಎರಡು ಕೋಳಿಗಳನ್ನು ನೇತಾಕಿಕೊಂಡು ಬರುವುದು) ತಂದು ಹರಕೆ ಒಪ್ಪಿಸುತ್ತಿದ್ದರು. ಸಂಕ್ರಾಂರಿ ಅಮ್ಮನ ಸನ್ನಿಧಿಯಲ್ಲೇ ಒಂದು ಮಡಕೆಯಲ್ಲಿ ಕೇವಲ ಅರಿಸಿನ, ಉಪ್ಪು ಮತ್ತು ಜೀರಿಗೆ ಸೇರಿಸಿದ ಅನ್ನ ಬೇಯಿಸಲಾಗುತ್ತಿತ್ತು. ಪೂಜೆಯಾದ ನಂತರ ಇದೇ ಅನ್ನದ ಅಗುಳನ್ನು ಅಲ್ಲಿ ನೆರೆದಿರುವ ಎಲ್ಲಾ ರಾಸುಗಳ ಮೇಲೆ "ಹಿಂಡು ಹೆಚ್ಚಲಿ, ಗೊಡ್ಡು ಫಲವಾಗಲಿ" ಎಂದು ಕೂಗುತ್ತಾ ಎರಚಲಾಗುತ್ತಿತ್ತು.ಇದರ ನಂತರ ಊರಿನ ಹೆಬ್ಬಾಗಿಲಿನಲ್ಲಿ ರಾಶಿ ಹಾಕಿದ ಪುಳ್ಳೆ ಸೌದೆ, ಹುಚ್ಚೆಳ್ಳು ಕಡ್ಡಿ, ಜೋಳದ ಒಣಕಡ್ಡಿಗಳನ್ನು ಅಡ್ಡಲಾಗಿ ಹಾಕಿ ಬೆಂಕಿ ಹಾಕಲಾಗುತ್ತಿತ್ತು, ಇದನ್ನು ಕಿಚ್ಚು ಹಾಯಿಸುವುದು ಎನ್ನುತ್ತಾರೆ. ಪೂಜೆ ಮುಗಿಸಿದ ನಂತರ ಎಲ್ಲರೂ ತಮ್ಮ ರಾಸುಗಳನ್ನು ಈ ಬೆಂಕಿಯಲ್ಲಿ ನೆಗೆಸಿಕೊಂಡು ಹೋಗಬೇಕು ಎಂಬುದು ವಾಡಿಕೆಯಾಗಿತ್ತು.

ಈ ಹಬ್ಬದಲ್ಲಿ ಈ ಮೇಲಿನ ರೀತಿ ಮಾಡುವುದರ ಹಿಂದೆ ಒಂದು ವೈಜ್ಞಾನಿಕ ಕಾರಣವನ್ನು ನಾವು ಕಾಣಬಹದು. ಸುಗ್ಗಿಯ ಕಾಲ ಅಂದರೆ ಡಿಸೆಂಬರ್‌ ಕಳೆದು ಜನವರಿ ಬಂದಾಗ ರೈತನ ಹೊಲದ ಕೆಲಸ ಮುಗಿದಿರುತ್ತದೆ. ತನ್ನ ಬೆಳೆಯನ್ನು ಮೆದೆಗೆ ಸೇರಿಸಿರುತ್ತಾರೆ. ತಿಂಗಳುಗಟ್ಟಳೆ ಹೊಲದಲ್ಲಿ ದುಡಿದ ಹಸುಗಳಿಗೆ ಈಗ ವಿಶ್ರಾಂತಿಯ ಸಮಯವಾಗಿರುತ್ತದೆ. ಈ ಸಮಯದಲ್ಲಿ ಅವುಗಳ ಮೈತೊಳೆದು ಆರೋಗ್ಯಕರಗಳಿಸಬೇಕಿರುತ್ತದೆ, ಗೋವುಗಳ ಮೈಯಲ್ಲಿನ ಕ್ರಿಮಿಕೀಟಗಳು ಅವುಗಳ ರಕ್ತ ಹೀರುತ್ತಿರುತ್ತವೆ ಈ ಕ್ರಿಮಿಕೀಟಗಳನ್ನು ಸಾಯಿಸಲೆಂದೇ ಹಸುಗಳನ್ನು ಬೆಂಕಿಯಲ್ಲಿ ಹಾರಿಸುವ ಪದ್ದತಿಯಿರುವುದು. ಬೆಂಕಿಯ ಜ್ವಾಲೆಗೆ ಮೈಯಲ್ಲಿನ ಎಲ್ಲಾ ಕ್ರಿಮಿಗಳು, ಹೇನುಗಳು ಸಾಯುತ್ತಿದ್ದವು ಇದು ಹಸುಗಳಿಗೆ ಆರೋಗ್ಯಕರವಾಗಿರುತ್ತಿತ್ತು.
ಆದರೆ ಪ್ರಸ್ತುತ ಹೊಲದಲ್ಲಿ ಕಷ್ಟಪಟ್ಟು ದುಡಿಯುವ ಹಸುಗಳನ್ನು ಸಾಕಿರುವ ರೈತರನ್ನು ನೋಡುವುದೇ ಅಪರೂಪವಾಗಿದೆ. ಹಿಂಡು ಹಿಂಡಾಗಿ ಸಂಕ್ರಾಂತಿ ಅಮ್ಮನ ಮುಂದೆ ನಿಲ್ಲುತ್ತಿದ್ದ ಹಸುಗಳ ಜಾಗದಲ್ಲಿ ಈಗ ಸೀಮೆ ಹಸುಗಳು, ಹೈಬ್ರಿಡ್‌ ತಳಿಯ ಹಸುಗಳು ಬಂದಿವೆ. ಪೂಜ್ಯಭಾವನೆಯ ಹಸುಗಳು ಈಗ ಲಾಭದಾಯಕ ಪ್ರಾಣಿಗಳಾಗಿವೆ. ಈ ಹಬ್ಬವೂ ಕಾಟಾಚಾರದ ಆಚರಣೆಯಾಗಿದೆ, ಅನಾಚಾರದ ಉದ್ದೇಶಕ್ಕೆ ಲೆಕ್ಕವಿಲ್ಲದಷ್ಟು ಹಣ ಖರ್ಚು ಮಾಡುವವರು ಸಂಕ್ರಾಂತಿ ಅಮ್ಮನ ಪೂಜೆ ಖರ್ಚಿಗೆ ಹತ್ತಿಪ್ಪತ್ತು ರೂಪಾಯಿ ಕೊಡಲು ಹಿಂದೆಮುಂದೆ ನೊಡುವಂತಾಗಿದೆ.
ಯುಗಾದಿ
ಸುಗ್ಗಿಯ ಕಾಲ ಕಳೆದು, ಬೇಸಿಗೆಯ ಆರಂಭಕ್ಕೆ ಯುಗಾದಿ ಬರುತ್ತದೆ. ರೈತರು ಎಲ್ಲ ಕೆಲಸಗಳನ್ನು ಮುಗಿಸಿ ವಿಶ್ರಾಂತಿ ಪಡೆಯುವ ಕಾಲ, ಪರೀಕ್ಷೆಗಳು ಮುಗಿದು ಮಕ್ಕಳು ಕುಣಿದು ಕುಪ್ಪಳಿಸುವ ಕಾಲ. ಎಲ್ಲರೂ ಒಂದಡೆ ಸೇರಿ ಸಾಮರಸ್ಯದಿಂದ ಆಚರಿಸುವ ಹಬ್ಬವೇ ಯುಗಾದಿ.
ನಮಗೆ ನೆನಪಿದ್ದಂತೆ ಯುಗಾದಿಯ ಹಬ್ಬವೇ ನಮ್ಮ ಹಳ್ಳಿಗಳಲ್ಲಿ ಪ್ರಮುಖ ಹಬ್ಬವಾಗಿತ್ತು. ವರ್ಷಕ್ಕೆ ಒಮ್ಮೆ ಹೊಸ ಬಟ್ಟೆ ತೊಡುವ ಅವಕಾಶ ಈ ಹಬ್ಬದಲ್ಲೇ. ಆ ಬಟ್ಟೆಯ ಬಣ್ಣ ಮೂರೇ ದಿನಕ್ಕೆ ಹೋಗುವಂತಿದ್ದರೂ ಸಹ ಅದೇ ನಮಗೆ ಸ್ವರ್ಗದ ಖುಷಿ ಕೊಡುವ ಬಟ್ಟೆ. ಊರಿಗೆ ಸೈಕಲ್ಲಿನಲ್ಲಿ ಮಾರಾಟಕ್ಕೆ ತಂದ ಸಾಬಿಯ ಬಳಿ ಅರ್ಧಕ್ಕರ್ಧ ಚೌಕಾಶಿ ಮಾಡಿ ಕೊಂಡುಕೊಂಡ ಆ ಬಟ್ಟೆ ತೊಟ್ಟಾಗಿನ ಸಂಭ್ರಮ ಇಂದು ನಮ್ಮ ವ್ಯಾಪಾರಿ ಮಾಲ್‌ಗಳಲ್ಲಿ ವಿವಿಧ ಬ್ರಾಂಡ್‌ಗಳ ಹೆಸರಲ್ಲಿ ಅವರು ಹೇಳಿದಷ್ಟು ಹಣವನ್ನು ಗಪ್‌ಚುಪ್‌ ಎನ್ನದೇ ಕೊಟ್ಟು ತಂದ ಬಟ್ಟೆಗಳಲ್ಲಿ ಸಿಗದು. ಆ ದಿನ ಬೆಳ್ಳಬೆಳಿಗ್ಗೆಯೇ ಎದ್ದು ಅಪ್ಪನ ಜೊತೆ ತೋಟಕ್ಕೆ ಹೋಗಿ ಮಾವಿನ ಸೊಪ್ಪು, ಬೇವಿನ ಸೊಪ್ಪು, ಉತ್ತರಾಣೆ ಗಿಡದ ಚಿಗುರುಗಳನ್ನು ಕಿತ್ತು ತರಬೇಕಿತ್ತು, ಅದನ್ನು ಹಂಚಿಕಡ್ಡಿಯ ಸಹಾಯದಿಂದ ತೋರಣಗಳಾಗಿ ಕಟ್ಟುತ್ತಿದ್ದೆವು ನಂತರ ಮನೆಯ ಎಲ್ಲಾ ಬಾಗಿಲುಗಳಿಗೂ ಅದನ್ನು ಕಟ್ಟಬೇಕಿತ್ತು. ಈಗ ಈ ನೈಜ ತೋರಣಗಳ ಜಾಗಕ್ಕೆ ಪ್ಲಾಸ್ಟಿಕ್ ತೋರಣಗಳು ಬಂದಿವೆ.
ನಂತರ ಮನೆಯ ಗಂಡುಮಕ್ಕಳು ಮೈಗೆಲ್ಲಾ ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಬೇಕಿತ್ತು. ಸ್ನಾನವಾದ ನಂತರ ಹೊಸಬಟ್ಟೆತೊಟ್ಟು ಊರಿನ ದೇವಸ್ಥಾನಕ್ಕೆ ಹೋಗುವುದು. ಈ ದೇವಸ್ಥಾನದ ಬಳಿಯಲ್ಲೇ ಇಡೀ ಊರಿನ ಎಲ್ಲರೂ ಸೇರುತ್ತಿದ್ದರೂ ಪ್ರತಿಯೊಬ್ಬರೂ ತಮ್ಮ ತಮ್ಮ ಹೊಸ ಬಟ್ಟೆಗಳನ್ನು ತೋರಿಸಿ ಸಂಭ್ರಮಪಡುತ್ತಿದ್ದರು.ದೇವಸ್ಥಾನದಲ್ಲಿ ಕೊಡುತ್ತಿದ್ದ ಬೇವುಬೆಲ್ಲವನ್ನೇ ಮನೆಗೆ ತೆಗೆದುಕೊಂಡು ಹೋಗಿ ಎಲ್ಲರೂ ಮೊದಲಿಗೆ ಬೇವು ಬೆಲ್ಲ ತಿಂದು ನಂತರ ಊಟ ಮಾಡಬೇಕಿತ್ತು. ಯುಗಾದಿ ಎಂದರೆ ಒಬ್ಬಟ್ಟು ಊಟ ಎಂಬುದು ಪ್ರತೀತಿ. ಅದರಂತೆ ಎಲ್ಲರ ಮನೆಯಲ್ಲಿಯೂ ಒಬ್ಬಟ್ಟು ತಯರಾಗುತ್ತಿದ್ದವು. ಮದ್ಯ್ಹಾನದ ಊಟ ಮುಗಿಸಿ ನಂತರ ಗಂಡಸರೆಲ್ಲಾ ಒಂದೆಡೆ ಸೇರಿ ಮಾತುಕಥೆ, ಹಾಡು, ನಾಟಕದ ಸಂಭಾಷಣೆಗಳನ್ನು ಹೇಳುತ್ತಿದ್ದರು, ಮಕ್ಕಳಿಗೆಂದೆ ಮರಗಳಿಗೆ ಜೋಕಾಲಿ ಕಟ್ಟಲಾಗುತ್ತಿತ್ತು ಮಕ್ಕಳು ಆ ಜೋಕಾಲಿಗಳಲ್ಲಿ ಆಡುತ್ತಿದ್ದರು, ಹೆಂಗಸರುಗಳು ಚೌಕಾಭಾರ, ಹಳಿಗುಳಿಮಣೆ, ಅಣ್ಣೇಕಲ್ಲು ಆಟಗಳನ್ನು ಆಡುತ್ತಿದ್ದರು.
ಆದರೆ ಈ ಕಾಲದ ಯುಗಾದಿ ಹೇಗಿದೆ ಎಂಬುದನ್ನು ಒಮ್ಮೆ ನೆನಪು ಮಾಡಿಕೊಳ್ಳಿ, ಯುಗಾದಿ ಹತ್ತಿರವಾಗುತ್ತಿದ್ದಂತೆಯೇ ಮೂರು ನಾಲ್ಕು ದಿನ ಮೊದಲೇ ಯುಗಾದಿಯ ಹೆಸರಿನಲ್ಲಿ ಜೂಜಾಟ ಪ್ರಾರಂಭವಾಗುತ್ತದೆ, ಹಬ್ಬದ ದಿನ ಮನೆ ಸೇರುವುದೇ ಅನುಮಾನ, ಬೆಳಿಗ್ಗೆಯಿಂದಲೇ ಜೂಜಾಟದಲ್ಲಿ ನಿರರಾಗುತ್ತಾರೆ. ಎಣ್ಣೆ ಸ್ನಾನ, ತೋರಣ, ಒಬ್ಬಟು ಇದ್ಯಾವುದರ ನೆನಪು ಇರುವುದಿಲ್ಲ. ಯುಗಾದಿಯ ಎರಡನೇ ದಿನ "ವಸ್ತೊಡಕು" ದಿನ ಎನ್ನುತ್ತಾರೆ, ಈ ದಿನ ಎಲ್ಲರ ಮನೆಯಲ್ಲಿಯೂ ಮಾಂಸದೂಟವಿರುತ್ತದೆ. ಈದಿನ ಬಹುತೇಕ ಮಂದಿ ಸುರಪಾನ ಲೋಕದ ಒಡೆಯರಾಗಿಬಿಡುತ್ತಾರೆ ಜೂಜಾಟದಲ್ಲಿ ಗೆದ್ದರೆ ಗೆದ್ದ ಖುಷಿಗೆಂದು ಅಥವಾ ಸೋತರೆ ಸೋತ ದುಖಃಕ್ಕೆಂದು ಕಂಠಮಟ್ಟ ಕುಡಿದು ಹಬ್ಬದ ದಿನವೇ ಹೆಂಡತಿ ಮಕ್ಕಳನ್ನು ಬೀದಿಯಲ್ಲಿ ಬಡಿಯುವ ಸನ್ನಿವೇಶ ಈಗ ಸಾಮನ್ಯವಾಗಿದೆ.
ಯುಗಾದಿ ಹಬ್ಬದ ದಿನ ನಮ್ಮ ಹಿರಿಯರು ಜೂಜಾಡುತ್ತಿರಲಿಲ್ಲ , ಬದಲಾಗಿ ತನ್ನ ನೆರೆಹೊರೆಯವರನ್ನೆಲ್ಲಾ ಸೇರಿಸಿ ಆರೋಗ್ಯಕರ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದರು, ಎಲ್ಲರೂ ಒಟ್ಟಾಗಿ ಜಾನಪದ ಕ್ರೀಡೆಗಳನ್ನು ಆಡುತ್ತಿದ್ದರು ಇದರಿಂದ ಮನುಷ್ಯ -ಮನುಷ್ಯನ ನಡುವೆ ಭಾಂಧವ್ಯ ಗಟ್ಟಿಯಾಗುತ್ತಿತ್ತೇ ವಿನಹ ಜೂಜಾಡಿ ಹಣವನ್ನೆಲ್ಲಾ ಕಳೆದುಕೊಂಡು ಅದೇ ಹಣಕ್ಕಾಗಿ ಕಿತ್ತಾಡಿ ದ್ವೇಷ ಬೆಳೆಸುತ್ತಿರಲಿಲ್ಲ.
ದೀಪಾವಳಿ
ಸಂಭ್ರಮ ಮತ್ತು ನಿರೀಕ್ಷೆಗಳಿಂದ ಕಾಯುವ ಹಬ್ಬ. ದೀಪಾವಳಿ ಅಂದರೆ ಅದು ಕೇವಲ ಹಬ್ಬವಲ್ಲ; ಅದು ಸಮಗ್ರ ಕುಟುಂಬಕ್ಕೆ ಆನಂದ ಮತ್ತು ಚೈತನ್ಯವನ್ನು ನೀಡುವ ಸಂದರ್ಭ. ಸಮಗ್ರ ಕುಟುಂಬವನ್ನು ತನ್ನ ಪರಿಸರದ ಜತೆ ಬೆಸೆದು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವಂತೆ ಮಾಡುವ ಸಂದರ್ಭವೂ ಹೌದು. 
ದೀಪಾವಳಿಯನ್ನು ದೀಪದ ಬೆಳಕಿನಲ್ಲಿ ಆಚರಿಸಿ, ಬಂಧುಬಳಗದವರನ್ನು ನೆನೆದು, ಆಹ್ವಾನಿಸಿ ಅವರಿಗೆ ಉಡುಗೊರೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ಭಾಂದವ್ಯಗಳನ್ನು ಗಟ್ಟಿ ಮಾಡಿಕೊಳ್ಳುವುದು ಈ ಹಬ್ಬದ ಉದ್ದೇಶ.
ಮನೆಯ ಮುಂದಿನ ಗೋಡೆಯ ಗೂಡಿನಲ್ಲಿ ಹಸುವಿನ ಸಗಣಿಯ ಹಸಿ ಬೆರಣಿಯ ಮೇಲೆ ಮಣ್ಣಿನ ದೀಪವಿಟ್ಟು ಅದಕ್ಕೆ ಹುಚ್ಚೆಳ್ಳು ಗಿಡದ ಹೂವುಗಳನ್ನು ಸಿಕ್ಕಿಸಿ ದೀಪ ಹಚ್ಚುವುದು ಈ ಹಬ್ಬದ ಆಚರಣೆ. ಈ ದೀಪದಿಂದ ಹೊರಸೂಸುವ ಸುವಾಸನೆಯ ಮಾಧುರ್ಯಕ್ಕೆ ಸರಿಸಾಟಿಯೇ ಇರಲಿಲ್ಲ. ಆದರೆ ಈದಿನಗಳಲ್ಲಿ ಮಣ್ಣಿನ ದೀಪದ ಜಾಗಕ್ಕೆ ವಿದ್ಯುತ್‌ ಚಾಲಿತ ದೀಪಗಳು ಬಂದಿವೆ, ಇದರಲ್ಲಿ ಬೆಂಕಿಯ ಜ್ವಾಲೆಯೂ ಇಲ್ಲ, ಸುವಾಸನೆಯೂ ಇಲ್ಲ ಅದೇ ರೀತಿ ಜನರಲ್ಲಿ ಬಂಧು ಬಳಗದ ಸಾಮರಸ್ಯ ಸಂಬಂಧಗಳೂ ಇಲ್ಲದಿರುವುದು ವಿಪರ್ಯಾಸ. ದೀಪದ ಬೆಳಕಿನಲ್ಲಿ ಶಾಂತಿ ಸಾಮರಸ್ಯದಿಂದ ಆಚರಿಸಬೇಕಾದ ದೀಪಾವಳಿ ಇಂದು ಪಟಾಕಿ ಸಿಡಿಮದ್ದುಗಳ ಆರ್ಭಟಕ್ಕೆ ಸಿಲುಕಿ ಸ್ವತಃ ಆ ದೇವರುಗಲೇ ಸಾಕಪ್ಪಾ ಸಾಕು ಎನ್ನುವ ಮಟ್ಟಿಗೆ ಬೆಳೆದಿದೆ.
ನಮ್ಮ ಹಿರಿಯರು ದೀಪಾವಳಿಯಂದು ಮನೆ ಮುಂದಿನ ಗೋಡೆಯ ಗೂಡಿನಲ್ಲಿ ಒಂದುವಾರ ವಿವಿಧ ನೈಸರ್ಗಿಕ ಎಣ್ಣೆ ದೀಪಹೊತ್ತಿಸಿ ಅದರ ಸುವಾಸನೆಯನ್ನು ಸಂಭ್ರಮಿಸುತ್ತಾ 'ಎಣ್ಣೇಲಿ ಹುಟ್ಟೋಳೆ/ಎಣ್ಣೇಲಿ ಬೆಳೆಯೋಳೆ/ಎಣ್ಣೇಲಿ ಬದುಕಾ ಸವೆಸೋಳೆ/ ಎಣ್ಣೇಲಿ ಬದುಕಾ ಸವೆಸೋಳೆ ನಮ್ಮವ್ವ/ಸತ್ಯದಿಂದುರಿಯೇ ನಮಗಾಗಿ " ಎಂದು ಹಾಡುತ್ತಾ ದೀಪಗಳ ಬೆಳಕಲ್ಲಿ ದೀಪಾವಳಿ ಆಚರಿಸುತ್ತಿದ್ದರೇ ಹೊರತು, ಆಡಂಬರಕ್ಕಾಗಿ, ತೋರಿಕೆಗಾಗಿ ಸುವಾಸನೆಯಿಲ್ಲದ ವಿದ್ಯುತ್ ದೀಪಗಳನ್ನು ಹಚ್ಚಿ, ಬಂಧು ಬಳಗದಿಂದ ದೂರವೇ ಉಳಿದು, ದುರ್ವಾಸನೆ ಹೊಗೆಯ ಪಟಾಕಿ ಹೊಡೆಯುತ್ತಿರುತ್ತಿರಲಿಲ್ಲ.
ಇನ್ನೂ ಈ ದೀಪಾವಳಿಯ ದಿನ ಪಟಾಕಿ ಹೊಡೆಯುವವರಿಗೆ ಪಟಾಕಿಯ ಬೆಳಕಷ್ಟೇ ಕಾಣುತ್ತದೆ. ಆದರೆ ಈ ಬೆಳಕಿನ ಹಿಂದೆ ಬರುವ ವಿಷಯುಕ್ತ ಹೊಗೆಯನ್ನು ನಾವು ಗಮನಿಸೋದಿಲ್ಲ. ಹಬ್ಬದ ಮಾರನೆ ದಿನ ಕಣ್ಣು ಕಳೆದುಕೊಂಡು ಆಸ್ಪತ್ರೆ ಹಾಸಿಗೆ ಮೇಲೆ ರೋದಿಸುವ ಅದೆಷ್ಟೋ ಮಕ್ಕಳನ್ನು ಪ್ರತೀ ವರ್ಷ ನೋಡುತ್ತೇವೆ. ಸಂಭ್ರಮದಿಂದ ಹಬ್ಬ ಮುಗಿಸಿ ಮಲಗೋ ನಮಗೆ ತಿಳಿಯದ ಒಂದು ಸತ್ಯವಿದೆ, ಅದೇನೆಂದರೆ ಪಟಾಕಿ ಹೊಗೆಯಿಂದಾಗಿ ಹಬ್ಬ ಕಳೆದ ವಾರದೊಳಗೆ ಸಾವಿರಾರು ಪಕ್ಷಿಗಳು ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪುತ್ತವೆ ಎಂಬುದಾಗಿ ಕೆಲವು ಸಂಶೋಧನೆಗಳು ಹೇಳಿವೆ.
ಈ ಮೆಟ್ರೋ ನಗರಗಳ ಜೀವನದಲ್ಲಿ ನಮ್ಮ ಹಬ್ಬಗಳ ಆಚರಣೆಯ ಶೈಲಿಯೇ ಬದಲಾಗಿ ಹೋಗಿದೆ. ನಮ್ಮ ಹಿರಿಯರು ಆ ಹಬ್ಬಗಳಿಗೆ ನೀಡುತ್ತಿದ್ದ ಮಹತ್ವ ಹಾಗು ಆ ಹಬ್ಬಗಳ ಆಚರಣೆಯ ಹಿಂದೆ ಇದ್ದ ವೈಜ್ಞಾನಿಕ ಕಾರಣಗಳನ್ನು ಮರೆತಿದ್ದೇವೆ.
ಬೆಂಗಳೂರಿನಂತಹ ಮಹಾನಗರಗಳಲ್ಲಿ ಪ್ರತಿ ಹಬ್ಬದ ಸನ್ನಿವೇಶದಲ್ಲೂ ನಾವು ನೋಡುವ ಸನ್ನಿವೇಶಗಳು ಈ ಹಬ್ಬಗಳ ಬಗ್ಗೆ ಬೇಸರ & ವಾಕರಿಕೆ ಮೂಡಿಸುತ್ತವೆ. ಗಣೇಶ ಹಬ್ಬ ಮುಗಿದ ಮೇಲೆ ಯಾವ ಕೆರೆ ಕಟ್ಟೆಗಳಲ್ಲಿ ನೋಡಿದರೂ ವಿಘ್ನ ಭಗ್ನವಾಗಿ ಅನಾಥವಾಗಿ ಬಿದ್ದಿರುವ ಗಣಪ ವಿಗ್ರಹಗಳಿಗೆ ಬರವಿಲ್ಲ, ಈ ವಿಗ್ರಹಗಳಿನ ಬಣ್ಣದ ರಾಸಾಯನಿಕಗಳಿಗೆ ಬಲಿಯಾಗುವ ಅದೆಷ್ಟೋ ಜಲಚರಗಳಿಗೆ ಲೆಕ್ಕವಿಲ್ಲ. ದಸರಾ ಮುಗಿಯುತ್ತಿದ್ದಂತೆ ಬೀದಿ ಬೀದಿಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವಿಲೇವಾರಿಯ ಕಷ್ಟ ಪಾಪ ಆ ಅಮಾಯಕ ಕಸ ಸಂಗ್ರಹಿಸುವವರಿಗೆ ಮಾತ್ರವೇ ಗೊತ್ತು, ದುರ್ವಾಸನೆ ಅಂತ ಮೂಗು ಮುಚ್ಚಿಕೊಂಡು ತಿರುಗಾಡುತ್ತೇವೆಯೇ ಹೊರತು ಇದಕ್ಕೆ ಕಾರಣ ನಾವೇ ಅಂತ ಎಂದಿಗೂ ಯೋಚನೆ ಮಾಡಲ್ಲ.
ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು, ನಮ್ಮ ವಿದ್ಯಾವಂತ ಸ್ನೇಹಿತರಿಗೆ ಈ ರೀತಿಯ ಪರಿಸರಕ್ಕೆ ಹಾನಿಯಾಗುವ ಹಬ್ಬಗಳ ಆಚರಣೆ ಬೇಡ, ನಮ್ಮ ಹಿರಿಯರು ಆಚರಿಸುತ್ತಿದ್ದ ಹಾಗೆ ಸಂಪ್ರದಾಯ ಬದ್ದವಾಗಿ ಆಚರಿಸೋಣ ಎಂದರೆ, ನಮ್ಮನ್ನು ಅವರು ಬೇರೆಯದೇ ರೀತಿಯಲ್ಲಿ ನೋಡಿ ವ್ಯಂಗ್ಯ ಮಾಡುತ್ತಾರೆ. "ನಾವೇನೂ ಪ್ರತಿದಿನ ಪಟಾಕಿ ಹೊಡಿತೀವಾ, ವರ್ಷದಲ್ಲಿ ಒಂದು ದಿನ ತಾನೇ ಅಷ್ಟಕ್ಕೆ ಏನಾಗಲ್ಲ ಬಿಡಿ" ಅನ್ನುತ್ತಾರೆ. "ಹಾಗಾದರೆ ವರ್ಷಪೂರ್ತಿ ನೀವು ವಿಷ ಕುಡಿಯಲ್ಲ, ಇವತ್ತು ಒಂದು ದಿನ ವಿಷ ಕುಡಿದು ಬಿಡಿ ಏನಾಗಲ್ಲ" ಅಂತ ನಾವು ಮರುತ್ತರ ಕೊಟ್ರೆ ಅವರು ನಿರುತ್ತರರಾಗುತ್ತಾರೆ. ಈ ನಾಗರೀಕ ಸಮಾಜಕ್ಕೆ ಯಾವ ಪರಿಯಲ್ಲಿ ಅರ್ಥೈಸಬೇಕೋ ತಿಳಿಯದು. ನಮ್ಮ ಎಲ್ಲಾ ಆಚರಣೆಗಳ ಹಿಂದೆ ಪರಿಸರ ಕಾಳಜಿ ಇರಬೇಕೇಂಬ ಸಣ್ಣ ನೈತಿಕತೆ ಯಾಕೋ ನಮ್ಮೊಳಗೆ ಮೂಡುತ್ತಿಲ್ಲ.
ಜೊತೆಗೆ ನಾವು ಮಾಡುವ ತಪ್ಪು ಆಚರಣೆಗಳನ್ನು ಸಮರ್ಥಿಸಿಕೊಳ್ಳಲು ಸಹ ಮುಂದಾಗುತ್ತೇವೆ, ಇತ್ತೀಚಗೆ ವಾಟ್ಸಪ್‌ನಲ್ಲಿ ಒಬ್ಬರು ಒಂದು ಸಂದೇಶವನ್ನು ಹಂಚಿಕೊಂಡಿದ್ದರು. " ಪ್ರತಿ ಹಬ್ಬಗಳು ನಮಗೆ ನಮ್ಮ ಹಿರಿಯರು ಕೊಟ್ಟಿರುವ ಆಚರಣೆಗಳು, ಆದರೆ ಅವುಗಳನ್ನು ಆಚರಿಸಲು ವ್ಯವಸ್ಥಿತವಾದ ಅಡಚಣೆ ಮಾಡಲಾಗುತ್ತಿದೆ , ನಮ್ಮ ಧರ್ಮಕ್ಕೆ ಅನ್ಯಾಯವೆಸಗಲಾಗುತ್ತಿದೆ, ಕೆಲವು ಮುಸ್ಲಿಂ /ಕ್ರಿಶ್ಚಿಯನ್ ಸಂಘಟನೆಗಳು ಹಿಂದುಗಳ ಆಚರಣೆಗಳನ್ನು ನಿಯಂತ್ರಿಸುವ ಸಲುವಾಗಿ ಬಣ್ಣದ ಗಣೇಶ ಇಡಬೇಡಿ, ಯುಗಾದಿಲಿ ಜೂಜಾಡಬೇಡಿ, ಪಟಾಕಿ ಹೊಡಿಬೇಡಿ ಅಂತ ಪೊಳ್ಳು ಭಾಷಣ ಮಾಡುತ್ತಿದ್ದಾರೆ ಆದರೆ ಮುಸ್ಲೀಮರು ಮೂಕಪ್ರಾಣಿಗಳನ್ನು ಸಾಯಿಸೋದು, ಕ್ರಿಶ್ಚಿಯನ್ನರು ಮಾಂಸ ಮದ್ಯ ಪಾರ್ಟಿಗಳನ್ನು ಮಾಡೋದರ ಬಗ್ಗೆ ಯಾರು ಮಾತಾಡಲ್" ಎನ್ನೋದು ಈ ಸಂದೇಶದ ಸಾರಾಂಶವಾಗಿತ್ತು .
ಆದರೆ ಈ ಸಂದೇಶ ಬರೆದ ವ್ಯಕ್ತಿಗೆ ಅರ್ಥವಾಗದ ಕೆಲವು ವಿಷಯಗಳಿವೆ , ಅವನಿಗೆ ಬಹುಶಃ ನಮ್ಮ ಹಿರಿಯರ ವೈಜ್ಞಾನಿಕ ಚಿಂತನೆ ತಿಳಿದಿಲ್ಲ. ನಮ್ಮ ಹಿರಿಯರು ನಮಗೆ ಹಬ್ಬಗಳ ಅಚರಣೆಯನ್ನು ಕಲಿಸಿಕೊಟ್ಟಿರೋದು ಸತ್ಯ , ಆದರೆ ನಾವು ಅದನ್ನು ಯಾವ ರೀತಿ ಆಚರಿಸುತ್ತಿದ್ದೇವೆ ಎಂಬುದನ್ನು ತಿಳಿದುಕೊಂಡಿಲ್ಲ ಎನ್ನೋದು ಸಹ ಸತ್ಯ.
ತಮ್ಮ ಮನೋಭಾವಗಳನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಧರ್ಮಗಳ ಹೆಸರನ್ನು ತಂದುಕೊಳ್ಳುವ ಮನಸ್ಥಿತಿ ನಮ್ಮಲಿ ಬೆಳೆದುಬರುತ್ತಿರುವುದು ನಿಜವಾಗಿಯೂ ದುರಂತವೇ ಸರಿ, ಇಲ್ಲಿ ಹಿಂದು ಮುಸ್ಲಿಂ ಕ್ರಿಶ್ಚಿಯನ್ ವಿಷಯ ಬರಲ್ಲ, ಅವರವರ ಆಚರಣೆಗಳು ಹಾಗೆಯೇ ಇವೇ , ಹಿಂದುಗಳು ಮಾತ್ರವೇ ಹಬ್ಬದ ಆಚರಣೆಗಳಲ್ಲಿ ದಾರಿ ತಪ್ಪಿಲ್ಲ, ಮುಸ್ಲೀಮರು, ಕ್ರಿಶ್ಚಿಯನ್ನರು ಸಹ ತಮ್ಮ ಸಂಪ್ರದಾಯಿಕ ಆಚರಣೆಯನ್ನು ಮರೆಯುತ್ತಿರುವುದನ್ನು ಕಾಣಬಹುದು. ಆದರೆ ಇವತ್ತಿಗೂ ಗ್ರಾಮೀಣ ಪದ್ರೇಶದಲ್ಲಿ ಎಲ್ಲ ಧರ್ಮೀಯವರು ಎಲ್ಲಾ ಹಬ್ಬವನ್ನು ಒಟ್ಟಾಗಿಯೇ ಆಚರಿಸುತ್ತಾರೆ, ಆಸೆಯ ಹಿಂದೆ ಓಡುವ ನಗರದ ವಿಧ್ಯಾವಂತರ ತಲೆಯಲ್ಲಿ ಮಾತ್ರವೇ ಈ ರೀತಿಯ ಪುರಾವೆಯಿಲ್ಲದ ವಿವರಣೆಗಳು ಮತ್ತು ಸಮರ್ಥನೆಗಳು ಬರುತ್ತವೆ.
ಪ್ರಸ್ತುತ ಸಂದರ್ಭದಲ್ಲಿ ನಾವೆಲ್ಲಾ ಯಾಕೆ ಎಚ್ಚರಗೊಳ್ಳಬೇಕು ಎಂಬುದು ಬಹಳ ಮುಖ್ಯ. ನಮ್ಮ ಪರಿಸರ, ನಮ್ಮ ಕುಟುಂಬ, ಮಾನವೀಯ ಸಂಬಂಧಗಳು ಉಳಿಯಬೇಕಾದರೆ ನಮ್ಮ ಆಚರಣೆಗಳು ಮತ್ತು ನಮ್ಮ ಮನೋಭಾವಗಳು ಬದಲಾಗಬೇಕಿದೆ.
ನಾವೆಲ್ಲಾ ಹೇಗೋ ಬದುಕಿದ್ದಾಯಿತು, ಇನ್ನು ಮುಂದೆ ಈ ಸಮಾಜದ ಕಣ್ಣಾಗಬೇಕಿರುವ ನಮ್ಮ ಮಕ್ಕಳಿಗಾದರೂ ಈ ಬಗ್ಗೆ ಅರಿವು ಮೂಡಿಸೋಣ. ನಮ್ಮ ನಡುವೆಯೇ ಬಹಳಷ್ಟು ಮಕ್ಕಳು, ಅಸಹಾಯಕರು ಒಂದೊಂದು ತುತ್ತಿಗೂ ಕಾಯುತ್ತಾ ಇರುವುದನ್ನು ಕಾಣುತ್ತೇವೆ. ನಮ್ಮ ಮಕ್ಕಳಿಗೆ ಮೂರು ನಾಲ್ಕು ಸಾವಿರ ಖರ್ಚುಮಾಡಿ ಪಟಾಕಿ ಕೊಡಿಸುತ್ತೇವೆ, ಅವರೂ ಸಹ ಹಬ್ಬದ ದಿನ ಸಂತಸಪಡುತ್ತಾರೆ. ಆದರೆ ಇದರಿಂದ ಅವರಿಗಾಗುವ ಕಲಿಕೆ ಮಾತ್ರ ಸೂನ್ಯ. ಅದೇ ಹಣವನ್ನು ನಮ್ಮ ಮಕ್ಕಳ ಮೂಲಕವೇ ಯಾವುದಾದರು ಅನಾಥಾಶ್ರಮಕ್ಕೆ, ವೃದ್ದರಿಗೆ, ಅಸಹಾಯಕರಿಗೆ ಕೊಡಿಸಿ. ನಿಮ್ಮ ಮಕ್ಕಳ ಮನಸ್ಸಲ್ಲಿ ಆಗ ಸಾವಿರ ಪ್ರಶ್ನೆ ಮೂಡುತ್ತವೆ, ಆ ಪ್ರಶ್ನೆಗಳಿಗೆ ಉತ್ತರಿಸಿ ಅದರಿಂದಾಗುವ ಖುಷಿಯನ್ನು ತಿಳಿಸೋಣ, ಅದು ನಮ್ಮ ಮಕ್ಕಳಿಗೆ ಶಾಶ್ವತ ಕಲಿಕೆಯಾಗುತ್ತದೆ ಹಾಗು ಅವರೊಳಗೆ ಮಾನವೀಯ ಮನೋಭಾವ ಗಟ್ಟಿಗೊಳ್ಳುತ್ತದೆ.
ಹಬ್ಬಗಳಲ್ಲಿ ಮಾನವೀಯತೆ ದೀಪವನ್ನು ನಮ್ಮೊಳಗೆ ಹಚ್ಚಿಕೊಳ್ಳೋಣ ಮತ್ತೊಬ್ಬರಿಗೂ ಬೆಳಕಾಗೋಣ...
-ಕನ್ನಡವೆಂಕಿ ರಾಮನಗರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು