ಅಚ್ಚೇ ದಿನಾ ಅಂದ್ರೆ ಏನು ಶಿವಾ....?


ನಾವು ಇಸ್ಕೂಲ್‌ ಲಿ ಓದೋವಾಗ ನಮ್ಮ ಹಿಂದಿ ಮೇಷ್ಟ್ರು "ಅಚ್ಚೇ ದಿನ್‌" ಅಂದ್ರೆ ಒಳ್ಳೆಯ ದಿನಗಳು ಅಂತ ಹೇಳಿಕೊಟ್ಟಿದ್ರು.ನಾವು ಅದನ್ನೇ ಕಲ್ತ್ಕೊಂಡು ಒಳ್ಳೆ ದಿನಗಳು ಬರ್ತವೆ ಅಂತಕಾಯ್ತಿದ್ವಿ ಆದ್ರೆ ಈಗ ನೋಡುದ್ರೆ ಅಚ್ಚೇ ದಿನ ಅನ್ನೋದಕ್ಕೆ ಅರ್ಥಾನೆ ಬದಲಾಗಿ ಹೋಗಿದೆ ! ಅಚ್ಚೇದಿನ ಅಂದ್ರೆ "ದುಬಾರಿ ದಿನ" ಅಂತ ಅರ್ಥ ಮಾಡ್ಕೋಬೇಕಿದೆ.
ಹೆಂಗೆ ಅಂತೀರಾ ಇಲ್ಲೋಡಿ, ಎರಡು ವರ್ಷದ ಹಿಂದೆ ಒಬ್ಬ ನಾ ಅಚ್ಚೇ ದಿನಗಳನ್ನು ತರ್ತೀನಿ ಅಂತ ಬೊಂಬಡ ಹೊಡ್ಕೊಂಡು ಬಂದ. ನಾವುಗಳು ಸಹ ಇನ್ಮೇಕೆ ಒಳ್ಳೇ ದಿನಗಳು ಬರ್ಬೋದು ಶಿವಾ ಅಂತ ಕಣ್ಣು ಕಿವಿ ಬುಟ್ಕೊಂಡು ಕಾಯ್ತಾ ಕುಂತಿದ್ವಿ. ಅಚ್ಚೇ ದಿನಗಳು ಇನ್ನೇನು ಬರಬಹುದು, ಈಗ ಬರಬಹುದು, ಆಗ ಬರಬಹುದು ಅಂತ ಕಾಯ್ತಾ ಕುಂತಿರೋವಾಗಲೇ ಕತ್ತು ಎತ್ತಿ ನೋಡುದ್ರೆ ಈ ಅಸಾಮಿ ದೇಶ ಸುತ್ತೋಕೆ ನಮ್ಮ ತಲೇ ಮೇಲೆ ಇಮಾನ ಬುಟ್ಕೊಂಡು ಹೊಂಟುಬುಡೋದಾ.. ಹೋಗ್ಲಿ ದೇಶಗಳನ್ನೆಲ್ಲಾ ಸುತ್ಕೊಂಡು ನಮ್ಮ ದೇಶಕ್ಕೆ ಒಳ್ಳೆದಾಗೋ ಹಾಗೇ ಏನೋ ಮಾಡ್ಕೊಂಡು ಬರಲಿ ಅಂತ ಕಾಯೋರು ನಾವು ಕಾಯ್ತಾನೆ ಕುಂತಿದ್ವಿ.
ದೇಶಕ್ಕೆ ವಾಪಸ್ಸು ಬರೋವಾಗ ಈವಪ್ಪಾ ತರೋ ಕಪ್ಪು ಹಣದಲ್ಲಿ ನಮಗೂ ಒಂದಿಷ್ಟು ಪಾಲು ಬತ್ತದೇ ಅಂತ ಮಡಕೆ ಒಳಗೆ ಮಡಿಚಿ ಇಟ್ಟಿದ್ದ ದುಡ್ಡನ್ನೆಲ್ಲಾ ತೆಗೆದು ಆಧಾರ್ ಕಾರ್ಡು, ಹಸ್ರು ಕಾರ್ಡು ತಗೋಂಡು ಬ್ಯಾಂಕ್‌ ಗೆ ಹೋಗಿ ನಮ್ಮದೂ ಒಂದು ಅಕೌಂಟ್‌ ಮಾಡ್ಸಿ ಪಾಸ್‌ಬುಕ್ ತಂದು ಅದೇ ಮಡಕೆ ಒಳಗೆ ಬಚ್ಚಿಟ್ವಿ. ಅಕೌಂಟ್‌ಗೆ ದುಡ್ಡೂ ಬರಲಿಲ್ಲ ಇತ್ಲಾಗೇ ಅಚ್ಚೇ ದಿನನೂ ಬರಲಿಲ್ಲ. ಇದಕ್ಕಿಂದಂಗೆ ಒಂದಿನ ನಮ್ಮ ಮನೆ ಕಪ್ಪು ಬಿಳುಪು ಟೀವಿಲಿ ಕಾಣಿಸ್ಕೊಂಡ ಈವಪ್ಪಾ "ಸಾವಿರ ಐನೂರ ನೋಟುಗಳನ್ನು ನಿಷೇದ ಮಾಡ್ತೀವ್ನಿ, ನಿಮ್ಮ ಹಟ್ಟಿಗಳಲ್ಲಿ ಮಡಚಿಟ್ಟಿರೋ ದುಡ್ಡೆಲ್ಲಾ ತಂದು ಬ್ಯಾಂಕ್ಗೆ ಕಟ್ಬುಡಿ" ಅಂದುಬಿಡೋದಾ. ಅಯ್ಯೋ ಶಿವಾ, ಅಕೌಂಟ್‌ಗೆ ದುಡ್ಡು ಹಾಕ್ತಿನಿ ಅಂದೋನು, ಈಗ ನೀವೇ ನಿಮ್ಮ ಅಕೌಂಟ್‌ಗೆ ದುಡ್ಡು ಹಾಕೋಳಿ ಅಂತವ್ನಲ್ಲಾ ಇದೇನಾ ಅಚ್ಚೇ ದಿನ ಅಂದ್ರೆ ಅಂತ ಅವತ್ತು ಅನುಮಾನ ಬಂತು ನೋಡಿ.
ಜಿಪುಣ ಗಂಡ, ಕುಡುಕ ಗಂಡ, ಸೋಮಾರಿ ಮಕ್ಕಳು ಕಾಣದಂಗೆ ಅಚ್ಚಿಟ್ಟು ಬಚ್ಚಿಟ್ಕೊಂಡು ಹೆಂಗೂ ಸಂಸಾರ ಮಾಡ್ತಿದ್ದ ಹೆಣ್ಣುಮಕ್ಕಳು ತಮ್ಮ ಗುಪ್ತನಿಧಿನ ಹೊರಗೆ ತೆಗೆಯೋ ಥರ ಆಗೋಯ್ತಲ್ಲ ಶಿವಾ, ಗಂಡ ಮಕ್ಳುಗೆ ಗೊತ್ತಾಗೆ ಅವರು ಅದುನ್ನು ಕಿತ್ಕೊಂಡು ತಿನ್ಕೋಂಡ್ ಮೇಲೆ  ಪಾಪ ಈ ಹೆಂಗುಸ್ರು ಇಂಥಾ ಕಾನೂನು ತಂದೋನ್ ಬಾಯಿಗೆ ಮಣ್ಣಾಕ ಅಂತ ಮನಸೊಳಗೆ ಬೈಯ್ಕೊಂಡು ಸುಮ್ಮನಾದ್ರು. ಓದ್ಕೊಂಡಿರೋ ಮಂದಿ ಒಂದಷ್ಟು ಜನ ಇದು ಸರಿ, ಇದು ತಪ್ಪು ಅಂತ ಟ.ವಿ ಒಳಗೆ ಕೂತ್ಕೊಂಡು ಬಿಸ್ಲೇರಿ ನೀರು ಕುಡ್ಕೊಂಡು ವಾದ ಮಾಡಿ ಸುಸ್ತಾದ್ರು. ಅಷ್ಟೋ ಇಷ್ಟು ಪುಡಿಗಾಸು ಇಟ್ಟಿದ್ದವರು ಮಾತ್ರ ದಿನಗಟ್ಟಲೇ ಬ್ಯಾಂಕುಗಳ ಮುಂದೆ ಕ್ಯೂ ನಿಂತಿದ್ರೆ ವಿನಾಃ, ಕೊಳ್ಳೆ ಹೊಡೆದು ಕೋಟೆ ಕಟ್ಕೊಂಡಿರೋ ದೊಡ್ಡಮಂದಿ ಯಾರೂ ಬ್ಯಾಂಕಿಗೆ ಬರಲೇ ಇಲ್ಲ. ಹಾಗಾದರೆ ಬದಲಾಯಿಸಕೊಳ್ಳೋಕೆ ಅವರ ಹತ್ರ ಒಂಚೂರು ದುಡ್ಡೇ ಇರಲಿಲ್ಲವೇನೋ ಪಾಪಾ ಅಂತ ಅಂದ್ಕೋಡ್ರು ಅಚ್ಚೇ ದಿನಕ್ಕೆ ಕಾಯ್ತಾ ಇದ್ದ ಹಳ್ಳಿ ಜನ. ನೋಟು ಪ್ರಿಂಟ್‌ ಮಾಡುವ ಜಾಗದಿಂದಲೇ ನೇರವಾಗಿ ದೊಡ್ಡವರ ಮನೆಗೆ ಹೊಸ ನೋಟುಗಳು ಹೋಗಿದ್ದು ಬಿಸಿಲಲ್ಲಿ ಬ್ಯಾಂಕ್‌ ಮುಂದೆ ನಿಂತಿದ್ದ ಪಾಪದ ಆಮ್ ಆದ್ಮಿಗಳಿಗೆ ಗೊತ್ತೇ ಆಗಲಿಲ್ಲ.
ಏನೋ ನಮ್ಮ ದುಡ್ಡು ನಮ್ಮ ಅಕೌಂಟಿಗೆ ತಾನೆ ಹಾಕೋಳೋಕೆ ಹೇಳಿದಾನೆ, ಹೋಗ್ಲಿ ಬಿಡು ಬೇಕಾದಾಗ ತಗೊಂಡ್ರಾಯಿತು ಅಂತ ಜನಗಳೂನು ಅಲ್ಲಿ ಇಲ್ಲಿ ಇಟ್ಟಿದ್ದ ದುಡ್ಡೆಲ್ಲಾ ತಂದು ಬ್ಯಾಂಕಿಗೆ ಕಟ್‌ಬಿಟ್ರು. ಈಗ ಅದೇ ದುಡ್ಡ ವಾಪಸ್ ತಗೋಳೋಕೆ ಬ್ಯಾಂಕ್ಗೆ ಹೋದ್ರೇ ಅಲ್ಲಿನ ರೂಲ್ಸು ಗಳನ್ನ ಕೇಳಿಬಿಟ್ರೆ, ದಾರ ಕಟ್ಟಿ ನೇತಾಕಿರೋ ಪೆನ್‌ ನ ತಗೋಂಡು ಕಿವಿಗೆ ಚುಚ್ಕೋಬುಡುನಾ ಅನ್ನಿಸ್ತಿದೆ ಶಿವಾ... ನಮ್ಮ ದುಡ್ಡು ನಾವು ತಗೋಳೋಕೆ  ಚಾರ್ಜು ಕೊಡಬೇಕಂತೆ, ಅದೇನೋ ಡಿಜಿಟಲ್ ಮಾಡ್ಕೋಳಿ ಅಂತ ಟೀವಿ ಲಿ ಬಂಬಡ ಬಡ್ಕೊಂಡ ಪುಣ್ಯಾತ್ಮ, ಈಗ ನಾವು ಏನೇ ವ್ಯವಹಾರ ಮಾಡುದ್ರುವೇ ಅದುಕ್ಕೆ ಚಾರ್ಜು ಮಾಡ್ತಾನಂತೆ.. ಇದೇನಾ ಶಿವಾ ಅಚ್ಚೇ ದಿನ ಅಂದ್ರೆ... ?

ನಿಮ್ಮಟ್ಟಿಗಳಲ್ಲಿರೋ ಗ್ಯಾಸ್ ಗೆ ಸಬ್ಸಿಡಿ ಬುಟ್‌ಬುಡಿ ಅಂತ ಬೆಳಿಗ್ಗೆಯಿಂದ ಸಂಜೆ ತನಕ ಈವಪ್ಪಾ ಟೀವಿಲಿ ಬಂದು ಬಂದು ಹೇಳಿದ. ಇವನ ಮಾತು ಕೇಳಿ, ಖುಷಿಯಿಂದ ಎಷ್ಟೋ ಜನ ಸಬ್ಸಿಡಿ ಬಿಟ್‌ಬುಟ್ರಂತೆ, ಆದರೆ ಅವರೆಲ್ಲಾ ಅತ್ಲಾಗೆ ಶ್ರೀಮಂತ್ರೂ ಅಲ್ಲಾ ಇತ್ಲಾಗೆ ಬಡವರು ಅಲ್ಲಾ ಅನ್ನೋ ಹಂಗೆ ಇರೋರು ಅಂತ ಅದ್ಯಾರೋ ಸರ್ವೇ ಮಾಡಿ ಹೇಳಿದಾರೆ. ಹಾಗಾದರೆ ಕೋಟಿ ಕೋಟಿ ಹೊಡೆಯೋ ರಾಜ್ಕೀಯದೋರು ಎಷ್ಟು ಜನ ಸಬ್ಸಿಡಿ ಬುಟ್ಟವರೇ ಶಿವಾ.. ಬಡವರು ಸಬ್ಸಿಡಿ ತಗೋಂಡ್ರೂನು ಅರ್ಧ ದುಡ್ಡಾದ್ರು ಕೊಟ್ಟು ಗ್ಯಾಸ್‌ ತಗೋತಾವ್ರೆ, ಆದರೆ ಈ ಮಿನಿಸ್ಟ್ರು ಗಳು, ಎಮ್ಮೆಲ್ಲೇಗಳು, ಎಂಪಿಗಳು ಗೌರ್ಮೆಂಟ್‌ ದುಡ್ಡಲ್ಲೇ ಪುಕಸಟ್ಟೇ ಬಳಸ್ತಿಲ್ಲಾವಾ ಶಿವಾ ? ಇದೇನಾ ಅಚ್ಚೇ ದಿನ ಅಂದ್ರೇ..?

ಜನಸಾಮನ್ಯರು ಮಾಡೋ ಪ್ರತಿ ವ್ಯವಹಾರಕ್ಕೂ ತೆರಿಗೆ ಅಂತೆ, ಆದರೆ ಇವರ ರಾಜಕೀಯ ಪಕ್ಷಗಳಿಗೆ ಕೊಡೋದೇಣಿಗೆಗೆ ಯಾವ ತೆರಿಗೇನೂ ಇಲ್ವಂತೆ.. ಇದೇನು ನ್ಯಾಯ ಶಿವಾ..

ಅಚ್ಚೇದಿನ ಅಂದ್ರೆ ಒಳ್ಳೇದಿನ ಅನ್ನೋ ಅರ್ಥ ಕೋಟಿ ಕೋಟಿ ಕೊಳ್ಳೆ ಹೊಡೆದು ಲೂಟಿ ಮಾಡ್ತಿರೋರಿಗೆ ಮಾತ್ರ ಶಿವಾ, ಮಾಮೂಲಿ ಜನಕ್ಕೇ ಅಚ್ಚೇದಿನ ಅಂದ್ರೆ "ದುಬಾರಿ ದಿನ" ಅಂತ ಈಗಲಾದ್ರು ಅರ್ಥ ಆಯಿತಾ ಶಿವಾ....?

-ಕನ್ನಡ ವೆಂಕಿ, ರಾಮನಗರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು