ದೇವಸ್ಥಾನದೊಳಗಿನ ಬಿಕ್ಷುಕರು..


ಮನುಷ್ಯನಿಗೆ ಜೀವನದಲ್ಲಿ ಬೇಸರವೆನಿಸಿದಾಗ ಅಥವಾ ಕಷ್ಟಗಳು ಬೆನ್ನತ್ತಿದಾಗ ಮನಸ್ಸಿಗೆ ಶಾಂತಿ ಕಂಡುಕೊಳ್ಳುವ ಸಲುವಾಗಿ ದೇವಸ್ಥಾನಗಳ ಮೊರೆ ಹೋಗುವುದು ಸಾಮಾನ್ಯ. ಇಲ್ಲಿ ಆಸ್ತಿಕತೆ ಅಥವಾ ನಾಸ್ತಿಕತೆಯ ಪ್ರಶ್ನೆ ಬೇಡ ಆದರೆ ದೇವಸ್ಥಾನಗಳಿಗೆ ತೆರಳಿ ಏಕಾಂತದಲ್ಲಿ ಸುಮ್ಮನೆ ಸ್ವಲ್ಪ ಸಮಯ ಕಳೆದರೆ ನೊಂದ ಮನಸ್ಸಿಗ ಸಾಂತ್ವನ ಸಿಗುವುದು ನಿಜ. ಇದು ಭಕ್ತಿಯಿಂದಲೂ ಇರಬಹುದು, ದೇವರ ಪವಾಡವೂ ಇರಬಹುದು ಅಥವಾ ದೇವಸ್ಥಾನದ ಪರಿಸರದಲ್ಲಿನ ವೈಜ್ಞಾನಿಕ ಕಾರಣಗಳಿಂದಾಗಿಯೂ ಇರಬಹುದು. ಹೇಗೆ  ಎಂಬ ಪ್ರಶ್ನೆ ಗಿಂತ ಕೊಂಚವಾದರು ನೆಮ್ಮದಿ ದೊರಕಿತೆ ಎಂಬುದು ಮುಖ್ಯ.
ಇಂಥ ಕಾರಣಕ್ಕಾಗಿಯೇ ಹಲವಾರು ಜನ ದೇವಸ್ಥಾನಗಳಿಗೆ ಬರುತ್ತಾರೆ. ಆದರೆ ದೇವಸ್ಥಾನದ ಪರಿಸರ ನೆಮ್ಮದಿ ಅರಸಿ ಬರುವವರ ತಾಳ್ಮೆಗೆಡಿಸುವಂತೆ ಇದ್ದರೆ ಅದರ ಪರಿಣಮ ಏನಾಗಬಹುದು ಎಂಬುದನ್ನು ಯೋಚಿಸಿ. ನಾನು ದೇವರ ವಿರೋಧಿಯಲ್ಲ, ದೇವ ಬಗೆಗೆ ಒಂದು ಹಂತದ ಭಕ್ತಿ ನನಗೂ ಇದೆ ಹಾಗು ಮನಸ್ಸಿಗೆ ಶಾಂತಿ ಬಯಸಿ ದೇವಸ್ಥಾನಗಳಿಗೆ ಹೋಗುವ ಅನೇಕಾನೇಕರಲ್ಲಿ ನಾನೂ ಸಹ ಒಬ್ಬ.  ಆದರೆ ಇಂದಿನ ದೇವಸ್ಥಾನಗಳು ಶಾಂತಿ ನೆಮ್ಮದಿ ಬಯಸಿ ಬರುವ ಭಕ್ತಾದಿಗಳಿಗೆ ಪೂರಕವಾಗಿ ಇವೆಯೇ ಎಂಬುದು ನಾವು ಯೋಚಿಸಬೇಕಾದ ವಿಷಯ.
ಹಲವು ದೇವಸ್ಥಾನಗಳು ಆಧ್ಯಾತ್ಮಿಕ ಕೇಂದ್ರಗಳಾಗಿ ಉಳಿದಿಲ್ಲ ಹಾಗು ಇವುಗಳು ವಾಣಿಜ್ಯ ಹಾಗು ವ್ಯವಹಾರಿಕ ಸ್ಥಳಗಳಾಗಿವೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.ಭಕ್ತಾದಿಗಳಿಂದ ಹಣ ಪೀಕುವುದರಲ್ಲೇ ನಿರತರಾಗಿರುವ ದೇವಸ್ಥಾನದ ಸಿಬ್ಬಂದಿಗಳಿಗೆ ತಾವು ದೇವರ ಸನ್ನಿಧಿಯಲ್ಲಿ ಇದ್ದೇವೆ ಎಂಬ ಕನಿಷ್ಟ ಜ್ಞಾನವೂ ಇಲ್ಲದಾಗಿದೆ. ಈ ವಿಷಯದ ಬಗ್ಗೆ ನಾನು ಪ್ರತ್ಯಕ್ಷವಾಗಿ ಕಂಡ ಕೆಲವು ಉದಾಹರಣೆಗಳು ಇಲ್ಲಿವೆ ನೋಡಿ:
ಬಹಳ ದೂರದ ಊರುಗಳಿಂದ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ. ದೇವರ ದರ್ಶನಕ್ಕೆ ಹಣ ಕೊಟ್ಟವರು ದೇವರ ದರ್ಶನವನ್ನು ಹೆಬ್ಬಾಗಿಲಿನ ಮೂಲಕವೇ ಮಾಡಬಹುದು. ಹಣ ಕೊಡಲಾಗದವರು ಹಲವು ಸುತ್ತುಗಳ ಸರತಿ ಸಾಲುಗಳನ್ನು ಸುತ್ತಿಕೊಂಡೇ ಬರಬೇಕು. ದರ್ಶನಕ್ಕೆ ಜನಸಂದಣಿ ಇಲ್ಲದಿಸ್ದರೂ ಸಹ ಈ ಸರತಿ ಸಾಲು ತಪ್ಪುವುದಿಲ್ಲ. ವಯಸ್ಸಾದವರು, ಗರ್ಭಿಣಯರು ಮತ್ತು ಮಕ್ಕಳುಗಳಿಗೂ ಯಾವುದೇ ವಿನಾಯಿತಿ ಇಲ್ಲ ಇದು ಹಲವು ದೇವಸ್ಥಾನಗಳಲ್ಲಿಯೂ ನಡೆಯುವ ಪದ್ಧತಿ.
ಹಣ ಕೊಟ್ಟವರಿಗೆ ದೇವ ತ್ವರಿತ ದರ್ಶನ, ಬಡವರು ದೇವರನ್ನು ನೋಡಲು ಇಲ್ಲೂ ಕಷ್ಟ ಪಡಲೇಬೇಕು ಹಾಗು ಗಂಟೆಗಟ್ಟಲೆ ಕಾಯಲೇಬೇಕು. ಆಗೋ ಹೀಗೋ ದರ್ಶನ ಮುಗಿಸಿ ಹೊರಗಡೆ ಬರುವಾರ ಅಲ್ಲೊಬ್ಬ ತೀರ್ಥ ಹಂಚುತ್ತಿರುತ್ತಾನೆ, ಅವನು ಕೈಗೆ ತೀರ್ಥ ಹಾಕುವಾಗ ಮಂತ್ರ ಹೇಳುವ ಬದಲು "ಕಾಣಿಕೆ ಹಾಕಿ" ಅನ್ನುತ್ತಾನೆ. ಭಕ್ತಿಯಿಂದ ತೀರ್ಥ ನೀಡುವ ಬದಲು ಕಾಣಿಕೆ ಸಂಗ್ರಹಿಸುವ ಕಡೆಗೆ ಅವನ ಗಮನ‌.
ನಾನು ಭೇಟಿ ನೀಡಿದ್ದ ಒಂದು ದೇವಸ್ಥಾನದಲ್ಲಿ, ದೇವಸ್ಥಾನದ ಹೊರಗೆ ಇರುವ ಬಸವಣ್ಣನ ಪೂಜೆಗೆ ನಿಂತರೆ ಅಲ್ಲಿಯೂ ಇದೇ ಮಾತು "ಕಾಣಿಕೆ ಹಾಕಿ". ಕರಡಿಯ ಚರ್ಮದ ಚಾದರ ಹಿಡಿದ ವ್ಯಕ್ತಿಯೊಬ್ಬ ಭಕ್ತರ ತಲೆಗೆ ಅದನ್ನು ಮುಟ್ಟಿಸುತ್ತಾ ಕಾಣಿಕೆ ಹಾಕಿ ಅಂತ ಕೂಗುತ್ತಾನೆ. ಕಾಣಿಕೆ ಹಾಕದವರಿಗೆ ಆ ಚರ್ಮದಲ್ಲೆ ತಲೆಯ ಮೇಲೆ ಸ್ವಲ್ಪ ಜೋರಾಗೇ ಮೊಟಕುತ್ತಾನೆ.ಅದು ಬಸವಣ್ಣನ ಪ್ರಸಾದವೆಂದು ತಿಳಿದು ಮುಂದೆ‌ ಸಾಗಲೇಬೇಕು.
ತಮಿಳುನಾಡಿನ ವೆಲ್ಲೂರಿನ ಒಂದು ಪ್ರಸಿದ್ದ ದೇವಸ್ಥಾನಕ್ಕೆ ಹೋಗಿದ್ದೆವು, ಶುಕ್ರವಾರವಾದ್ದರಿಂದ ಅಷ್ಟೇನು ಜನದಟ್ಟಣೆ ಇರಲಿಲ್ಲ. ಆದರೂ ಸಹ ಸುಮಾರು 1 ಕಿ.ಮೀ ಸುತ್ತಬೇಕಾಯಿತು. ಇನ್ನೇನು ದೇವಸ್ಥಾನದ ಮುಂಬಾಗಿಲು ಬಂತು ಎನ್ನುವಾಗ ಅಲ್ಲೊಬ್ಬ ದೂರ್ತ (ಸೆಕ್ಯೂರಿಟಿ ಗಾರ್ಡ್) ನಮ್ಮನ್ನು ಒಂದು ಖಾಲಿ ಮನೆಯೊಳಕ್ಕೆ ಕೂಡಿಹಾಕಿದ. ಇಲ್ಲಿ 2 ಘಂಟೆ ಕಾದ ನಂತರವೇ ನಿಮಗೆ ದೇವರ ದರ್ಶನ ಎಂದು ಹೇಳಿದ. ಅಯ್ಯೋ ಮತ್ತೇ ಬೇರೆ ದಾರಿ ಇಲ್ಲವೇ ಎಂದಾಗ ತಕ್ಷಣ ಒಬ್ಬರಿಗೆ 100 ರೂ ಕೊಟ್ಟು ವಿಶೇಷ ದರ್ಶನದ ಟಿಕೇಟ್ ತೆಗೆದುಕೊಳ್ಳಿ ಅಂದ. ಇದೇನು ಇಡೀ ದೇವಸ್ಥಾನವೇ ಖಾಲಿ ಖಾಲಿ ಇದೆ, ಆದರೂ ಈ ಕ್ಯೂ ಹಾಗು ಕಾಯುವಿಕೆ ಯಾಕೆ ಎಂದು ಜೋರು ಮಾಡಿದಾ, ಎಲ್ಲರೂ ಉಚಿತವಾಗಿ ದರ್ಶನ ಮಾಡಿಕೊಂಡರೆ, ನಾವು ದುಡ್ಡು ಮಾಡುವುದು ಹೇಗೆ ? ಎಂದ ಅಲ್ಲಿದ್ದ ಮತ್ತೊಬ್ಬ ಅಸಾಮಿ. ಜನರಿಲ್ಲದಿದ್ದರೂ ಸಹ ಸುಮಾರು 1 ಘಂಟೆ ಕಾಯಬೇಕಾದ ಪರಿಸ್ಥಿತಿ.
ತಿರುಪತಿಯ ಒಂದು ದೇವಸ್ಥಾನದಲ್ಲಿ ದೇವರ ದರ್ಶನಕ್ಕೆಂದು ಗರ್ಭಗುಡಿಯ ಬಾಗಿಲಿಗೆ ಹೋದಾಗಲೇ ಅಲ್ಲಿನಪೂಜಾರಿ ಹೆಸರೇಳಿ ಹೆಸರೇಳಿ ಎಂದು ಕೂಗುತ್ತಿದ್ದ, ಪಾಪ ಭಕ್ತರಿಗೆ ಅವನ ಉಪಾಯ ತಿಳುಯದೇ ಮುಗ್ದವಾಗಿ ತಮ್ಮ ಹಾಗು ತಮ್ಮ ಕುಟುಂಬದ ಹೆಸರು ಹೇಳುತ್ತಿದ್ದರು, ಅದನ್ನು ಮಂತ್ರದಂತೆ ಪಠಿಸಿ 50 ರೂಪಾಯಿ ಕಾಣಿಕೆ ಹಾಕಿ ಅಂತ ನೇರವಾಗಿ ಕೇಳುತ್ತಿದ್ದ. ಇದನ್ನು ತಿಳಿಯದೆ ಎಷ್ಟೋ ಜನ ಕಾಣಿಕೆ ಹಾಕದೇ ಮುಂದೆ ಸಾಗಿದರೆ, ತಾನು ದೇವರ ಮುಂದೆ ನಿಂತಿದ್ದೇನೆ ಎಂಬುದನ್ನು ಮರೆತು ಆ ಪೂಜಾರಿ ಭಕ್ತರನ್ನು ಬಾಯಿಗೆ ಬಂದಂತೆ ಬೈದು ತನ್ನದೇ ಶೈಲಿಯಲ್ಲಿ ಅರ್ಚನೆ ಮಾಡುತ್ತಿದ್ದ.

ಇದು ಕೆಲವೇ ಕೆಲವು ನಿದರ್ಶನಗಳಷ್ಟೇ, ಇದೇ ರೀತಿಯ ಅನುಭವ ಬಹುತೇಕರಿಗೆ ಆಗಿರುತ್ತದೆ. ಕೇವಲ ಹಣ ಕೀಳುವುದೇ ಇವರ ಉದ್ದೇಶವಾಗಿರುತ್ತದೆ ಹಾಗು ಅಲ್ಲಿನ ದೇವರ ಮೇಲೆ ತಮಗೆ ಕೊಂಚವೂ ಭಯ ಭಕ್ತಿ ಇಲ್ಲ ಎಂಬುದನ್ನು ತಾವೇ ತಮ್ಮ ವರ್ತನೆಯ ಮೂಲಕ ತೋರಿಸುತ್ತಾರೆ. ದರ್ಶನಕ್ಕೆಂದು ನಿಂತು ದೇವರ ಮುಂದೆ ಬಂದಾಗ ಪ್ರಾಣಿಗಳನ್ನು ತಳ್ಳುವ ಹಾಗೆ ತಳ್ಳುವುದು ಸಹ ಅವರ ಅಮಾನವೀಯ ವರ್ತನೆಗೆ ಸಾಕ್ಷಿ ಎಂದು ಹೇಳಬಹುದು.

ದೇವಸ್ಥಾನದ ಆಡಳಿತ ಮಂಡಳಿಗಳೂ ಸಹ ವಾಣಿಜ್ಯ ಉದ್ದೇಶವನ್ನೇ ಗುರಿಯಾಗಿಸಿಕೊಂಡಿದ್ದಾರೆಯೇ ಎಂಬ ಅನುಮಾನ ದೇವಸ್ಥಾನಗಳಿಗೆ ಹೋಗುವ ಪ್ರತಿಯೊಬ್ಬರಿಗೂ ಮೂಡದೇ ಇರದು. ಏಕೆಂದರೆ ದೇವಸ್ಥಾನದಲ್ಲಿ ಭಕ್ತಿಯ ಬಗೆಗೆ ಅಥವಾ ಭಕ್ತರಿಗೆ  ಸಿಗಬಹುದಾದ ಸೌಲಭ್ಯಗಳ ಬಗೆಗೆ ಪ್ರಚಾರ ಮಾಡುವುದಕ್ಕಿಂತ ದಿನಸಿ ಅಂಗಡಿಯಲ್ಲಿ ದರಪಟ್ಟಿ ಹಾಕುವಂತೆ ಪ್ರತಿಯೊಂದು ಸೇವೆಗಳಿಗೆ ಎಷ್ಟೆಷ್ಟು ದರ ಎಂಬುದನ್ನೇ ಎಲ್ಲಾ ಕಡೆಯೂ ಎದ್ದು ಕಾಣುವಂತೆ ಹಾಕಿರುತ್ತಾರೆ. ಆದರೆ ಶೌಚಾಲಯ ವ್ಯವಸ್ಥೆಯ ಬಗ್ಗೆಯಾಗಲಿ, ಅಂಗವಿಕಲರಿಗೆ ಸಹಾಯದ ಬಗ್ಗೆಯಾಗಲಿ, ಮಹಿಳೆ ಅಥವಾ ವೃದ್ದರಿಗೆ ಸಹಾಯ ಮಾಡುವ ಬಗ್ಗೆಯಾಗಲಿ, ಅಥವಾ ಆಧ್ಯಾತ್ಮಿಕ ಚಿಂತನೆಗಳ ಬಗೆಯಾಗಲಿ ಯಾವುದೇ ಮಾಹಿತಿಯನ್ನು ಭಕ್ತರಿಗೆ ಎದ್ದು ಕಾಣುವಂತೆ ಪ್ರಕಟಿಸುವುದನ್ನು ಕಾಣಲು ಸಾಧ್ಯವೇ ಇಲ್ಲ.

ಇತ್ತೀಚೆಗೆ ಸರ್ಕಾರವೂ ಇದಕ್ಕೇ ಕೈ ಜೋಡಿಸಿದೆಯಾ ಎಂಬ ಅನುಮಾನ ನನಗೆ, ಏಕೆಂದರೆ ಹುಂಡಿಯಲ್ಲಿ ಹಾಕಿದ ಹಣ ದೇವರಿಗೆ, ಆರತಿ ತಟ್ಟೆಯಲ್ಲಿ ಹಾಕಿದ ಹಣ ಪೂಜಾರಿಗೆ ಎಂಬ ಫಲಕಗಳು ದೇವಸ್ಥಾನದ ತುಂಬಾ ರಾರಾಜಿಸುವುದನ್ನು ಕಾಣಬಹುದು.
ಇದನ್ನೆಲ್ಲಾ ನೋಡಿ ಹೊರಗೆ ಬಂದಾಗ, ದೇವಸ್ಥಾನದ ಬಾಗಿಲಲ್ಲಿ ಕೈಯೊಡ್ಡಿ ಬೇಡುವ ಬಿಕ್ಷುಕ ಎದುರಾಗುತ್ತಾನೆ. ಈ ಸಮಯದಲ್ಲಿ ನನಗೆ ವೈಯುಕ್ತಿಕವಾಗಿ ಹುಟ್ಟುವ ಪ್ರಶ್ನೆಯೆಂದರೆ ಇಲ್ಲಿ ನಿಜವಾದ ಬಿಕ್ಷುಕರು ಯಾರು ಎಂದು. ದೇವಸ್ಥಾನದ ಹೊರಗಿನ ಬಿಕ್ಷುಕ ಬಿಕ್ಷೆ ಹಾಕದಿದ್ದರೂ ತುಟಿಪಿಟಿಕೆ ಎನ್ನದೇ ಸಾಗುತ್ತಾನೆ. ಆದರೆ ದೇವಸ್ಥಾನದ ಒಳಗಿನವರು ಈ ಬಿಕ್ಷುಕನಿಗಿಂತಲೂ ಕಡೆಯಾಗಿ ವರ್ತಿಸುತ್ತಾರೆ. ಇಂಥ ದೇವಸ್ಥಾನಗಳಿಗೆ ನಿಜವಾದ ಭಕ್ತಿಯನ್ನು ಹುಡುಕಿ ಬರುವ ಭಕ್ತರನ್ನು ಗರ್ಭಗುಡಿಯ ಒಳಗೆ ಎಲ್ಲವನ್ನು ನೋಡುತ್ತಾ ಕುಂತ ದೇವರೇ ಕಾಪಾಡಬೇಕು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು