ಅಪ್ಪಂದಿರ ಶ್ರಮಕ್ಕೆ ಬೆಲೆ ನೀಡೋಣ..

ಅಪ್ಪಂದಿರ ದಿನಾಚರಣೆಯ ಈ ಸಂದರ್ಭದಲ್ಲಿ  ಎಲ್ಲ ಅಪ್ಪಂದಿರ ಪೋಟೋಗಳು ವಾಟ್ಸಪ್ ನ ಸ್ಟೇಟಸ್ ನಲ್ಲಿ ರಾರಾಜಿಸುತ್ತಿವೆ. ಈ ಕಾರಣದಿಂದಾದರೂ ಪ್ರತಿಯೊಬ್ಬರು ಅಪ್ಪಂದಿರನ್ನು ನೆನಪಿಸಿಕೊಂಡಿರುವುದು ಸಂತೋಷಕರ‌ ಸಂಗತಿ..
ಯಾವಾಗಲೂ ಅಮ್ಮಂದಿರಿಗೆ ಹೆಚ್ಚಿನ ಮಹತ್ವ ಕೊಡ್ತೇವೆ ಆದರೆ ಅಪ್ಪಂದಿರ ಶ್ರಮ ಬೆಳಕಿಗೆ ಬರುವುದೇ ಇಲ್ಲ..
ನಾವು ಅಪ್ಪನ ಸ್ಥಾನಕ್ಕೆ ಬಂದಾಗಲೇ ಅಪ್ಪನ ಕಷ್ಟ ಏನು ಅಂತ ಅರ್ಥ ಆಗೋದು.. ನನಗೂ ನನ್ನಪ್ಪನ ಅರ್ಹತೆ ಪೂರ್ಣವಾಗಿ ಅರಿವಾಗಿದ್ದು ನಾನು ಅಪ್ಪನಾದ ಮೇಲೆಯೇ..
ಅವರನ್ನು ಸಂತೋಷವಾಗಿಡಬೇಕು ಅಂತ ಏನೇಲ್ಲ ಮಾಡಬಹುದೋ ಅದೆಲ್ಲವನ್ನೂ ಮಾಡಲು ನಾನು ತಯಾರಿದ್ದೆ, ಆದರೆ ಅಪ್ಪ ಅವ್ವನ ಮನಸ್ಸುಗಳೇ ಅಂತಹವೇನೋ ಅವರು ನಮ್ಮಿಂದ ಏನನ್ನೂ ಬಯಸುವುದೇ‌ ಇಲ್ಲ.. ನಾವು ಕೊಟ್ಟಷ್ಟೇ ಪ್ರೀತಿ, ತೋರಿದಷ್ಟೇ ಮಮತೆಯನ್ನೇ ಸಂತೃಪ್ತಿಯಿಂದ ಅಪ್ಪಿಕೊಳ್ಳುವ ಹಾಗು ನಾವು ಏನೇ ಮಾಡುದರು ನಮ್ಮನ್ನು ಒಪ್ಪಿಕೊಳ್ಳುವ ಮನೋಭಾವ ಅವರದು.
ತನ್ನ ಊರು, ಮನೆ, ಹೊಲ ಗದ್ದೆಯೇ ಪ್ರಪಂಚ ಅಂತ ಅಂದುಕೊಂಡು ಬದುಕುತ್ತಿದ್ದ ನನ್ನ ಅಪ್ಪನಿಗೆ ಹೊರ ಜಗತ್ತಿನ ಆಧುನಿಕ, ಆಡಂಬರದ ಪರಿಚಯ ಮಾಡಿಸಬೇಕೆಂಬುದು ನನ್ನ ಆಸೆಯಾಗಿತ್ತು. ಟೀವಿಯಲ್ಲೇ ಎಲ್ಲವನ್ನು ನೋಡಿ ಆಶ್ಚರ್ಯಪಡುತ್ತಿದ್ದ ನಮ್ಮಪ್ಪನನ್ನು ಹಾಗೆ ನಮ್ಮ ನಮ್ಮಪ್ಪನ ಓರಗೆಯ ನಮ್ಮ ಚಿಕ್ಕಪ್ಪಂದಿರನ್ನು ಒಮ್ಮೆ ಪ್ರವಾಸಕ್ಕೆ ಕರೆದೊಯ್ದು ಬಹಳಷ್ಟು ಸ್ಥಳಗಳನ್ನು ತೋರಿಸಿ ಬಂದೆ. ಅವರ ಆಶ್ಚರ್ಯಚಕಿತ ಕಣ್ಣುಗಳಲ್ಲಿನ ಸಂತೋಷವನ್ನು ನೋಡುವುದೇ ಒಂದು ಸಂಭ್ರಮ ನಮಗೆ.
ಇವರೆಲ್ಲರಿಗೂ ಒಮ್ಮೆ ಬೆಂಗಳೂರು ತೋರಿಸಬೇಕು ಎಂಬುದು ನನ್ನ ಆಸೆಯಾಗಿತ್ತು ಆದರೆ ಸಮಯ ಕೂಡಿಬರಲೇ‌ ಇಲ್ಲ..
ಕಳೆದವಾರ ನಮ್ಮಪ್ಪ ನಮ್ಮ ಸಂಬಂಧಿಕರ ಮದುವೆಯ ನಿಮಿತ್ತ ಬೆಂಗಳೂರಿಗೆ ಬಂದಿದ್ದರು ಅವರನ್ನು ಕರೆದುಕೊಂಡು ಇಡೀ ಬೆಂಗಳೂರು ತೋರಿಸೋಣವೆಂದು ನನ್ನ ಕಾರಿನಲ್ಲಿ ಹೊರಟೆ.. ಮೊದಲಿಗೆ ನಮ್ಮಪ್ಪ ಅತಿಯಾಗಿ ಇಷ್ಟಪಡುವ ಅವರ ಕಾಲದ ರಾಜ್ಕುಮಾರನನ್ನು ತೋರಿಸಿದೆ
(ರಾಜಕುಮಾರ‌ ಸಮಾಧಿ), ಅಲ್ಲಿಂದ ಇಸ್ಕಾನ್, ಒರೆಯಾನ್ ಮಾಲ್, ಎಂ.ಜಿ ರೋಡ್, ವಿಧಾನ ಸೌದ, ಕಬ್ಬನ್ ಪಾರ್ಕ್, ಮಾರ್ಕೆಟ್, ದೊಡ್ಡಬಸನವಗುಡಿ ತೋರಿಸಿದೆ...
ಆಕಾಶದೆತ್ತರದ ಕಟ್ಟಡಗಳ, ಆ ಟ್ರಾಪಿಕ್, ಜನ ಎಲ್ಲವನ್ನೂ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದರು.‌




ಇದನ್ನ ನೋಡಿ ನನಗೆ ಒಂದು ಚಿಕ್ಕ ಮಗುವನ್ನು ಕರೆದುಕೊಂಡು ಬಂದಿದೀನೇನೋ ಎನಿಸಿತು.
ಓರೆಯಾನ್ ಮಾಲ್ ನ ಗಾಜಿನ ಕಟ್ಟಡ ನೋಡಿ ನಿಬ್ಬೆರಗಾದರು.. ಅಲ್ಲಿನ ಎಸ್ಕಲೇಟರ್ ಮೇಲಿನ ನಡಿಗೆ ಅವರಿಗೆ ಭಯ ಹುಟ್ಟಿಸಿತ್ತು. ಆದರೆ ನನ್ನ ತೋಳಿನ ಆಸರೆ ಅವರಿಗೆ ಖುಷಿ ತಂದಿತು ಎಂದೇ ಹೇಳಬಹುದು. ಬಹುಶಃ ನನಗೆ ನೆನಪಿರುವ ಹಾಗೆ ಇದೇ ಮೊದಲು ನಾನು ನನ್ನ ಅಪ್ಪನನ್ನು ತಬ್ಬಿ ಹಿಡಿದಿದ್ದು.
ನಾನು ಎಂತೆಂಥದ್ದೋ ಸಂಭ್ರಮ ಸಂತೋಷದ ಕ್ಷಣಗಳನ್ನು ಕಂಡಿದ್ದೇನೆ, ಹಲವು ಊರು ರಾಜ್ಯ ಸುತ್ತಿದ್ದೇನೆ, ರೈಲು ವಿಮಾನ ಎಲ್ಲವನ್ನು ಕಂಡಿದ್ದೇನೆ ಆದರೆ ಅದೆಲ್ಲಕ್ಕಿಂತ ಮಿಗಿಲಾದ ಸಂತೋಷ ನೀಡಿದ್ದು ಮಾತ್ರ ಈ ದಿನದ ನಮ್ಮಪ್ಪನೊಂದಿಗಿನ ತಿರುಗಾಟ.
ಅವರ ಮುಖದಲ್ಲಿನ ಸಂತೋಷ‌ ನೋಡೋದೇ ನನಗೆ ಹೆಚ್ಚು ಖುಷಿ‌ಕೊಟ್ಟಿತು.
ಇದನ್ನೆಲ್ಲಾ ಇಲ್ಲಿ ಬರೆದದ್ದು  ನಾನೇನೋ ದೊಡ್ಡ ಕೆಲಸ ಮಾಡಿದ್ದೇನೆ ಎಂದು ಬೀಗಲು ಅಲ್ಲ, ಅಪ್ಪ ಅಮ್ಮನನ್ನು ಮರೆತವರು ಹಾಗು ಅಪ್ಪ ಅಮ್ಮಂದಿರ ಕೈಗೆ ಒಂದಷ್ಟು ದುಡ್ಡು ಕೊಟ್ಟ ಮಾತ್ರಕ್ಕೆ ಜವಾಬ್ದಾರಿ ಮುಗೀತು ಅಂದುಕೊಳ್ಳೋರು ಒಂಚೂರು ಪ್ರೇರಣೆಗೊಳ್ಳಲಿ‌ ಎಂದು ಹಾಗು  ನಾವು ನೀಡುವ ಸ್ವಲ್ಪ‌ ಸಮಯ, ನಾವು ಅವರಿಗಾಗಿ ಮಾಡುವ ಚಿಕ್ಕ ಚಿಕ್ಕ ಕೆಲಸಗಳು ಅವರಿಗೆ ದೊಡ್ಡ ಖುಷಿ ಕೊಡುತ್ತವೆ ಎಂಬುದನ್ನು ತಿಳಿಸಲು.

ಇಂದಿಗೂ ನಮ್ಮ‌ಮನೆಯ ಯಜಮಾನಿಕೆ ನಮ್ಮ ಅಪ್ಪನದೇ, ಅವರಿಗೆ ಅದನ್ನು ನಿಭಾಯಿಸೋದೇ ಒಂದು ಖುಷಿ. ಅವರಿಗ್ಯಾಕೆ ಕಷ್ಟ ಕೊಡೋದು ಆರಾಮಗಿರಲಿ ಅಂತ ನಾವು ಅವರಿಗೆ ಯಾವ ಜವಾಬ್ದಾರಿಯನ್ನು ಕೊಡದೇ ಇದ್ದುಬಿಡ್ತಿವಿ ಆದರೆ ಅವರಿಗೆ ಎಲ್ಲಿಯವರೆಗೂ ಸಾಧ್ಯವಾಗುತ್ತದೆಯೋ ಅಲ್ಲಿಯವರೆಗೂ ಅವರು ಅವರಿಗಿಷ್ಟ ಬಂದಂತೆ ಇರಲು ಬಿಡಬೇಕು ಅದೇ ನಾವು ಅವರಿಗೆ ನೀಡುವ ಪ್ರೀತ ಗೌರವ ಮಮತೆ.

ಸಾಧ್ಯವಾದಾಗಲೆಲ್ಲಾ ಅಪ್ಪ ಅಮ್ಮನಿಗೆ ಸಮಯ ಕೊಡೋಣ, ಒಂದು ದಿನದ ಪ್ರವಾಸವಾದರೂ ಪರವಾಗಿಲ್ಲ‌ ಅಪ್ಪ ಅಮ್ಮನನ್ನು ಕರೆದುಕೊಂಡು ಹೋಗಿ ಹೊರ ಪ್ರಪಂಚ ತೋರಿಸೋಣ, ದಿನಕ್ಕೆ ಒಮ್ಮೆಯಾದರು ಅವರೊಂದಿಗೆ ಮಾತನಾಡಿ ಕ್ಷೇಮ ವಿಚಾರಿಸೋಣ.
ವಿಶೇಷವಾಗಿ ಅಪ್ಪನ ತ್ಯಾಗ ಶ್ರಮ ಅವರು ನಮ್ಮೊಂದಿಗೆ ಇದ್ದಾಗ ನಮಗೆ‌ ಅರ್ಥ ಆಗೋದೆ ಇಲ್ಲ, ಅಪ್ಪನನ್ನು ಕಳೆದುಕೊಂಡವರ ಮನದಾಳದ ಮಾತುಗಳನ್ನು‌ ನಾನು‌ ಕೇಳಿದ್ದೇನೆ. ಆಮೇಲೆ ಪರಿತಪಿಸುವ ಬದಲು ಈ ದೇವರುಗಳು‌ ನಮ್ಮೊಡನೆ ಇರುವಾಗಲೇ ಅವರ ಸಂತೋಷ ಹೆಚ್ಚಿಸೋಣ ಯಾಕೆಂದರೆ ನಾವೆಲ್ಲ ಇಂದು ಬದುಕಿರೋದೇ ಅಪ್ಪನ‌ ಬೆವರಿನ ಶ್ರಮದಿಂದಾಗಿ...

ಎಲ್ಲ ಅಪ್ಪಂದಿರಿಗೂ ನನ್ನ ಸಾಷ್ಟಾಂಗ ನಮಸ್ಕಾರಗಳು..
ಅಪ್ಪಂದಿರ ಶ್ರಮಕ್ಕೆ ಬೆಲೆ ನೀಡೋಣ..
-ಕನ್ನಡವೆಂಕಿ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಂಡಿತ್‌ ನೆಹರು ಪ್ರೌಢಶಾಲೆ ಗುರುವಂದನಾ ಕಾರ್ಯಕ್ರಮದ ನೆನಪು

ನನ್ನವಳು ನನ್ನೊಲವಿನ ಬೆಳಕಿವಳು..!

ವಿದ್ಯಾಗಮ‌ ಕಾರ್ಯಕ್ರಮ ಸ್ಥಗಿತದ ಹಿಂದಿನ ಕಾರಣಗಳು